ಪ್ರಕಟವಾಗದ ಬಿಜೆಪಿ ಟಿಕೆಟ್, ಹೆಚ್ಚಿದ ಕುತೂಹಲ

KannadaprabhaNewsNetwork | Published : Mar 15, 2024 1:20 AM

ಸಾರಾಂಶ

ಬಿಜೆಪಿ ಬುಧವಾರ ರಾಜ್ಯದ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೆ ಉತ್ತರ ಕನ್ನಡಕ್ಕೆ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ.

ವಸಂತಕುಮಾರ್ ಕತಗಾಲ

ಕಾರವಾರ: ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇರುವ ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗಿದ್ದರೂ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಅಂತಿಮವಾಗದೆ ಇರುವುದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಎದೆಬಡಿತ ಹೆಚ್ಚಿಸಿದೆ. ಹಾಗೆಯೇ ಮತದಾರರನ್ನೂ ತುದಿಗಾಲಿನ ಮೇಲೆ ನಿಲ್ಲಿಸಿದೆ.

ಹೇಳಿಕೇಳಿ ಬಿಜೆಪಿ ಸ್ಪರ್ಧಾಕಾಂಕ್ಷಿಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. ಸಂಸದ ಅನಂತಕುಮಾರ ಹೆಗಡೆ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಹರಿಪ್ರಕಾಶ ಕೋಣೆಮನೆ, ರೂಪಾಲಿ ನಾಯ್ಕ, ಡಾ. ಜಿ.ಜಿ. ಹೆಗಡೆ, ಅನಂತಮೂರ್ತಿ ಹೆಗಡೆ, ನಾಗರಾಜ ನಾಯಕ, ಮನೋಜ ಬಾಡಕರ ಮತ್ತಿತರರು ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಈ ನಡುವೆ ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ್ ಜೀ, ಚಕ್ರವರ್ತಿ ಸೂಲಿಬೆಲೆ, ಸಂಸದ ಅನಂತಕುಮಾರ್ ಹೆಗಡೆ ಅವರು ಸ್ಪರ್ಧಿಸುತ್ತಿಲ್ಲ ಎಂದು ತಿಳಿದ ಮೇಲೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ 10ಕ್ಕೂ ಮೀರಿತ್ತು. ಆದರೆ ನಾಲ್ಕೂವರೆ ವರ್ಷಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಇದ್ದ ಅನಂತಕುಮಾರ ಹೆಗಡೆ ಹಠಾತ್ ಮೈ ಕೊಡವಿಕೊಂಡು ಕ್ಷೇತ್ರಾದ್ಯಂತ ಪ್ರಚಾರ ಶುರುವಿಟ್ಟುಕೊಂಡಾಗಲೂ ಅವರಿಗೆ ಟಿಕೆಟ್ ನೀಡುವುದು ಅನುಮಾನ ಇರುವುದರಿಂದ ಆಕಾಂಕ್ಷಿಗಳ ಪ್ರಯತ್ನ ಮುಂದುವರಿಯಿತು.

ಈಗ ಬಿಜೆಪಿ ಬುಧವಾರ ರಾಜ್ಯದ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆದರೆ ಉತ್ತರ ಕನ್ನಡಕ್ಕೆ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ. ಇದರಿಂದ ಟಿಕೆಟ್ ಆಕಾಂಕ್ಷಿಗಳ ಎದೆಬಡಿತ ಹೆಚ್ಚಿದೆ. ಪ್ರತಿ ಆಕಾಂಕ್ಷಿಯೂ ಕೊನೇ ಗಳಿಗೆಯ ಪ್ರಯತ್ನವನ್ನು ಶುರುವಿಟ್ಟುಕೊಂಡಿದ್ದಾರೆ.

ಜಿಲ್ಲೆಯ ಮತದಾರರೂ ಕೂಡ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವುದಕ್ಕೆ ಕಾದು ಕುಳಿತಿದ್ದರು. ಈಗ ಹೆಸರು ಪ್ರಕಟವಾಗದೆ ಎಲ್ಲರ ಕುತೂಹಲ ಇನ್ನಷ್ಟು ಹೆಚ್ಚಿದೆ. ಜತೆಗೆ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಸಿಗಲಿದೆ. ಸಿಗಲಾರದು ಎಂಬ ಚರ್ಚೆ ಜೋರಾಗಿದೆ.

ಸಂಸದ ಅನಂತಕುಮಾರ ಹೆಗಡೆ ಪಕ್ಷದ ಚಟುವಟಿಕೆಗಳಿಂದ ನಾಲ್ಕೂವರೆ ವರ್ಷಗಳ ಕಾಲ ದೂರ ಉಳಿಯದೆ ಇದ್ದಿದ್ದರೆ ಮೊದಲ ಪಟ್ಟಿಯಲ್ಲೇ ಅವರ ಹೆಸರು ಇರುತ್ತಿತ್ತು. ಮೊದಲ ಪಟ್ಟಿಯಲ್ಲಿ ಅವರ ಹೆಸರು ಇಲ್ಲ ಎಂದ ಮೇಲೆ ಈ ಕ್ಷೇತ್ರದಲ್ಲಿ ಟಿಕೆಟ್ ನೀಡಿಕೆಯ ಬಗ್ಗೆ ಪರ್ಯಾಯ ಹೆಸರುಗಳನ್ನು ಪರಿಶೀಲಿಸಲಾಗುತ್ತಿದೆ. ಅಂತಿಮವಾಗಿ ಒಂದು ನಿರ್ಧಾರಕ್ಕೆ ಹೈಕಮಾಂಡ್‌ ಬರಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಅನಂತಕುಮಾರ ಹೆಗಡೆ ಈಚಿನ ದಿನಗಳಲ್ಲಿ ನಿರಂತರವಾಗಿ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಟಿಕೆಟ್‌ಗಾಗಿ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಉಳಿದ ಆಕಾಂಕ್ಷಿಗಳೂ ಟಿಕೆಟ್‌ಗಾಗಿ ಗಂಭೀರ ಪ್ರಯತ್ನ ನಡೆಸಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕೀತು ಎಂಬ ಕುತೂಹಲ ಹಾಗೆಯೇ ಇದೆ.

Share this article