ಮಾರುತಿ ಶಿಡ್ಲಾಪೂರಕನ್ನಡಪ್ರ ವಾರ್ತೆ ಹಾನಗಲ್ಲ
ತಾಲೂಕಿನಲ್ಲಿ ಒಂದೂವರೆ ತಿಂಗಳು ಭರಪೂರ ಮಳೆಯಾಗಿದೆ. ಆದರೆ, ನೀರಾವರಿ ಕೆರೆಗಳಿಗೆ ಮಾತ್ರ ಬಾಳಂಬೀಡ ಹಾಗೂ ಹಿರೇಕಾಂಸಿ ಸೇರಿದಂತೆ ಏತ ನೀರಾವರಿ ಯೋಜನೆಗಳಿಂದ ಹರಿಸಿದ ನೀರೇ ಆಸರೆಯಾಗಿದೆ.ಕಳೆದ ವರ್ಷ ಭೀಕರ ಬರಕ್ಕೆ ತುತ್ತಾದ ಹಾನಗಲ್ಲ ತಾಲೂಕಿನಲ್ಲಿ ಈ ವರ್ಷ ಒಳ್ಳೆಯ ಮಳೆಯಾಗಿದೆ. ಅದು ಕೂಡ ಬಿಡದೇ ಒಂದೂವರೆ ತಿಂಗಳು ಸುರಿದು ನದಿಗಳು ತುಂಬಿ ಹರಿದಿವೆ. ಶಾಲೆ ಕಾಲೇಜುಗಳು ಮಳೆಯ ಕಾರಣದಿಂದ ಕೆಲ ದಿನ ರಜೆಯನ್ನೂ ನೀಡಬೇಕಾಯಿತು. ಆದರೆ ಮಳೆಯ ನೀರಿನಿಂದ ಕೆರೆಗಳು ಮಾತ್ರ ತುಂಬಲೇ ಇಲ್ಲ. ಮುಂಗಾರಿನ ಮಳೆಗಳು ಬಾರದೇ ಕೆರೆ ಕಟ್ಟೆಗಳಿಗೆ ಯಾವುದೇ ನೀರು ಬಾರದೆ ಇದ್ದುದರಿಂದ, ನಂತರ ಬಂದ ಮಳೆ ಕೃಷಿಗೆ ಆಸರೆಯಾಯಿತು. ಅಲ್ಲಲ್ಲಿ ಗೋವಿನ ಜೋಳದಂತಹ ಬೆಳೆಗಳು ಅತಿ ಮಳೆಗೆ ಜೌಗೂ ಹಿಡಿದು ಹಾಳಾಗಿದ್ದೂ ಇದೆ. ಆದರೆ ಕೆರೆಗಳು ಮಾತ್ರ ತುಂಬಲಿಲ್ಲ ಎಂಬ ಸತ್ಯವನ್ನು ಅರಿಯಲೇಬೇಕಾಗಿದೆ. ಬಾಳಂಬೀಡ ಹಾಗೂ ಹಿರೇಕಾಂಸಿ ಏತ ನೀರಾವರಿ ಯೋಜನೆಗಳೇ ಈ ಬಾರಿ ಕೆರೆ ತುಂಬುವ ವಿಷಯದಲ್ಲಿ ಆಸರೆಯಾದವು.ಬಾಳಂಬೀಡ ಏತ ನೀರಾವರಿ ವ್ಯಾಪ್ತಿಗೆ ಬರುವ ೧೯೬ ಕೆರೆಗಳಲ್ಲಿ ೧೭೧ ಕೆರೆಗಳು ಈಗ ತುಂಬಿವೆ. ಈಗಾಗಲೇ ೨೫ ದಿನ ಸತತವಾಗಿ ಈ ಕೆರೆಗಳಿಗೆ ನೀರು ಹರಿಸಲಾಗಿದೆ. ಈ ಕೆರೆಗಳಿಗೆ ಮಳೆಯ ನೀರು ಅಂದಾಜು ಶೇ.೨೫ ನೀರು ತುಂಬುಲು ಸಾಧ್ಯವಾದರೂ ಉಳಿದ ನೀರು ತುಂಬಿರುವುದು ಏತ ನೀರಾವರಿ ಯೋಜನೆಯಿಂದಲೇ. ಬಾಳಂಬೀಡ ಏತ ನೀರಾವರಿಯ ಇನ್ನೂ ೨೫ ಕೆರೆಗಳಿಗೆ ನೀರುಹರಿಸಿ ತುಂಬಿಸಬೇಕಾಗಿದೆ.ಇನ್ನು ಹಿರೇಕಾಂಸಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಎಲ್ಲ ೭೮ ಕೆರೆಗಳು ಈಗ ತುಂಬಿ ನಿಂತಿವೆ. ಈ ಕೆರೆಗಳು ಮಳೆಯ ನೀರಿನಿಂದಲೇ ಅರ್ಧದಷ್ಟು ನೀರು ತುಂಬಿದ್ದು, ಉಳಿದರ್ಧ ತುಂಬಲು ೧೫ ದಿನ ಹಿರೇಕಾಂಸಿ ಏತ ನೀರಾವರಿಯಿಂದ ನೀರು ಹರಿಸಲಾಗಿದೆ. ಉಳಿದಂತೆ ಬಸಾಪುರ, ಮಕರವಳ್ಳಿ, ಶೇಷಗಿರಿ, ಬ್ಯಾತನಾಳ, ಗುಡ್ಡದಮಲ್ಲಾಪುರ, ಚಿಕ್ಕಹುಲ್ಲಾಳ, ಕನ್ನೇಶ್ವರ ನೀರಾವರಿ ಯೋಜನೆಗಳು ಕೂಡ ನೂರಾರು ಕೆರೆ ತುಂಬಲು ಸಹಕಾರಿಯಾಗಿವೆ.ವರ್ಷದ ನೂರು ದಿನ ವರದಾ ನದಿಯಿಂದ ನೀರು ಹರಿಸಿ ಈ ಕೆರೆಗಳನ್ನು ತುಂಬುವ ಯೋಜನೆ ಇದಾಗಿದ್ದು, ಈ ಬಾರಿ ಕೆರೆ ತುಂಬಿಸಲು ನೀರಿನ ಕೊರತೆಯೇನು ಆಗದು ಎಂದು ಅಂದಾಜಿಸಲಾಗಿದೆ. ಅಂತರ್ಜಲ ಮರುಪೂರಣಕ್ಕೆ ಕೂಡ ಈ ಯೋಜನೆ ಸಹಕಾರಿಯಾಗಿದೆ. ಕರೆ ಅವಲಂಬಿಸಿ ಭತ್ತದ ನಾಟಿ ಮಾಡುವ ರೈತರಿಗೂ ಇದು ಅನುಕೂಲವಾಗಿದೆ. ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಹಾನಗಲ್ಲ ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆ ಅತ್ಯಂತ ಸಹಕಾರಿ. ರೈತರು ಒಂದಷ್ಟು ಸಮಾಧಾನದಿಂದಿರಲು ಸಾಧ್ಯವಾಗಿದೆ.ಯಾವುದೇ ಉದ್ಯಮಗಳಿಲ್ಲದ ಹಾನಗಲ್ಲ ತಾಲೂಕಿಗೆ ಕೃಷಿಯೇ ಆಸರೆ. ಅದಕ್ಕೆ ನೀರು ಬೇಕು ಎಂಬುದು ರೈತರ ಬೇಡಿಕೆ. ಈ ಬಾರಿ ಬಾಳಂಬೀಡ ಹಾಗೂ ಹಿರೇಕಾಂಸಿ ಯೋಜನೆಗಳು ಆರಂಭವಾಗಿರುವುದರಿಂದ ಕೆರೆಗಳು ತುಂಬಿವೆ. ಅಂತರ್ಜಲವೂ ಹೆಚ್ಚಿದೆ. ಸರಕಾರಗಳು ಈ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಶಾಶ್ವತ ಯೋಜನೆ ರೂಪಿಸಿದರೆ ರೈತ ನೆಮ್ಮದಿಯಿಂದ ದುಡಿದು ಬದುಕಬಲ್ಲ ಎಂದು ಕೃಷಿಕ ಬಸವರಾಜ ಹಾದಿಮನಿ ಹೇಳಿದರು.ಬಾಳಂಬೀಡ ಏತ ನೀರಾವರಿ ಯೋಜನೆ ಈ ವರ್ಷ ಮಳೆಗಾಲಕ್ಕೆ ಸರಿಯಾಗಿ ಆರಂಭವಾಗಿದ್ದರಿಂದ ವರದಾ ನದಿಯ ನೀರನ್ನು ಸಕಾಲಿಕವಾಗಿ ಕೆರೆಗಳನ್ನು ತುಂಬಿಸಲು ಸಾಧ್ಯವಾಗಿದೆ. ನದಿಯಲ್ಲಿ ನೀರಿರುವವರೆಗೂ ಈ ಏತ ನೀರಾವರಿ ವ್ಯಾಪ್ತಿಗೆ ಬರುವ ಕೆರೆಗಳನ್ನು ತುಂಬಿಸಲಾಗುತ್ತದೆ. ಎಲ್ಲ ಅಡತಡೆಗಳನ್ನು ನಿಭಾಯಿಸಿ ಈಗ ಈ ಏತ ನೀರಾವರಿ ಯೋಜನೆ ಅಚ್ಚುಕಟ್ಟಾಗಿ ನೀರೊದಗಿಸುತ್ತಿದೆ ಎಂದು ಬಾಳಂಬೀಡ ಏತ ನೀರಾವರಿ ಯೋಜನೆ ಎಂಜಿನಿಯರ್ ರುದ್ರಪ್ಪ ಹೇಳಿದರು.