ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ ಪರಿಹಾರ ದರ ಆದೇಶ ಜಾರಿಗೊಳಿಸಿ ನಮ್ಮ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ.ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ.ನಿಂದ 524.256 ಮೀ.ಗೆ ಏರಿಸಲು ಅನುಮತಿ ನೀಡಲಾಗಿದೆ. ಜಲಾಶಯದ ಎತ್ತರ ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75000 ಎಕರೆಗೂ ಅಧಿಕ ಜಮೀನು ಮುಳುಗಡೆಯಾಗುವ ಸಂಭವವಿದೆ. ಭೂಸ್ವಾಧೀನ ಪ್ರಕ್ರಿಯೆ ಒಂದೇ ಹಂತದಲ್ಲಿ ಪೂರ್ಣಗೊಳಿಸಲು, ಒಪ್ಪಿತ ಐತೀರ್ಪಿನ ಮೂಲಕ ಭೂಸ್ವಾಧೀನದ ದರವನ್ನು ಸೆ.16ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ವಿವರಿಸಿದ್ದಾರೆ.
ಯೋಜನೆಗೆ ಮುಳುಗಡೆಯಾಗುವ ಭೂಮಿ ವ್ಯಾಪ್ತಿಯ ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ ಒಣಭೂಮಿಯ ಎಕರೆಯೊಂದಕ್ಕೆ ₹30 ಲಕ್ಷ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದ್ದು, ಅದರಂತೆ ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದೆ. ಭೂಸ್ವಾಧೀನ, ಪುನರ್‌ನಿರ್ಮಾಣ, ಪುನರ್ವಸತಿ ಕಾರ್ಯಕ್ರಮಗಳಿಗೆ ಅಗತ್ಯವಿರುವ ಹೆಚ್ಚುವರಿ ಸುಮಾರು ₹75 ಸಾವಿರ ಕೋಟಿ ಮೊತ್ತವನ್ನು ನಾಲ್ಕು ಆರ್ಥಿಕ ವರ್ಷದೊಳಗೆ ಭರಿಸಲು ವಾರ್ಷಿಕವಾಗಿ ಸುಮಾರು ₹18 ಸಾವಿರ ಕೋಟಿ ಅನುದಾನವನ್ನು ಜಲಸಂಪನ್ಮೂಲ ಇಲಾಖೆಗೆ ಬಜೆಟ್‌ನಲ್ಲಿ ಒದಗಿಸುವುದಾಗಿ ತಿಳಿಸಲಾಗಿದೆ ಎಂದರು.2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪರಿಹಾರದ ಮೊತ್ತ ಒಣಭೂಮಿಗೆ ₹20 ಲಕ್ಷ, ನೀರಾವರಿಗೆ ₹24 ಲಕ್ಷ ತೀರ್ಮಾನ ಮಾಡಿತ್ತು. ಆದರೆ ರೈತರು ಒಪ್ಪಿರಲಿಲ್ಲ. ಹಾಗಾಗಿ, ನಮ್ಮ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರೈತ ಸಂಘಟನೆಗಳು, ಎಲ್ಲಾ ಪಕ್ಷದ ಶಾಸಕರೊಂದಿಗೆ ಉಪ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು ಹಲವು ಸಭೆ ನಡೆಸಿ, ಅಭಿಪ್ರಾಯ ಕ್ರೂಢೀಕರಿಸಲಾಗಿತ್ತು. ಎಲ್ಲರ ಅಭಿಪ್ರಾಯದಂತೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲಾಗಿತ್ತು. ಅದರಂತೆ 9.10.2025ರಂದು ಅಧಿಕೃತ ಆದೇಶ ಹೊರಡಿಸುವ ಮೂಲಕ ನೀಡಿದ ಭರವಸೆ ಈಡೇರಿಸಲಾಗಿದೆ ಎಂದು ಹೇಳಿದ್ದಾರೆ. ನುಡಿದಂತೆ ನಡೆಯುವುದು ನಮ್ಮ ಕಾಂಗ್ರೆಸ್ ಸರ್ಕಾರ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ. ಜನರಿಗೆ ನೀಡಿದ್ದ ಭರವಸೆ ಈಡೇರಿಸಲಾಗುತ್ತಿದೆ. ಯುಕೆಪಿಯಿಂದ ಸಂತ್ರಸ್ತರಾಗಲಿರುವ ಜನತೆ ತಮ್ಮ ಪರಿಕಲ್ಪನೆಯ ಜೀವನ ಕಟ್ಟಿಕೊಳ್ಳಲು ಪಕ್ಷಿಯಂತೆ ಕಾಯುತ್ತಿದ್ದರು. ಅವರ ಹಲವು ವರ್ಷಗಳ ಹೋರಾಟ ಸಾಕಾರಗೊಳಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಅತ್ಯಂತ ಮಾನವೀಯತೆಯ ದೃಷ್ಟಿಯಿಂದ ಜನಪರ ನಿರ್ಣಯ ಕೈಗೊಂಡಿರುವುದು ರೈತ ಬಾಂಧವರಿಗೆ ಸಂತಸ ತಂದಿದೆ. ಈ ಚಾರಿತ್ರಿಕ ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ. ಶಿವಕುಮಾರ್, ಸಚಿವ ಸಂಪುಟದ ಎಲ್ಲಾ ಸಚಿವರು ಸೇರಿದಂತೆ ಇದಕ್ಕೆ ಕಾರರಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.
- ಆರ್.ಬಿ. ತಿಮ್ಮಾಪೂರ, ಅಬಕಾರಿ ಸಚಿವ