ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಬಿಜೆಪಿ ಜಿಲ್ಲಾ ಘಟಕ ಹಾಗೂ ಮೈಭಾರತ ಕೇಂದ್ರದ ನೇತೃತ್ವದಲ್ಲಿ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ನ.19ರಂದು ನಗರದಲ್ಲಿ ಏಕತಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 6.30ಕ್ಕೆ ಶಾಹಪುರದ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನವನದಲ್ಲಿ ಏಕತಾ ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದರು.ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಒಗ್ಗೂಡುವಿಕೆಗಾಗಿ ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವ್ಯಕ್ತಿತ್ವದ ಬಗ್ಗೆ ಯುವ ಜನರಿಗೆ ಪರಿಚಯಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏಕತಾ ಪಾದಯಾತ್ರೆ, ಪಟೇಲರ ಜೀವನ ಕುರಿತು ಚರ್ಚಾ ಸ್ಪರ್ಧೆ, ವಿಚಾರ ಸಂಕೀರ್ಣ, ಪ್ರಬಂಧ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಏಕತಾ ಪಾದಯಾತ್ರೆಯೂ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನವನದಿಂದ ಆರಂಭವಾಗಿ, ಕಪಿಲೇಶ್ವರ ರೈಲ್ವೆ ಬ್ರಿಡ್ಜ್, ಶನಿ ಮಂದಿರ ರಸ್ತೆ, ತಿಲಕ್ ಚೌಕ್ ಹಾಗೂ ರಾಮಲಿಂಗ ಖಿಂಡ ಗಲ್ಲಿ ಮಾರ್ಗವಾಗಿ ನಡೆದು ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಇದರಲ್ಲಿ ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವಕ, ಯುವತಿಯರು, ನಾಗರಿಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುಬೇಕು ಎಂದು ಮನವಿ ಮಾಡಿದರು.ಭಾರತೀಯ ಜನತಾ ಪಾರ್ಟಿ ಮತ್ತು ಮೈತ್ರಿ ಪಕ್ಷಗಳಿಗೆ ಬಿಹಾರ ಚುನಾವಣೆಯಲ್ಲಿ ಬಹುದೊಡ್ಡ ಗೆಲುವನ್ನು ಜನರು ಕೊಟ್ಟಿದ್ದಾರೆ. ಹೀಗಾಗಿ ಬಿಹಾರ ಜನತೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ವಿಶ್ವಾಸ ಈ ಚುನಾವಣೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಹೀಗಾಗಿ, ಹತಾಶಯರಾದ ಕಾಂಗ್ರೆಸ್ ನಾಯಕರು ಟೀಕೆಗಳನ್ನು ಮಾಡುತ್ತಿದ್ದಾರೆ. ಇದರಿಂದಲೇ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇನ್ನಾದರೂ ಕಾಂಗ್ರೆಸ್ ಟೀಕೆ ಮಾಡುವುದನ್ನು ಬಿಟ್ಟು ತಮ್ಮ ಸೋಲಿನ ಬಗ್ಗೆ ಆತ್ಮಾಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಮೇಯರ್ ಮಂಗೇಶ್ ಪವಾರ್, ಉಪಮೇಯರ್ ವಾಣಿ ವಿಲಾಸ್ ಜೋಶಿ, ಮಾಜಿ ಶಾಸಕ ಸಂಜಯ್ ಪಾಟೀಲ, ನಗರ ಸೇವಕ ಹನುಮಂತ ಕೊಂಗಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕೋಟ್‌ಬೆಳಗಾವಿಯ ಕಿತ್ತೂರಾಣಿ ಚನ್ನಮ್ಮ ಕಿರುಮೃಗಾಲಯದಲ್ಲಿ ಕೃಷ್ಣ ಮೃಗಗಳು ನಿಗೂಢವಾಗಿ ಸಾವನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. 2 ದಿನಗಳಲ್ಲಿ 28, ಇಂದು 1 ಸೇರಿ ಒಟ್ಟು 29 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿವೆ. ಕಾರಣ ಕೇಳಿದರೆ ಬ್ಯಾಕ್ಟರಿಯಾ ಮೂಲಕ ಇನ್‌ಫೆಕ್ಸನ್ ಎನ್ನುತ್ತಿದ್ದಾರೆ. ಆದರೆ, ಇಲ್ಲಿ ಅಧಿಕಾರಿಗಳು ಮತ್ತು ವೈದ್ಯರು ನಿರ್ಲಕ್ಷ್ಯ ವಹಿಸಿರುವುದು ಗೋಚರಿಸುತ್ತಿದೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿ ವಿರುದ್ಧವು ಕ್ರಮವಾಗಬೇಕು. ಜೊತೆಗೆ ಇದಕ್ಕೆ ಮುಖ್ಯ ಜವಾಬ್ದಾರಿಯಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು.ಜಗದೀಶ ಶೆಟ್ಟರ್, ಸಂಸದರು