ಹಾವೇರಿ: ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿ ನಗರದಲ್ಲಿ ಮನೆ ಮನೆಗೆ ಗ್ಯಾಸ್ ವಿತರಿಸುವ ಪೈಪ್‌ಲೈನ್ ಕಾಮಗಾರಿಯನ್ನು ಚೆನ್ನೈ ಮೂಲದ ಖಾಸಗಿ ಕಂಪನಿಯವರು ಕೈಗೆತ್ತಿಕೊಂಡಿದ್ದು, ಅವೈಜ್ಞಾನಿಕ ರೀತಿಯಲ್ಲಿ ಮಾಡಲಾಗುತ್ತಿದೆ. ಆದ್ದರಿಂದ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಸ್ ಬೆಂಗಳೂರ ಮಾತನಾಡಿ, ಕಂಪನಿಯವರು ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ನಗರದಲ್ಲಿನ ಹಳೆ ಪಿ.ಬಿ. ರಸ್ತೆಯನ್ನು ಅವೈಜ್ಞಾನಿಕವಾಗಿ ಅಗೆದು, ಸುಸ್ಥಿತಿಯಲ್ಲಿದ್ದ ಹೆದ್ದಾರಿಗೆ ಸಂಚಕಾರ ತಂದಿದ್ದಾರೆ. ತಕ್ಷಣ ಕಂಪನಿಯ ಮೇಲೆ ಕ್ರಮಕೈಗೊಂಡು, ಅವರಿಂದಲೇ ರಸ್ತೆ ದುರಸ್ತಿಗೊಳಿಸಬೇಕು. ಹಾವೇರಿ ನಗರದ ಪಿ.ಬಿ. ರಸ್ತೆ, ಮುನ್ಸಿಪಲ್ ಹೈಸ್ಕೂಲ್ ರಸ್ತೆ, ದೇವಗಿರಿ ರಸ್ತೆ, ವಿದ್ಯಾನಗರ ಸೇರಿದಂತೆ ಹಾವೇರಿ ತಾಲೂಕಿನ ವಿವಿಧ ಕಡೆಗಳಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ಚೆನ್ನೈ ಮೂಲದ ಎಬಿಪಿ ಪ್ರಥಮ ಸಿಟಿ ಗ್ಯಾಸ್ ಕಂಪನಿಯವರು ಎರಡು ವರ್ಷಗಳ ಹಿಂದೆ ಆರಂಭಿಸಿದ್ದಾರೆ. ಅವರು ಕೈಗೊಂಡಿರುವ ಕಾಮಗಾರಿಯಿಂದ ಸುಸ್ಥಿತಿಯಲ್ಲಿದ್ದ ರಸ್ತೆಗಳು ಹಾಳಾಗಿವೆ. ಅನೇಕ ಅಪಘಾತಗಳು ಸಂಭವಿಸಿವೆ. ಪೈಪ್ ಹಾಕಿದ ಸ್ಥಳದಲ್ಲಿ ಮಣ್ಣು, ಜಲ್ಲಿ ಕಲ್ಲು ಹಾಕಿ ಹೋಗುತ್ತಿದ್ದಾರೆ. ಸರಿಯಾದ ಎಚ್ಚರಿಕೆ ಫಲಕಗಳನ್ನು ಹಾಕುತ್ತಿಲ್ಲ. ತಿಂಗಳು ಕಳೆದರೂ ರಸ್ತೆ ಸರಿಪಡಿಸುತ್ತಿಲ್ಲ. ಇದರಿಂದ ಮಳೆಬಂದ ವೇಳೆ ರಸ್ತೆಯ ಮೇಲೆ ನೀರು ಹರಿಯುವುದರಿಂದ ಇವರು ಕೈಗೊಂಡಿರುವ ಕಾಮಗಾರಿಯ ಗುಂಡಿಯಲ್ಲಿ ವಾಹನಗಳು, ಸವಾರರು ಸಿಲುಕಿ ಗುಂಡಿಯಿಂದ ಹೊರಬರಲು ಹರ ಸಾಹಸ ಪಡಬೇಕಾಗಿದೆ ಎಂದು ಹೇಳಿದರು.ಈ ಬಗ್ಗೆ ಹಲವಾರು ಬಾರಿ ಸಾರ್ವಜನಿಕರು ಲೋಕೋಪಯೋಗಿ ಇಲಾಖೆ, ನಗರಸಭೆ ಅಧಿಕಾರಿಗಳಿಗೆ ಹೇಳಿ, ದೂರು ನೀಡಿದರೆ, ಅಧಿಕಾರಿಗಳು ಇಲ್ಲಿಯವರೆಗೆ ಕಂಪನಿಯವರ ಮೇಲೆ ಯಾವುದೇ ಕ್ರಮ ತಗೆದುಕೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವಾಗಿ ಸರಿಯಾದ ಮಾಹಿತಿಯನ್ನೂ ಸಾರ್ವಜನಿಕರಿಗೆ ನೀಡುತ್ತಿಲ್ಲ. ಆದ್ದರಿಂದ ಕಾಮಗಾರಿ ವೀಕ್ಷಣೆ ಮಾಡಿ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಸೂಚಿಸಬೇಕು. ಈ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಂಡು ಅವೈಜ್ಞಾನಿಕ ರೀತಿಯಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಮಾಡಿರುವ ಕಂಪನಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು. ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಆನವಟ್ಟಿ, ಪ್ರಮುಖರಾದ ಶಿವಣ್ಣ ಹೂಗಾರ, ಸತೀಶ ಮಡಿವಾಳರ, ಮಾಲತೇಶ ಬಜ್ಜಿ ಇತರರು ಇದ್ದರು.