ನಿರ್ಮಾಣ ಹಂತದ ಸೇತುವೆ ಕುಸಿತ: 7 ಮಂದಿಗೆ ಗಾಯ

KannadaprabhaNewsNetwork | Published : Apr 16, 2024 1:08 AM

ಸಾರಾಂಶ

ಮಲ್ಲಿಪ್ಪಾಡಿಯಲ್ಲಿ ಸಾಗುವ ತೋಡಿಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇಕ್ಕೆಲಗಳ ಅಬಟ್‌ಮೆಂಟ್ ಕೆಲಸ ಪೂರ್ಣಗೊಂಡು ಡಬಲ್ ಸೆಂಟ್ರಿಂಗ್ ಬಳಸಿ ಸ್ಲ್ಯಾಬ್ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದ ಸಮಯ ತಳಭಾಗದಿಂದ ನೀಡಿದ ಸೆಂಟ್ರಿಂಗ್ ರಾಡ್ ಜಾರಿದ ಹಿನ್ನೆಲೆಯಲ್ಲಿ ಮೇಲ್ಭಾಗದ ಸಂಪೂರ್ಣ ಕಾಂಕ್ರಿಟ್ ವ್ಯವಸ್ಥೆ ಕುಸಿತವಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಪುಣಚ ಗ್ರಾಮದ ಬರೆಂಜ - ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ಕೊನೆಯ ಹಂತದ ನಿರ್ಮಾಣ ಕಾರ್ಯದ ಸೇತುವೆ ಕುಸಿತವಾಗಿ ೭ ಮಂದಿ ಗಾಯಗೊಂಡು, ಪುತ್ತೂರು ಹಾಗೂ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಾಳುಗಳಾದ ಮೈಸೂರು ನಂಜನಗೂಡು ಮೂಲದ ಮಹೇಶ್ (೬೩), ಗದಗ ಮೂಲದ ನಾಗರಾಜ (೪೦), ಪುತ್ತೂರು ನಿವಾಸಿ ವಿಜಯ(೩೫) ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮಾಣಿಯಲ್ಲಿರುವ ಕಾಂಕ್ರೀಟ್ ಮಿಕ್ಸಿಂಗ್ ಘಟಕದಲ್ಲಿ ಕೆಲಸ ನಿರ್ವಹಿಸುವ ಕೋಲ್ಕತ್ತ ಮೂಲದ ಯೂಸೂಫ್ (೫೦), ಮಾಥೋಬ್ (೩೨), ಆಕ್ತರುಲ್ (೪೨) ಮಂಗಳೂರು ಆಸ್ಪತ್ರೆಗೆ ವರ್ಗಾವಣೆಯಾಗಿದ್ದಾರೆ. ಜವಹಾರ್ (೨೮) ಪುತ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.ಮಲ್ಲಿಪ್ಪಾಡಿಯಲ್ಲಿ ಸಾಗುವ ತೋಡಿಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇಕ್ಕೆಲಗಳ ಅಬಟ್‌ಮೆಂಟ್ ಕೆಲಸ ಪೂರ್ಣಗೊಂಡು ಡಬಲ್ ಸೆಂಟ್ರಿಂಗ್ ಬಳಸಿ ಸ್ಲ್ಯಾಬ್ ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದ ಸಮಯ ತಳಭಾಗದಿಂದ ನೀಡಿದ ಸೆಂಟ್ರಿಂಗ್ ರಾಡ್ ಜಾರಿದ ಹಿನ್ನೆಲೆಯಲ್ಲಿ ಮೇಲ್ಭಾಗದ ಸಂಪೂರ್ಣ ಕಾಂಕ್ರಿಟ್ ವ್ಯವಸ್ಥೆ ಕುಸಿತವಾಗಿದೆ.ಗುತ್ತಿಗೆಯನ್ನು ಪಡೆದವರು ಸಬ್ ಕಾಂಟ್ರಾಕ್ಟ್ ನೀಡಿರುವುದು ಹಾಗೂ ಸ್ಥಳದಲ್ಲಿ ಸರಿಯಾದ ನುರಿತ ಎಂಜಿನಿಯರ್‌ಗಳು ಇಲ್ಲದೇ ಇರುವುದರಿಂದ ಈ ರೀತಿಯ ಅವಘಡ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸದೇ ಇರುವುದು ಸ್ಥಳೀಯರ ಆತಂಕವನ್ನು ದೂರ ಮಾಡಿದೆ.

ಸೇತುವೆ ತಳ ಭಾಗದಿಂದ ಸುಮಾರು ೨೪ ಅಡಿ ಎತ್ತರವನ್ನು ಹೊಂದಿದ್ದು, ಕೆ.ಆರ್.ಡಿ.ಎಲ್. ಮೂಲಕ ಕಾಮಗಾರಿಯನ್ನು ನಡೆಸಲಾಗುತ್ತಿತ್ತು. ಸಾಮಾನ್ಯವಾಗಿ ಸೇತುವೆಗಳ ನಿರ್ಮಾಣದ ಸಮಯದಲ್ಲಿ ಒಂದೇ ಸೆಂಟ್ರಿಂಗ್ ಬಳಸಿ ಕೆಲಸ ನಿರ್ವಹಿಸಲಾಗುತ್ತದೆ. ಎತ್ತರದ ಪ್ರದೇಶದಲ್ಲಿ ತಳ ಭಾಗಕ್ಕೆ ಮಣ್ಣು ತುಂಬಿ ಸೆಂಟ್ರಿಂಗ್ ಇಡಲಾಗುತ್ತದೆ. ಆದರೆ ಈ ಬಗ್ಗೆ ನಿರ್ಲಕ್ಷ್ಯತೆಯನ್ನು ತೋರಲಾಗಿದೆ. ಭಾರ ತಡೆದುಕೊಳ್ಳಲಾಗದೆ ಏಕಾಏಕಿ ಎಲ್ಲವೂ ಕೆಳಕ್ಕೆ ಬಿದ್ದಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Share this article