ದಿ.ಉಮೇಶ ಕತ್ತಿ ಕನಸು ಸಾಕಾರ: ರಮೇಶ ಕತ್ತಿ

KannadaprabhaNewsNetwork | Published : Aug 3, 2024 12:34 AM

ಸಾರಾಂಶ

ತನ್ನ ಕ್ಷೇತ್ರದ ಕೃಷಿ ಸುಧಾರಣೆಯಾಗಬೇಕು ಎಂಬ ಮಹದಾಸೆಯೊಂದಿಗೆ ವಿವಿಧ ಯೋಜನೆಗಳ ಅನುಷ್ಠಾನದ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟ ಸಹೋದರ ದಿ.ಉಮೇಶ ಕತ್ತಿ ಅವರ ಕನಸು ಇದೀಗ ಸಾಕಾರಗೊಂಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ತನ್ನ ಕ್ಷೇತ್ರದ ಕೃಷಿ ಸುಧಾರಣೆಯಾಗಬೇಕು ಎಂಬ ಮಹದಾಸೆಯೊಂದಿಗೆ ವಿವಿಧ ಯೋಜನೆಗಳ ಅನುಷ್ಠಾನದ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟ ಸಹೋದರ ದಿ.ಉಮೇಶ ಕತ್ತಿ ಅವರ ಕನಸು ಇದೀಗ ಸಾಕಾರಗೊಂಡಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸಂತಸ ವ್ಯಕ್ತಪಡಿಸಿದರು.

ಶುಕ್ರವಾರ ಸಮೀಪದ ಹರಗಾಪುರ ಹಾಗೂ ಶಿಡ್ಲಹೊಂಡ ಕೆರೆ ತುಂಬಿದ ನಿಮಿತ್ತ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈಗಾಗಲೆ ಕೆರೆ ತುಂಬುವ ಯೋಜನೆಯಿಂದ ಈ ಭಾಗದ ಅಂತರ್ಜಲಮಟ್ಟ ವೃದ್ಧಿಯಾಗಿದ್ದು, ಶಂಕರಲಿಂಗ, ಅಡವಿಸಿದ್ದೇಶ್ವರ, ಮಲ್ಲಿಕಾರ್ಜುನ ಏತ ನೀರಾವರಿ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಲ್ಲಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದರು.

ಕೆರೆ ಒತ್ತುವರಿ ಮಾಡಬೇಡಿ:

ಈ ಭಾಗದ ಜನರ ಅನುಕೂಲಕ್ಕಾಗಿ ನಿರ್ಮಿಸಿರುವ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾದರೆ ಎಲ್ಲರಿಗೂ ಸಹಾಯವಾಗುತ್ತದೆ. ಹೀಗಾಗಿ ಕೆರೆಗಳಿಗಾಗಿ ಮೀಸಲಿಟ್ಟ ಪ್ರದೇಶವನ್ನು ಯಾರೂ ಸಹ ಅತಿಕ್ರಮಣ ಮಾಡಬಾರದು ಎಂದು ಮನವಿ ಮಾಡಿದರು.

ಕೆರೆ ಹೂಳೆತ್ತಲು ಕ್ರಮ ಅಗತ್ಯ:

ತಾಲೂಕಿನ ಕೆರೆಗಳಲ್ಲಿ ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದ್ದು, ಹಳ್ಳ, ಕೊಳ್ಳಗಳಿಂದ ಹರಿದು ಬರುವ ತ್ಯಾಜ್ಯದಿಂದಾಗಿ ಕೆರೆಗಳಲ್ಲಿ ಹೂಳು ತುಂಬಿದ್ದು, ಕೆರೆಗಳ ಹೂಳು ತೆಗೆಯಲು ಯೋಜನೆ ರೂಪಿಸಲಾಗುವುದು ಎಂದರು.

ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಮುಖಂಡರಾದ ಎನ್.ಬಿ. ಪಾಟೀಲ ಅಣ್ಣಾಸಾಹೇಬ ಪಾಟೀಲ, ಅಶೋಕ ಹಿರೆಕೊಡಿ, ವಿಜಯ ಮೂರ್ತಿ, ಬಾಳಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.ಹುಕ್ಕೇರಿ ವಿಧಾನಸಭೆ ಮತಕ್ಷೇತ್ರದಲ್ಲಿರುವ ಪ್ರತಿಯೊಂದು ಕೆರೆಗೂ ಉಸ್ತುವಾರಿ ಸಮಿತಿ ರಚನೆಗೆ ಗ್ರಾಪಂಗೆ ಸೂಚನೆ ನೀಡಲಾಗಿದ್ದು, ಸಮಿತಿ ಕೆರೆ ಅಕ್ಕ-ಪಕ್ಕದ ಜಮೀನಿನ ರೈತರು, ಗ್ರಾಪಂ ಆಡಳಿತ ಮಂಡಳಿ, ನೀರಾವರಿ ಇಲಾಖೆ ಸಿಬ್ಬಂದಿ, ಪಿಡಿಒ ಒಳಗೊಂಡ ಸಮಿತಿ ರಚನೆ ಮಾಡುವ ಮೂಲಕ ಕೆರೆ ಸ್ವಚ್ಛತೆಯ ಜೊತೆಗೆ ಕೆರೆ ಪರಿಸರದಲ್ಲಿ ಆಗಬಹುದಾದ ಅನಾನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಿತಿ ನಿರ್ಧಾರ ಕೈಗೊಂಡು ಆ ಭಾಗದ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಿದ್ದು, ಈ ಸಮಿತಿ ರಚನೆಯಿಂದ ಕೆರೆ ರಕ್ಷಣೆಗೆ ಹೆಚ್ಚಿನ ಅನುಕೂಲ ದೊರೆತಂತಾಗಲಿದೆ. ತ್ವರಿತಗತಿಯಲ್ಲಿ ಸಮಿತಿ ರಚನೆಗೆ ಗ್ರಾಪಂಗಳು ಕ್ರಮವಹಿಸಬೇಕು.

- ರಮೇಶ ಕತ್ತಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ

Share this article