ರವಿ ಕಾಂಬಳೆ
ಕನ್ನಡಪ್ರಭ ವಾರ್ತೆ ಹುಕ್ಕೇರಿಶಿಥಿಲ ಶಾಲೆ, ಅಂಗನವಾಡಿಗಳ ರಿಪೇರಿ, ಗ್ರಂಥಾಲಯಗಳ ಪುನಶ್ಚೇತನ, ಆರೋಗ್ಯ ಕೇಂದ್ರಗಳ ಸುಧಾರಣೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹುಕ್ಕೇರಿ ತಾಲೂಕು ಪಂಚಾಯಿತಿ ಮಹತ್ವದ ಹೆಜ್ಜೆ ಇಟ್ಟಿದೆ.
ತಾಲೂಕಿನ ಆಯ್ದ ಗ್ರಾಮಗಳಲ್ಲಿ ಶಾಲೆ, ಅಂಗನವಾಡಿ, ಗ್ರಂಥಾಲಯ, ಆರೋಗ್ಯ ಕೇಂದ್ರಗಳನ್ನು ಸದೃಢಗೊಳಿಸಲು ಹುಕ್ಕೇರಿ ತಾಪಂ ವಿಶೇಷ ಯೋಜನೆ ರೂಪಿಸಿದೆ. ತಾಪಂನ 2024-25ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ₹1.93 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಯೋಜನೆ ಸಿದ್ಧಪಡಿಸಿದೆ. ಇದರೊಂದಿಗೆ ಸರ್ಕಾರಿ ಸಂಸ್ಥೆಗಳನ್ನು ಮತ್ತಷ್ಟು ಸಶಕ್ತಗೊಳಿಸಲು ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ.ಈ ಅನಿರ್ಬಂಧಿತ ಅನುದಾನವನ್ನು ಇಲಾಖಾವಾರು ಹಂಚಿಕೆ ಮಾಡಲಾಗಿದ್ದು ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಅದರಂತೆ ಶೇ.15 ರಷ್ಟು ಶಿಕ್ಷಣ ಇಲಾಖೆ, ಶೇ.15 ರಷ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶೇ.10 ರಷ್ಟು ಗ್ರಂಥಾಲಯ, ಶೇ.10 ರಷ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶೇ.50 ರಷ್ಟು ರಸ್ತೆ ಮತ್ತು ಇತರೆ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.
ಒಟ್ಟು ₹1.93 ಕೋಟಿ ವೆಚ್ಚದ ಈ ಅನುದಾನದಲ್ಲಿ ಹುಕ್ಕೇರಿ ಮತಕ್ಷೇತ್ರ ₹1.19 ಕೋಟಿ ಪಡೆಯುವ ಮೂಲಕ ಸಿಂಹಪಾಲು ದಕ್ಕಿಸಿಕೊಂಡಿದೆ. ಯಮಕನಮರಡಿ ಮತಕ್ಷೇತ್ರಕ್ಕೆ ₹74 ಲಕ್ಷಗಳನ್ನು ಹಂಚಿಕೆ ಮಾಡಲಾಗಿದೆ. ಮಾರ್ಗಸೂಚಿ ಅನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನರಿಗೂ ಅನುದಾನ ಕಾಯ್ದಿರಿಸಲಾಗಿದೆ.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ನೇತೃತ್ವದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ತಾಲೂಕಿನಾದ್ಯಂತ ಸುತ್ತಾಡಿ ತುರ್ತಾಗಿ ಮತ್ತು ಅಗತ್ಯವಾಗಿ ಆಗಬೇಕಿರುವ ಕಾಮಗಾರಿಗಳನ್ನು ಪಟ್ಟಿ ಮಾಡಿ ಈ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಿದೆ.
ಮಹತ್ವಾಕಾಂಕ್ಷಿ ಈ ಅನಿರ್ಬಂಧಿತ ಅನುದಾನದ ಕ್ರಿಯಾ ಯೋಜನೆಯ ಕಾಮಗಾರಿಗಳ ಕುರಿತು ಕಳೆದ ವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಂಡಿಸಿ ವಿಸ್ತೃತ ಚರ್ಚೆ ನಡೆಸಲಾಗಿದೆ. ವಿಸ್ತೃತ ಯೋಜನಾ ವರದಿಯುಳ್ಳ ಪ್ರಸ್ತಾವನೆಯನ್ನು ಬೆಳಗಾವಿ ಜಿಪಂಗೆ ಕಳುಹಿಸಲಾಗಿದ್ದು ಬರುವ ವಾರದಲ್ಲಿ ಅನುಮೋದನೆಗೊಂಡು ಶೀಘ್ರವೇ ಕಾಮಗಾರಿಗಳು ಆರಂಭವಾಗುವ ನಿರೀಕ್ಷೆಯಿದೆ.ಅನಿರ್ಬಂಧಿತ ಅನುದಾನ ಅನುಷ್ಠಾನದಿಂದ ತಾಲೂಕಿನ ಆಯ್ದ ಹಳ್ಳಿಗಳ ಶಿಥಿಲ ಶಾಲೆ, ಅಂಗನವಾಡಿಗಳಿಗೆ ದುರಸ್ತಿ ಭಾಗ್ಯ ಒಲಿದು ಬಂದಿದೆ. ಗ್ರಂಥಾಲಯಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ನವೀಕರಣ ಕಾಣುವ ಸುಯೋಗ ಕೂಡಿ ಬಂದಿದೆ. ಅಲ್ಲದೇ ರಸ್ತೆ ಮತ್ತು ಇತರೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಆಸ್ತಿ ಸೃಜನೆಗೆ ಒತ್ತು ನೀಡಲಾಗಿದೆ. ತನ್ಮೂಲಕ ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸಲು ಹುಕ್ಕೇರಿ ತಾಪಂ ಮುಂದಾಗಿರುವ ಕ್ರಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಶಾಲೆಗಳಿಗೆ ಡೆಸ್ಕ್, ಕಂಪ್ಯೂಟರ್ ಪೂರೈಕೆ, ಸಂರಕ್ಷಣಾ ಗೋಡೆ ನಿರ್ಮಾಣ, ಬಾಲಸ್ನೇಹಿ ಅಂಗನವಾಡಿ ನಿರ್ಮಾಣ, ಗ್ರಂಥಾಲಯಗಳಿಗೆ ಸಾಧನ-ಸಲಕರಣೆ ವಿತರಣೆ, ವಿಕಲಚೇತನ ಸ್ನೇಹಿ ಪೀಠೋಪಕರಣ ಪೂರೈಕೆ, ಪಶು ಆಸ್ಪತ್ರೆ ರಿಪೇರಿಯಂಥ ಕಾಮಗಾರಿಗಳೂ ಇವೆ ಎಂದು ತಾಪಂ ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.ಹುಕ್ಕೇರಿ ತಾಪಂನಿಂದ ಅನಿರ್ಬಂಧಿತ ಅನುದಾನದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಅಂಗನವಾಡಿ, ಶಾಲೆ, ಗ್ರಂಥಾಲಯಗಳನ್ನು ಪುನರುಜ್ಜೀವನಗೊಳಿಸಲು ಈ ಯೋಜನೆ ರೂಪಿಸುವುದರೊಂದಿಗೆ ಅನುದಾನ ಸದ್ಬಳಕೆಗೆ ಕ್ರಮ ವಹಿಸಲಾಗಿದೆ.- ಟಿ.ಆರ್.ಮಲ್ಲಾಡದ, ಇಒ ತಾಪಂ ಹುಕ್ಕೇರಿ