ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ನಡೆದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ಸಂವಿಧಾನವನ್ನು ಭಾರತದ ಎಲ್ಲಾ ನಾಗರೀಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಯೊಂದಿಗೆ ಅವರು ರಚಿಸಿರುವ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾದುದಾಗಿದೆ. ಬಾಹ್ಯಾಕಾಶ, ಸಾಫ್ಟ್‌ವೇರ್, ವೈದ್ಯಕೀಯ, ತಂತ್ರಜ್ಞಾನ, ಯೋಗ, ಸಂಸ್ಕೃತಿ, ಆರೋಗ್ಯ, ಧರ್ಮ, ಶಿಕ್ಷಣ, ರಕ್ಷಣೆ, ರಾಜಕೀಯದಂತಹ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತದ ಪ್ರಗತಿಯತ್ತ ತಿರುಗಿ ನೋಡುವಂತಾಗಿದೆ ಎಂದರು.
ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ನಿರ್ಲಕ್ಷಿಸದೆ ಹದಿನೆಂಟು ವರ್ಷ ತುಂಬಿದ ಯುವ ಅರ್ಹರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಅತ್ಯಂತ ಜವಾಬ್ದಾರಿಯುತವಾಗಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕೆಂದರು.ಶಾಸಕ ಕೆ. ಷಡಕ್ಷರಿ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಮಾಜದಲ್ಲಿ ಸರಿಸಮಾನವಾಗಿ ಎಲ್ಲರೂ ಬಾಳಬೇಕು, ಬದುಕುಬೇಕು, ಎಲ್ಲರಿಗೂ ಮೂಲಭೂತ ಸೌಕರ್ಯಗಳು ದೊರೆಬೇಕೆಂಬ ಆಶಯದಿಂದ ಸಂವಿಧಾನ ರಚಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು ಬದಲಾಯಿಸುವುದಾಗಿ ಮಾತನಾಡುವ ಜನರು ರಾಜಕಾರಣದಲ್ಲಿದ್ದು ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಯುವಜನಾಂಗ ಎಚ್ಚೆತ್ತುಕೊಳ್ಳದಿದ್ದರೆ ದೇಶದ ಪರಿಸ್ಥಿತಿ ಅದೋಗತಿಗೆ ಹೋಗಲಿದೆ. ಅಧಿಕಾರಕ್ಕಾಗಿ ರಾಜಕೀಯದಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗುವುದು ಬೇಡ. ಅಂಬೇಡ್ಕರ್ ಅವರ ಆಶಯದಂತೆ ಸರ್ಕಾರ ಹಾಗೂ ಸಮಾಜದಲ್ಲಿ ಸಿಗುವ ಯೋಜನೆಗಳು ಸಮಾನವಾಗಿ ಸಿಗಬೇಕು ಎಂದರು.