ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಬಿಸಿಲಿನ ಆರ್ಭಟ ನಿತ್ಯವೂ ಒಂದೊಂದು ಸಮಸ್ಯೆ ಸೃಷ್ಟಿಸುತ್ತಿದೆ. ಹಿಂದೆ ಬಿಸಿಲಿನ ದಾಹ ತೀರಿಸಿಕೊಳ್ಳಲು ಮನೆಯಲ್ಲಿದ್ದರೆ ಸಾಕು ಎನ್ನುವಂತಿತ್ತು. ಆದರೆ, ಈಗ ಜನತೆ ಮನೆಯಲ್ಲಿದ್ದರೂ ಇನ್ನಿಲ್ಲದ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.
ನಿತ್ಯವೂ ಬಿಸಿಲಿನ ಆರ್ಭಟ ಹೆಚ್ಚುತ್ತಾ ಸಾಗುತ್ತಿದೆಯೇ ಹೊರತು ಕಡಿಮೆಯಾಗುವ ಲಕ್ಷಣವೇ ಗೋಚರವಾಗುತ್ತಿಲ್ಲ. ಈ ದಗೆಯಿಂದ ಕೆಲಕಾಲ ಮುಕ್ತಿ ಪಡೆಯಲು ಹಲವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಕೆರೆ, ಈಜುಕೊಳಗಳಿಗೆ ತೆರಳಿ ಬಿಸಿಲಿನಿಂದ ಮುಕ್ತಿ ಪಡೆದರೆ, ಇನ್ನು ಕೆಲವರು ಬಗೆಬಗೆಯ ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವರು ನಿತ್ಯವೂ ಕೆಲಸ, ಕಾರ್ಯ ನಿಮಿತ್ತ ಹೊರಗಡೆ ಸಂಚರಿಸುವುದು ಅನಿವಾರ್ಯ. ಅಂಥವರಿಗಂತೂ ಸೂರ್ಯನು ಕಡುವೈರಿಯಂತೆ ಕಾಣುತ್ತಿದ್ದಾನೆ. ಬೆಳಗ್ಗೆ 8 ಗಂಟೆಯಾದರೆ ಸಾಕು ಮಧ್ಯಾಹ್ನದ ವೇಳೆಯಲ್ಲಿರುವ ಬಿಸಿಲಿನ ಝಳ ಮನೆಯಲ್ಲಿ ಉದ್ಭವವಾಗುತ್ತಿದೆ. ವಿದ್ಯುತ್ ಕಡಿತಗೊಂಡರಂತೂ ಮನೆಯಲ್ಲಿರುವವರ ಸ್ಥಿತಿ ಹೇಳತೀರದು. ಝಳಕ್ಕೆ ಹೆದರಿ ಹೊರಗಡೆ ಬಂದು ವಿಶ್ರಾಂತಿ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.ಏನೆಲ್ಲ ಸಮಸ್ಯೆ ಉದ್ಭವ?
ನಿರ್ಜಲೀಕರಣ, ಕಾಲರಾ, ಟೈಫಾಯ್ಡ್, ವಾಂತಿ-ಭೇದಿ, ಕಣ್ಣಿನ ಸಮಸ್ಯೆ, ತಲೆ ಸುತ್ತು, ಚರ್ಮದ ಸಮಸ್ಯೆ, ಮೂಗಿನಲ್ಲಿ ರಕ್ತಸ್ರಾವ, ಶ್ವಾಸಕೋಶ ತೊಂದರೆ, ಬೆವರಿನ ಗುಳ್ಳೆ, ಕೆಮ್ಮು, ಅಂಗೈ-ಅಂಗಾಲು ಉರಿ, ಉರಿ ಮೂತ್ರದಂತಹ ಸಮಸ್ಯೆಗಳು ಉಲ್ಬಣವಾಗುತ್ತಿವೆ.ಹೆಚ್ಚಾಗಿ ಹೊರಗಡೆ ಸಂಚರಿಸುತ್ತಿದ್ದರೆ ದೇಹದಲ್ಲಿ ಬೆವರುವಿಕೆ ಜಾಸ್ತಿಯಾಗಿ ದೇಹದಲ್ಲಿ ನಿರ್ಜಲೀಕರಣಕ್ಕೆ ಒಳಗಾಗುವ ಅಪಾಯವಿರುತ್ತದೆ. ಮಕ್ಕಳು ಹೆಚ್ಚಾಗಿ ಮನೆಯ ಹೊರಗಡೆ ಬಿಸಿಲಿನಲ್ಲಿ ಆಟವಾಡುವುದರಿಂದ ಮಕ್ಕಳಲ್ಲಿ ಬೆವರಿನ ಗುಳ್ಳೆ, ನಿರ್ಜಲೀಕರಣ, ಚರ್ಮದ ಸಮಸ್ಯೆ, ಉರಿಮೂತ್ರದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇನ್ನು ವೃದ್ಧರಿಗೆ ತಲೆ ಸುತ್ತುವುದು, ಕೆಮ್ಮು, ಅಂಗೈ-ಅಂಗಾಲು ಉರಿ, ಉರಿ ಮೂತ್ರದಂತಹ ಸಮಸ್ಯೆ ಕಂಡುಬರುತ್ತಿದೆ.
ಕಳೆದ ಒಂದು ತಿಂಗಳಿಂದ ಇಂತಹ ಸಮಸ್ಯೆಗಳಿರುವ ರೋಗಿಗಳೇ ಆಸ್ಪತ್ರೆಗೆ ಹೆಚ್ಚಾಗಿ ಬರುತ್ತಿದ್ದಾರೆ. ಆದಷ್ಟು ಮುಂಜಾಗ್ರತೆ ಕೈಗೊಳ್ಳುವಂತೆ ಸಲಹೆ ಕೊಟ್ಟು ಚಿಕಿತ್ಸೆ ನೀಡಿ ಕಳುಹಿಸಲಾಗುತ್ತಿದೆ ಎಂದು ಡಾ. ಈಶ್ವರ ಸವಣೂರ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.ಬಾಕ್ಸ್...ಮುಂಜಾಗ್ರತೆ ಅತ್ಯವಶ್ಯ
ನಿತ್ಯವೂ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದು, ಇಂತಹ ವೇಳೆ ಹೊರಗಡೆ ಹೆಚ್ಚಾಗಿ ಸಂಚರಿಸಿದಲ್ಲಿ ಬಳಲುವಿಕೆ, ತಲೆಸುಸ್ತು ಸಂಭವಿಸುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾದಷ್ಟು ಜಾಸ್ತಿ ನೀರು ಕುಡಿಯುವ ಹವ್ಯಾಸ ರೂಢಿಸಿಕೊಳ್ಳಿ. ನಿತ್ಯವೂ ಕನಿಷ್ಠ 2.5 ಲೀಟರ್‌ಗಳಿಗೂ ಹೆಚ್ಚು ನೀರು ಕುಡಿಯಬೇಕು. ಕಡ್ಡಾಯವಾಗಿ ಕುದಿಸಿ ಆರಿಸಿದ ಶುದ್ಧ ನೀರನ್ನೇ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಆದಷ್ಟು ಮಸಾಲೆ ಪದಾರ್ಥಗಳ ಸೇವನೆಯಿಂದ ದೂರವಿರುವುದು ಉತ್ತಮ. ಇದರೊಂದಿಗೆ ದೇಹಕ್ಕೆ ಆಯಾಸವಾಗದಂತೆ ದ್ರವರೂಪದ ಪಾನೀಯಗಳಾದ ಎಳನೀರು, ನಿಂಬೆ ಶರಬತ್, ಮಜ್ಜಿಗೆ, ಕಬ್ಬಿನ ಹಾಲು, ಗಂಜಿ, ಹಣ್ಣು-ಹಂಪಲು ಸೇವಿಸಬೇಕು. ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ವೇಳೆ ಆದಷ್ಟು ಸಂಚಾರ ಕಡಿಮೆ ಮಾಡುವುದು ಉತ್ತಮ. ಹೊರಗಡೆ ಹೋಗುವುದು ಅನಿವಾರ್ಯವಾದರೆ ಛತ್ರಿ, ತಂಪು ಕನ್ನಡಕ, ಟೋಪಿ ಧರಿಸಬೇಕು. ಮೈಗೆ ತೆಳುವಾದ ಹತ್ತಿ ಬಟ್ಟೆ ಧರಿಸಿ ಸಂಚರಿಸುವುದು ಉತ್ತಮ ಎಂದು ಡಾ. ಅರುಣಕುಮಾರ ಸಲಹೆ ನೀಡಿದ್ದಾರೆ. ವರ್ಷಕ್ಕಿಂತ ಈ ವರ್ಷ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಈ ಕುರಿತು ಪಾಲಕರು ತಿಳಿವಳಿಕೆ ಹೊಂದುವುದು ಅವಶ್ಯ. ಮಧ್ಯಾಹ್ನದ ಹೆಚ್ಚಿನ ಬಿಸಿಲು ಇರಲಿದೆ. ಇಂತಹ ವೇಳೆ ತಮ್ಮ ಮಕ್ಕಳು ಸಾಧ್ಯವಾದಷ್ಟು ಹೊರಗಡೆ ಸಂಚರಿಸದಂತೆ ನೋಡಿಕೊಳ್ಳಿ ಎಂದು ನಿವೃತ್ತ ಟಿಎಚ್‌ಒ ಡಾ. ಎಂ.ಆರ್. ನೂಲ್ವಿ ಹೇಳಿದರು.ಬಿಸಿಲಿನ ಆರ್ಭಟಕ್ಕೆ ಹೆದರಿ ಚಿಕಿತ್ಸೆ ಪಡೆದುಕೊಳ್ಳಲು ಬಸ್ಸಿನಲ್ಲೂ ಸಂಚರಿಸಲು ಆಗುತ್ತಿಲ್ಲ. ಮನೆಯಲ್ಲಾದರೂ ಕುಳಿತು ವಿಶ್ರಾಂತಿ ಪಡೆಯಬೇಕೆಂದರೆ ಅದೂ ಆಗುತ್ತಿಲ್ಲ. ಯಾವಾಗ ಈ ಬಿಸಿಲಿನಿಂದ ಮುಕ್ತಿ ದೊರೆಯುತ್ತದೆಯೋ ಎನ್ನುವಂತಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಮನೋಹರ ಮಲ್ಲೇನಹಳ್ಳಿ ಹೇಳಿದರು.