ಬರ್ರಿ-ಬರ್ರಿ ಉಳ್ಳಾಗಡ್ಡಿ ಕೆಜಿಗೆ ಬರಿ ಇಪ್ಪತ್ ರುಪಾಯಿ

KannadaprabhaNewsNetwork | Published : Jan 14, 2025 1:00 AM

ಸಾರಾಂಶ

ಧಾರವಾಡ ತಾಲೂಕಿನ ಮರೇವಾಡ ಶಾಲೆಯ ಮಕ್ಕಳು ತಮ್ಮ ಶಾಲಾವರಣದಲ್ಲಿ ಮೆಟ್ರಿಕ್ ಮೇಳ ಮತ್ತು ಸಂತೆ ಮೇಳದಲ್ಲಿ ನಾ ಮುಂದೆ ತಾ ಮುಂದೆ ಎನ್ನುತ್ತ ತಮ್ಮ ವಸ್ತುಗಳನ್ನು ಮಾರಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಧಾರವಾಡ:

ಬರ್ರಿ-ಬರ್ರಿ ಉಳ್ಳಾಗಡ್ಡಿ ಕೆಜಿಗೆ ಬರೀ ಇಪ್ಪತ್ ರುಪಾಯಿ. ತುಗೋರಿ ಟೊಮೆಟೊ ಅದಕ್ಕಂತೂ ಒಂದ್‌ ಗುಂಪಿಗೆ ಹತ್ತ ರುಪಾಯಿ. ಬೆಲ್ಲದ ಚಾ ಹತ್ತಕ್‌ ಒಂದ್‌ ಕಪ್. ಅಂಕಲ್ ತೊಗೋರಿ, ಆಂಟಿ ತೊಗೋರಿ, ಆಲೂಗಡ್ಡಿ, ಬದ್ನಿಕಾಯಿ, ಬಾಳೆ ಹಣ್ಣು ಮಾರ್ಕಟ್ ರೇಟ್‌ಗಿಂತ ಇಲ್ಲಿ ಕಡಿಮಿ, ಕಾಯಿಪಲ್ಲೆ ತಾಜಾನೂ ಐತಿ, ಐತಿ ಬರ್ರಿ...!

ಇದಾವ ಸಂತೆ ಅಂತೀರಾ!

ತಾಲೂಕಿನ ಮರೇವಾಡ ಶಾಲೆಯ ಮಕ್ಕಳು ತಮ್ಮ ಶಾಲಾವರಣದಲ್ಲಿ ಮೆಟ್ರಿಕ್ ಮೇಳ ಮತ್ತು ಸಂತೆ ಮೇಳದಲ್ಲಿ ನಾ ಮುಂದೆ ತಾ ಮುಂದೆ ಎನ್ನುತ್ತ ತಮ್ಮ ವಸ್ತುಗಳನ್ನು ಮಾರಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಒಂದೆಡೆ ತಾವೇ ತಯಾರಿಸಿದ ಪಾನಿ ಪುರಿ, ಭೇಲ್ ಪುರಿ, ಸಮೋಸಾ, ಸ್ಯಾಂಡ್‌ವಿಚ್, ಫ್ರೂಟ್ ಸಲಾಡ್‌ನ ಅಂಗಡಿಗಳ ಸಾಲು. ಇನ್ನೊಂದೆಡೆ ತರಕಾರಿ ಮಾರುಕಟ್ಟೆ. ತಾವೇ ತಯಾರಿಸಿದ ಕಿವಿಯೋಲೆ, ಕೈ ಬಳೆ, ಸರ, ಗ್ರೀಟಿಂಗ್ ಕಾರ್ಡ್‌ಗಳ ಮಾರಾಟದಲ್ಲಿ ತೊಡಗಿರುವ ಕರಕುಶಲಕರ್ಮಿಗಳು. ಒಟ್ಟಾರೆ ಶಾಲೆಯ ಆವರಣ ಮಕ್ಕಳ ಸಂತೆಯ ದೃಶ್ಯವಾಗಿತ್ತು. ಮಕ್ಕಳು ಮಾರಾಟ ಮಾಡುತ್ತಿದ್ದ ರೀತಿಗೆ ಪಾಲಕರು ಮತ್ತು ಶಿಕ್ಷಕರು ಬೆರಗಾಗಿದ್ದರು. ಗ್ರಾಮದ ನಿವಾಸಿಗಳು ಸಂತೆಗೆ ಬಂದು ತಮಗೆ ಬೇಕಾದ ವಸ್ತು ಖರೀದಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಮೆಟ್ರಿಕ ಮೇಳದಲ್ಲಿ ಮಾದರಿ ಎಟಿಎಂ, ಬ್ಯಾಂಕ್, ಪೋಸ್ಟ್‌ ಆಫೀಸ್ ಸಹ ಗಮನ ಸೆಳೆದವು.ಪ್ರತಿನಿತ್ಯ ಜೀವನದಲ್ಲಿ ನಡೆಯುವ ಚಟುವಟಿಕೆಯಲ್ಲಿ ಹಣದ ಪಾತ್ರವೇನು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶದಿಂದ ಮಕ್ಕಳ ಮೆಟ್ರಿಕ್ ಹಾಗೂ ಸಂತೆ ಮೇಳ ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್. ಹೇಳಿದರು.

ಮಕ್ಕಳನ್ನು ಮಾರುಕಟ್ಟೆ ಸೇರಿದಂತೆ ಕೆಲಸ ಕಾರ್ಯಗಳಿಗೆ ಹೊರಗೆ ಕಳುಹಿಸಲು ಹಿಂದೇಟು ಹಾಕುತ್ತೇವೆ. ಇದರಿಂದ ಅವರಿಗೆ ಹೊರಗಿನ ಜ್ಞಾನ ಸಿಗುವುದಿಲ್ಲ. ಮಕ್ಕಳು ಸಂತೆಗೆ ಹೋದರೆ ವ್ಯಾಪಾರಸ್ಥರು ಹೆಚ್ಚಿನ ಹಣ ತೆಗೆದುಕೊಳ್ಳುತ್ತಾರೆ. ಉತ್ತಮ ಕಾಯಿಪಲ್ಲೆ ಬಗ್ಗೆ ಮಕ್ಕಳಿಗೆ ಗೊತ್ತಿಲ್ಲ ಎಂದು ತಿಳಿದಿರುತ್ತೇವೆ. ಇದರಿಂದ ನಾವೇ ಅವರನ್ನು ವ್ಯವಹಾರ ಜ್ಞಾನದಿಂದ ದೂರ ಇಡುತ್ತೇವೆ. ಮಕ್ಕಳಿಗೆ ವ್ಯವಹಾರದ ಜ್ಞಾನ ಬೆಳೆಯಲೆಂದು ಶಾಲೆಯವರು ಶನಿವಾರ ಸಂತೆ ಏರ್ಪಡಿಸಿರುವುದು ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್‌.ವಿ. ಸಂತಿ ಮಾತನಾಡಿ, ಮಕ್ಕಳಿಗೆ ವ್ಯವಹಾರದ ಕುರಿತು ಪುಸ್ತಕ, ಬ್ಲಾಕ್ ಬೋರ್ಡ್‌ನಲ್ಲಿ ತಿಳಿಸಲಾಗಿತ್ತು. ಆದರೆ, ವಾಸ್ತವಿಕವಾಗಿ ಅರಿಯಬೇಕು ಎಂಬ ಉದ್ದೇಶದಿಂದ ಸಂತೆ ಏರ್ಪಡಿಸಿದ್ದು, ಮಕ್ಕಳು ಸಂತಸದಿಂದಲೆ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ನರಸಿಂಹಮೂರ್ತಿ ರಾಜೂರ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಹುಲಮನಿ, ಗ್ರಾಪಂ ಸದಸ್ಯ ವಿಠ್ಠಲ್‌ ಕಬನೂರ, ಸಿಆರ್‌ಪಿ ಬಸವರಾಜ ಕುರಗುಂದ, ಪವಿತ್ರಾ ಪಟ್ಟೇದ, ಬಸವರಾಜ ಮೀಸಿ, ಪ್ರಭು ತಡಕೋಡ, ವೀರಬಸಯ್ಯ ಹಿರೇಮಠ, ಸುರೇಶ ಮನೆಕ್ಕನವರ, ಬಸವರಾಜ ಮಾದರ, ಲಕ್ಷ್ಮೀ ನವಲಗುಂದ, ದ್ರಾಕ್ಷಾಯಣಿ ಹುಲಮನಿ ಮತ್ತಿತರರು ಇದ್ದರು.

Share this article