ಎಲ್ಲೆಡೆ ಸಂಭ್ರಮದ ಯುಗಾದಿ ಆಚರಣೆ

KannadaprabhaNewsNetwork | Published : Apr 1, 2025 12:46 AM

ಸಾರಾಂಶ

ಯುಗಾದಿ ಪ್ರಯುಕ್ತ ರೈತರು ತಮ್ಮ ಜಮೀನುಗಳಲ್ಲಿ ನೇಗಿಲು ಹೊಡೆಯುವ ಮೂಲಕ ಕೃಷಿ ಚಟುವಟಿಕೆಗಳನ್ನು ಆರಂಭಿಸಿ ಈ ವರ್ಷವಾದರೂ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.

ಹಾವೇರಿ: ವರ್ಷದ ಮೊದಲ ಹಬ್ಬವಾದ ಯುಗಾದಿ ದಿನದಂದು ರೈತರು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಹೊಲಗಳಲ್ಲಿ ನೇಗಿಲು ಹೊಡೆಯುವ ಮೂಲಕ ಈ ವರ್ಷ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು.ಭಾನುವಾರ ಬೆಳಗ್ಗೆ ರೈತರು ತಮ್ಮ ಸಂಗಾತಿಗಳಾದ ಎತ್ತುಗಳು ಸೇರಿದಂತೆ ಎಲ್ಲ ಜಾನುವಾರುಗಳ ಮೈತೊಳೆದು ಪೂಜೆ ಸಲ್ಲಿಸಿ ಅಲಂಕರಿಸಿದ್ದರು. ಬಳಿಕ ರೈತರು ತಮ್ಮ ಜಮೀನುಗಳಲ್ಲಿ ನೇಗಿಲು ಹೊಡೆಯುವ ಮೂಲಕ ಕೃಷಿ ಚಟುವಟಿಕೆಗಳನ್ನು ಆರಂಭಿಸಿ ಈ ವರ್ಷವಾದರೂ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.ಯುಗಾದಿ ಹಬ್ಬದ ನಿಮಿತ್ತ ನಗರ, ಗ್ರಾಮೀಣ ಪ್ರದೇಶದ ಎಲ್ಲರ ಮನೆಗಳನ್ನು ಹೊಸದಾಗಿ ಸುಣ್ಣಬಣ್ಣಗಳಿಂದ ಅಲಂಕಾರ ಮಾಡಲಾಗಿತ್ತು. ಹಬ್ಬದ ದಿನ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಹೊಸ ವರ್ಷದ ಮೊದಲ ದಿನ ತಮ್ಮ ಹೊಲಗಳಲ್ಲಿ ಉಳುಮೆ ಕಾರ್ಯ ಮಾಡಿದರೆ ವರ್ಷಪೂರ್ತಿ ಉತ್ತಮವಾದ ಮಳೆ ಬೆಳೆ ಬರುತ್ತದೆ ಎಂಬ ನಂಬಿಕೆಯಿಂದ ಜಿಲ್ಲಾದ್ಯಂತ ರೈತರು ಹೊಸ ಬಟ್ಟೆ ಧರಿಸಿ ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಆಶೀರ್ವಾದ ಪಡೆದು ಬಳಿಕ ಹೊಲಗಳಿಗೆ ತೆರಳಿ ಹಣ್ಣುಕಾಯಿ ಹೊಡೆದು ಪೂಜೆ ಸಲ್ಲಿಸಿ ನೇಗಿಲು ಹೊಡೆದರು. ಈ ವರ್ಷವಾದರೂ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಸಂಭ್ರಮದ ರಥೋತ್ಸವ: ಯುಗಾದಿ ಹಬ್ಬದ ನಿಮಿತ್ತವಾಗಿ ನಗರದ ಪುರಸಿದ್ದೇಶ್ವರ ಜಾತ್ರಾ ಮಹೋತ್ಸವ ಭಾನುವಾರ ಸಂಜೆ ಸಂಭ್ರಮದಿಂದ ಜರುಗಿತು. ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.ವಿವಿಧ ಹೂವಿನ ಮಾಲೆ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ರಥದಲ್ಲಿ ಪುರಸಿದ್ದೇಶ್ವರ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಜೈ ಘೋಷದೊಂದಿಗೆ ರಥೋತ್ಸವ ಎಳೆಯಲಾಯಿತು. ಪುರಸಿದ್ದೇಶ್ವರ ದೇವಸ್ಥಾನದ ಬಳಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಶಿವಬಸಪ್ಪ ಜಾಬೀನ್, ಪ್ರಭು ಹಿಟ್ನಳ್ಳಿ, ಶಿವಲಿಂಗಪ್ಪ ಕಲ್ಯಾಣಿ, ವಿರುಪಾಕ್ಷಪ್ಪ ಹತ್ತಿಮತ್ತೂರ, ವಿಜಯಕುಮಾರ ಚಿನ್ನಿಕಟ್ಟಿ, ಅಶೋಕ ಮುದಗಲ್ಲ, ಗುರಣ್ಣ ಸೀಮಿಕೆರಿ ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.ಭೂತಾಯಿಗೆ ಪೂಜೆ ಸಲ್ಲಿಸಿ ಯುಗಾದಿ ಆಚರಣೆ

ಹಿರೇಕೆರೂರು: ವರ್ಷದ ಮೊದಲ ಹಬ್ಬವಾದ ಯುಗಾದಿ ದಿನದಂದು ರೈತರು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಹೊಲಗಳಲ್ಲಿ ನೇಗಿಲು ಹೊಡೆಯುವ ಮೂಲಕ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು.ಯುಗಾದಿ ಹಬ್ಬದ ನಿಮಿತ್ತ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲರ ಮನೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಹೊಸ ವರ್ಷದ ಮೊದಲ ದಿನ ತಮ್ಮ ಹೊಲಗಳಲ್ಲಿ ಉಳುಮೆ ಕಾರ್ಯ ಮಾಡಿದರೆ ವರ್ಷಪೂರ್ತಿ ಉತ್ತಮವಾದ ಮಳೆ ಬೆಳೆ ಬರುತ್ತದೆ ಎಂಬ ನಂಬಿಕೆಯಿಂದ ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಆಶೀರ್ವಾದ ಪಡೆದು ಬಳಿಕ ಹೊಲಗಳಿಗೆ ಹೋಗಿ ಪೂಜೆ ಸಲ್ಲಿಸಿ, ಹಣ್ಣುಕಾಯಿ ನೈವೇಧ್ಯ ಮಾಡಿ ನೇಗಿಲು ಹೊಡೆದರು.

ಹಬ್ಬದ ಅಂಗವಾಗಿ ಹೋಳಿಗೆ ಮುಂತಾದ ಮೃಷ್ಟಾನ್ನ ಭೋಜನವನ್ನು ತಯಾರಿಸಿ ಸಾಮೂಹಿಕವಾಗಿ ಮನೆಗಳಲ್ಲಿ ಕುಳಿತು ಸವಿದರು.

Share this article