ಕವಿವಿಯಲ್ಲಿ ಪ್ರಯೋಗ ಪ್ರಾಣಿಗಳ ಅವೈಜ್ಞಾನಿಕ ವಿಲೇವಾರಿ

KannadaprabhaNewsNetwork |  
Published : Feb 29, 2024, 02:07 AM IST
28ಡಿಡಬ್ಲೂಡಿ2ಕರ್ನಾಟಕ ವಿವಿ ಪ್ರಾಣಿಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಪ್ರಯೋಗಕ್ಕೆ ಬಳಸಿ ಬಿಸಾಡಿದ ಇಲಿ. | Kannada Prabha

ಸಾರಾಂಶ

ಸರ್ ಸಿ.ವಿ. ರಾಮನ್ ಅವರ ಜನ್ಮದಿನದ ಹಿನ್ನೆಲೆ ಹಾಗೂ ಫೆ. 28 ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆಯಲ್ಲಿ ಪರಿಸರ ಪ್ರಿಯರು ಕವಿವಿ ಆವರಣದಲ್ಲಿ ಪಕ್ಷಿಗಳ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಪ್ರಯೋಗಕ್ಕೆ ಬಳಸಿ ಎಲ್ಲೆಂದರಲ್ಲಿ ಎಸೆದ ಪ್ರಾಣಿಗಳ ಕಳೇಬರಗಳು ಕಂಡು ಬಂದಿವೆ.

ಕನ್ನಡಪ್ರಭ ವಾರ್ತೆ ಧಾರವಾಡ

ಯಾವುದೇ ಪ್ರಯೋಗಾಲಯದಲ್ಲಿ ಪಕ್ಷಿ ಅಥವಾ ಪ್ರಾಣಿಗಳನ್ನು ಪ್ರಯೋಗಕ್ಕೆ ಬಳಸಿ ಅವುಗಳನ್ನು ಮಾರ್ಗಸೂಚಿ ಪ್ರಕಾರ ವಿಲೇವಾರಿ ಮಾಡಬೇಕು. ಎಲ್ಲೆಂದರಲ್ಲಿ ಬೀಸಾಡುವುದು ಅಪರಾಧ. ಆದರೆ, ಕಲಿಕಾ ಉತ್ಕೃಷ್ಟತೆಗಾಗಿ ಮನ್ನಣೆ ಪಡೆದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಯೋಗಾಲಯದಲ್ಲಿ ಪ್ರಯೋಗಕ್ಕೆ ಬಳಸಿ ಎಲ್ಲೆಂದರಲ್ಲಿ ಸತ್ತ ಪ್ರಾಣಿ-ಪಕ್ಷಿಗಳನ್ನು ಅವೈಜ್ಞಾನಿಕವಾಗಿ ಬಿಸಾಡಲಾಗಿದೆ. ಸತ್ತ ಪ್ರಾಣಿಗಳ ವಾಸನೆ ಹಿಡಿದು ಬಿಡಾಡಿ ನಾಯಿಗಳು ಅವುಗಳನ್ನು ಭಕ್ಷಿಸುತ್ತಿರುವ ದೃಶ್ಯ ವಿವಿ ಆವರಣದಲ್ಲಿ ಕಂಡುಬಂದಿದೆ.

ಸರ್ ಸಿ.ವಿ. ರಾಮನ್ ಅವರ ಜನ್ಮದಿನದ ಹಿನ್ನೆಲೆ ಹಾಗೂ ಫೆ. 28 ರಾಷ್ಟ್ರೀಯ ವಿಜ್ಞಾನ ದಿನದ ಹಿನ್ನೆಲೆಯಲ್ಲಿ ಪರಿಸರ ಪ್ರಿಯರು ಕವಿವಿ ಆವರಣದಲ್ಲಿ ಪಕ್ಷಿಗಳ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಪ್ರಯೋಗಕ್ಕೆ ಬಳಸಿ ಎಲ್ಲೆಂದರಲ್ಲಿ ಎಸೆದ ಪ್ರಾಣಿಗಳ ಕಳೇಬರಗಳು ಕಂಡು ಬಂದಿದ್ದು, ವಿವಿ ನಡೆಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲೆಂದರಲ್ಲಿ ಬಿಸಾಡಿದ ಕಳೇಬರಗಳನ್ನು ಕಬಳಿಸಲು ಹೊಂಚು ಹಾಕಿದ ಹತ್ತಾರು ಬೀದಿ ನಾಯಿಗಳು, ಕಚ್ಚಾಡುತ್ತ ದಾರಿಹೋಕರ ಮೇಲೂ ಎರಗಿವೆ. ರಾಸಾಯನಿಕ ಬಳಸಿ ಪ್ರಯೋಗಕ್ಕೆ ಒಡ್ಡಿದ ಪ್ರಾಣಿಗಳನ್ನು ಹೀಗೆ ಎಲ್ಲೆಂದರಲ್ಲಿ ಬಿಸಾಡಿದ್ದು, ಬೀದಿ ನಾಯಿಗಳು ಭಕ್ಷಿಸಿ ಸತ್ತದ್ದೂ ಇದೆ ಎಂದು ಪರಿಸರವಾದಿಗಳು ವಿವಿ ನಡೆಯನ್ನು ಪ್ರಶ್ನಿಸಿದ್ದಾರೆ.

ಮಾರ್ಗಸೂಚಿ ಪಾಲಿಸುತ್ತಿಲ್ಲ

ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗಾಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ಬಿಳಿ ಇಲಿ (ಅಲ್ಬಿನೊ ಮೌಸ್) ಸೇರಿದಂತೆ, ಗಿನಿ ಪಿಗ್, ಮೊಲಗಳು ಮತ್ತು ಮೀನುಗಳ ವೈಜ್ಞಾನಿಕ ನಿರ್ವಹಣೆ ಹಾಗೂ ಬಳಿಕ ಸೂಕ್ತರೀತಿ (ಸುಟ್ಟು) ವಿಲೇವಾರಿಗೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿದೆ. ಕಂಟ್ರೋಲ್ ಆಂಡ್ ಸುಪರವಿಷನ್ ಆಫ್ ಎಕ್ಸಪೀರಿಮೆಂಟ್ಸ್ ಆನ್ ಎನಿಮಲ್ಸ್ (ಸಿ.ಪಿ.ಸಿ.ಎಸ್.ಇ.ಎ) ಅಡಿ, ಇನ್‌ಸ್ಟಿಟ್ಯೂಷನಲ್ ಅನಿಮಲ್ ಎಥಿಕ್ಸ್ ಕಮಿಟಿ (ಐ.ಎ.ಇ.ಸಿ) ಮೂಲಕ, ಸ್ಟ್ಯಾಂಡರ್ಡ್‌ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್.ಓ.ಪಿ.) ಒಪ್ಪಿತ ಕಾರ್ಯಸೂಚಿ ಕವಿವಿ ಆಡಳಿತ ಮತ್ತು ವಿಭಾಗಗಳು ಪಾಲಿಸಬೇಕಿರುವುದು ಕಡ್ಡಾಯ. ಆವರಣದ ಪರಿಸರ ಆರೋಗ್ಯ ಮತ್ತು ಶುಚಿತ್ವ ಕಾಪಾಡಬೇಕಾದ ಹೊಣೆ ಕವಿವಿ ಆಡಳಿತ ಮಂಡಳಿಯದ್ದು. ಆದರೆ, ಸತ್ತ ಪ್ರಾಣಿಗಳ ಕಳೇಬರ ಹಾಗೂ ಅವುಗಳನ್ನು ಮುಕ್ಕುತ್ತಿರುವ ನಾಯಿಗಳನ್ನು ನೋಡಿದರೆ ವಿವಿ ಯಾವ ನಿಯಮ ಪಾಲಿಸುತ್ತಿಲ್ಲ ಎಂಬ ಸಂಶಯ ನಿಶ್ಚಿತ.

ಮಾನವೀಯ ನಡೆ

ಪ್ರಯೋಗಕ್ಕೆ ಬಳಸಿದ ಪ್ರಾಣಿಗಳನ್ನು ಸತ್ತ ಬಳಿಕ ಬಿಸಾಡುವುದು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಾಮಾನ್ಯ ನಡೆಯಾದರೆ, ಕೆಸಿಡಿಯಲ್ಲಿರುವ ಪ್ರಾಣಿಶಾಸ್ತ್ರ ಸ್ನಾತಕ ಅಧ್ಯಯನ ವಿಭಾಗದಲ್ಲಿ ಪರವಾನಗಿ ಇಲ್ಲದೇ ಹನುಮಾನ್ ಲಂಗೂರ್ ಸೇರಿದಂತೆ, ಹಲವು ಪ್ರಾಣಿ, ಪಕ್ಷಿಗಳನ್ನು ‘ಟ್ಯಾಕ್ಸಿಡೆರ್ಮಿ’ಗೆ ಅಳವಡಿಸಿ, ಪ್ರಾಣಿ ಸಂಗ್ರಹಾಲಯದಲ್ಲಿ ಇಡುವ ತಜ್ಞರೂ ಇದ್ದಾರೆ. ಇನ್ನಾದರೂ ಮಾನವೀಯ ನಡೆ ಕವಿವಿ ಮೈಗೂಡಿಸಿಕೊಳ್ಳಬೇಕು ಎಂದು ಸಿಂಡಿಕೇಟ್‌ ಮಾಜಿ ಸದಸ್ಯ ಹರ್ಷವರ್ಧನ ಶೀಲವಂತ ಆಗ್ರಹಿಸಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ