ಮಯೂರ್ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರುಕಾವೇರಿ ಕಾರಣಕ್ಕೋ, ಕನ್ನಡದ ಕಾರಣಕ್ಕೋ ಬಂದ್ ಅಲ್ಲ, ಬದಲಾಗಿ ಈ ಮಾರುಕಟ್ಟೆ ನಿರ್ಮಾಣವಾದ 6 ವರ್ಷಗಳಿಂದಲೂ ಅಘೋಷಿತ ಬಂದ್ ಎದುರಿಸುತ್ತಿದೆ! ಮುಚ್ಚಲ್ಪಟ್ಟ ನೂರಾರು ಮಳಿಗೆಗಳ ಸಾಲು, ವಹಿವಾಟಿಲ್ಲದೆ ಬಿಕೋ ಎನ್ನುವ ವಿಶಾಲ ಪ್ರಾಂಗಣ ಇಲ್ಲಿ ಕಣ್ಣಿಗೆ ರಾಚುತ್ತಿದೆ.
67 ಎಕರೆಯಲ್ಲಿ ಬರೋಬ್ಬರಿ ₹306 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತುಮಕೂರು ರಸ್ತೆ ದಾಸನಪುರ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸ್ಥಿತಿ ಇದು. ಇಲ್ಲಿರುವ ಎ,ಬಿ,ಸಿ ಬ್ಲಾಕ್‌ಗಳ 310 ಮಳಿಗೆಗಳ ಪೈಕಿ ಸದ್ಯ 20-30ರಲ್ಲಿ ವಹಿವಾಟು ನಡೆಯುತ್ತಿದೆ. ಎಪಿಎಂಸಿಗೆ ಪೂರಕವಾಗಿ ನಿರ್ಮಿಸಲಾದ ಸೌಲಭ್ಯಗಳು ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ.ಯಶವಂತಪುರ ಎಪಿಎಂಸಿ ಬಿಟ್ಟು ಬಂದ ವರ್ತಕರು ಇಲ್ಲಿ ನಿರೀಕ್ಷಿತ ವ್ಯಾಪಾರ ಇಲ್ಲದೆ ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಈಚೆಗೆ ಯಶವಂತಪುರ ಎಪಿಎಂಸಿಯಲ್ಲಿ ಮಾರಾಟ ಮಾಡಬಹುದಾದ ಪಟ್ಟಿಯಿಂದ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಕೈಬಿಡಲಾಗಿದೆ (ಡಿನೋಟಿಫಿಕೇಶನ್). ಇವುಗಳ ವಹಿವಾಟು ದಾಸನಪುರಕ್ಕೆ ಬರಲಿ ಎಂದು ಇಲ್ಲಿನ ವರ್ತಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಈ ನಡುವೆ ಎಪಿಎಂಸಿ ಆಡಳಿತವು ದಾಸನಪುರದಲ್ಲಿ ಮಳಿಗೆಗಳನ್ನು ಹಿಂಪಡೆದು ಮರುಹಂಚಿಕೆ ಮಾಡುವ ತೀರ್ಮಾನಕ್ಕೆ ವರ್ತಕರು ಸಡ್ಡು ಹೊಡೆದಿದ್ದು, ಹೈಕೋರ್ಟ್ ಮೆಟ್ಟಿಲಿದ್ದಾರೆ.
ಕುಸಿದ ವಹಿವಾಟು:ಕೋವಿಡ್ ವೇಳೆ ದಾಸನಪುರಕ್ಕೆ ಮಾರುಕಟ್ಟೆ ಸ್ಥಳಾಂತರಗೊಂಡಿದ್ದ ವೇಳೆ 310 ವರ್ತಕರು ಬಂದಿದ್ದರು. ಆಗ ದಿನಕ್ಕೆ ಸುಮಾರು 3ಸಾವಿರ ಲಾರಿಗಳು 1.50ಲಕ್ಷ ಚೀಲದಷ್ಟು ಈರುಳ್ಳಿ ವಹಿವಾಟು ನಡೆದಿತ್ತು ಆದರೆ, ಸೋಮವಾರ ಬಂದಿದ್ದು ಕೇವಲ 4138 ಚೀಲ ಈರುಳ್ಳಿ, 27 ಲಾರಿಗಳು. ಅದೇ ಯಶವಂತಪುರಕ್ಕೆ 54 ಸಾವಿರಕ್ಕೂ ಅಧಿಕ ಈರುಳ್ಳಿ ಬಂದಿದ್ದರೆ ತರಕಾರಿಯ 350ಕ್ಕೂ ಹೆಚ್ಚು ಲಾರಿಗಳು ಬಂದಿವೆ.
ಬಳಕೆಯಾಗದ ಸೌಕರ್ಯ:ಬಳಕೆ ಆಗದ ಕಾರಣ ಇಲ್ಲಿರುವ ಹಲವು ಸೌಕರ್ಯಗಳು ತುಕ್ಕು ಹಿಡಿಯುತ್ತಿದೆ. ಎಪಿಎಂಸಿಯಲ್ಲಿ ಬಳಸಿದ ನೀರನ್ನು ಸಂಸ್ಕರಿಸುವ ನೀರು ಶುದ್ಧೀಕರಣ ಘಟಕ ಕೆಲಸ ಮಾಡುತ್ತಿಲ್ಲ. ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರವಾಗಿಸುವ ಘಟಕ ಮುಚ್ಚಿದೆ. ಶುದ್ಧ ನೀರಿನ ಘಟಕ, ಶೌಚಾಲಯ ಬಂದ್ ಆಗಿವೆ. ಇದೊಂದು ಕಡೆಯಾದರೆ ಸ್ಥಳಾಂತರ ಆಗದ ಕಾರಣ ಇಲ್ಲಿನ ವರ್ತಕರಿಗೆ ನೀರು ಸೇರಿ ಮೂಲಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ದಾಸನಪುರ ಎಪಿಎಂಸಿ ವರ್ತಕರ ಸಂಘದವರು ದೂರಿದ್ದಾರೆ.
ಸದ್ಯ ಮಾಕಳಿಯಿಂದ ಹುಸ್ಕೂರು ರಸ್ತೆ ಮೂಲಕ ಎಪಿಎಂಸಿಗೆ ಹೋಗುವ ರಸ್ತೆ ಕಿರಿದಾಗಿದೆ. ಈಗಲೇ ಇಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಸಮಸ್ಯೆ ಎದುರಿಸುತ್ತಿದ್ದೇವೆ. ಒಂದು ವೇಳೆ ಪೂರ್ಣ ಮಾರುಕಟ್ಟೆ ಆರಂಭವಾದರೆ ವಾಹನಗಳ ಓಡಾಟ ಕಷ್ಟವಾಗಲಿದೆ. ಹೀಗಾಗಿ ಈ ರಸ್ತೆ ಅಗಲೀಕರಣ, ದ್ವಿಪಥ ಮಾಡಬೇಕು ಎಂದು ಎಪಿಎಂಸಿ ಬಳಿಯ ನಿವಾಸಿ ಹೇಳಿದ್ದಾರೆ.ಪಾರ್ಕಿಂಗ್‌ಗೆ 16 ಎಕರೆ ಲೀಸ್
ಎಪಿಎಂಸಿಗೆ ಬರುವ ವಾಹನಗಳಿಗೆ ಪಾರ್ಕಿಂಗ್ ಸಲುವಾಗಿ ಸನಿಹವೇ ಬಿಎಂಟಿಸಿ ವ್ಯಾಪ್ತಿಯಲ್ಲಿರುವ 16 ಎಕರೆಯನ್ನು ಲೀಸ್‌ನಲ್ಲಿ ಪಡೆಯಲು ಮುಂದಾಗಿದ್ದೇವೆ. ಎಪಿಎಂಸಿ ಎದುರಿಗೆ ಈಗಿರುವ ಕಿರಿದಾದ ರೈಲ್ವೆ ಮೆಲ್ಸೇತುವೆಯಿಂದ ಸರಕು ಸಾಗಣೆ ಲಾರಿಗಳ ಓಡಾಟಕ್ಕೆ ಆಗುವ ಸಮಸ್ಯೆ ನಿವಾರಿಸಲು ದ್ವಿಪಥ ಮೇಲ್ಸೇತುವೆ ನಿರ್ಮಾಣಕ್ಕಾಗಿ ನೈಋತ್ಯ ರೈಲ್ವೆ ಜತೆ ಮಾತುಕತೆಯಾಗಿದೆ. ನಾವು ಅದಕ್ಕಾಗಿ ಮುಂಗಡ ಹಣ ನೀಡಲಿದ್ದೇವೆ. ಕಾಮಗಾರಿಯನ್ನು ರೈಲ್ವೆ ಮಾಡಲಿದೆ ಎಂದು ಯಶವಂತಪುರ ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ ತಿಳಿಸಿದರು. ಜತೆಗೆ ಹುಸ್ಕೂರಿನಿಂದ ಎಪಿಎಂಸಿವರೆಗೆ 6ಕಿಮೀ ಸೇರಿ ಒಟ್ಟಾರೆ 10 ಕಿಮೀ ರಸ್ತೆಯನ್ನು ಕೆಎಸ್‌ಡಿಸಿಎಲ್ ಅಗಲೀಕರಣ ಮಾಡಲಿದೆ ಎಂದು ಹೇಳಿದರು.ಯಶವಂತಪುರ ಎಪಿಎಂಸಿಯಲ್ಲಿ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ, ಶುಂಠಿ ಡಿನೋಟಿಫಿಕೇಶನ್ ಆಗಿದೆ. ದಾಸನಪುರದಲ್ಲಿ ಎಲ್ಲ ಮೂಲಸೌಲಭ್ಯ ಇದೆ. ಮಾರುಕಟ್ಟೆ ಸ್ಥಳಾಂತರ ವಿಚಾರ ಕೋರ್ಟ್‌ನಲ್ಲಿದ್ದು, ಶೀಘ್ರವೇ ಇತ್ಯರ್ಥವಾಗುವ ನಿರೀಕ್ಷೆಯಿದೆ.
- ದೊರೆಸ್ವಾಮಿ, ಯಶವಂತಪುರ ಎಪಿಎಂಸಿ ಕಾರ್ಯದರ್ಶಿಯಶವಂತಪುರದ ಮಾರುಕಟ್ಟೆಯನ್ನು ಶೀಘ್ರ ದಾಸನಪುರಕ್ಕೆ ಸ್ಥಳಾಂತರ ಮಾಡುವುದಾಗಿ ಹೇಳಿ ನಮ್ಮನ್ನು ಇಲ್ಲಿಗೆ ವರ್ಗಾಯಿಸಿದ ಎಪಿಎಂಸಿ ಅಧಿಕಾರಿಗಳು ನಮಗೆ ಮಳಿಗೆ ಹಂಚಿಕೆ ಮಾಡಿದ್ದಾರೆ. 8 ವರ್ಷವಾದರೂ ಇನ್ನೂ ಸ್ಥಳಾಂತರ ಆಗಿಲ್ಲ. ಆದರೆ, 55 ತಿಂಗಳ ಬಾಡಿಗೆ ಒಪ್ಪಂದ ಮುಗಿದಿದೆ ಎಂದು ಮಳಿಗೆ ವಾಪಸ್ ಪಡೆದು ಮರುಹಂಚಿಕೆಗೆ ಮುಂದಾಗಿದ್ದಾರೆ.
- ಬಿ.ಆರ್.ಶ್ರೀರಾಮರೆಡ್ಡಿ, ದಾಸನಪುರ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ