ಅವೈಜ್ಞಾನಿಕ ಆದೇಶ: ಗ್ರಾಪಂಗಳಿಗೆ ಆರ್ಥಿಕ ಹೊರೆ

KannadaprabhaNewsNetwork | Published : Mar 14, 2025 12:33 AM

ಸಾರಾಂಶ

ಕೆಲವು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರಗಳು ಒಂದಿಲ್ಲೊಂದು ರೀತಿಯಲ್ಲಿ ಆರ್ಥಿಕವಾಗಿ ಹೊರೆಯಾಗುವಂತಹ ಅವೈಜ್ಙಾನಿಕ ಆದೇಶಗಳನ್ನು ನೀಡುತ್ತಿವೆ. ಇತ್ತ ಗ್ರಾಮ ಪಂಚಾಯಿತಿಗಳು ಸರ್ಕಾರದ ಆದೇಶವನ್ನು ಪಾಲಿಸಲೂ ಆಗದೇ, ನಿರ್ಲಕ್ಷಿಸಲೂ ಆಗದೇ ತ್ರಿಶಂಕು ಪರಿಸ್ಥಿತಿಯಲ್ಲಿ ಉಳಿದುಕೊಂಡಿವೆ.

ಅರಹತೊಳಲು ಕೆ.ರಂಗನಾಥಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಕೆಲವು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರಗಳು ಒಂದಿಲ್ಲೊಂದು ರೀತಿಯಲ್ಲಿ ಆರ್ಥಿಕವಾಗಿ ಹೊರೆಯಾಗುವಂತಹ ಅವೈಜ್ಙಾನಿಕ ಆದೇಶಗಳನ್ನು ನೀಡುತ್ತಿವೆ. ಇತ್ತ ಗ್ರಾಮ ಪಂಚಾಯಿತಿಗಳು ಸರ್ಕಾರದ ಆದೇಶವನ್ನು ಪಾಲಿಸಲೂ ಆಗದೇ, ನಿರ್ಲಕ್ಷಿಸಲೂ ಆಗದೇ ತ್ರಿಶಂಕು ಪರಿಸ್ಥಿತಿಯಲ್ಲಿ ಉಳಿದುಕೊಂಡಿವೆ.ಸಾರ್ವಜನಿಕ ಗ್ರಂಥಾಲಯ ಮೇಲ್ವಿಚಾರಕರಿಗೆ ಸರ್ಕಾರ ನೀಡುತ್ತಿರುವ 17,924 ರು. ವೇತನ ಪೈಕಿ ಸರ್ಕಾರದಿಂದ 12 ಸಾವಿರ ರು. ಮಾತ್ರ ನೀಡಲಾಗುತ್ತಿದ್ದು, ಉಳಿದ 5,924 ರು. ಅನ್ನು ವರ್ಗ ಒಂದರಿಂದ ಪಂಚಾಯಿತಿಯಿಂದಲೇ ನೀಡಬೇಕು. ಜೊತೆಗೆ ಸ್ವಚ್ಛತಾ ವಾಹನಕ್ಕೆ ಡ್ರೈವರ್ ನೇಮಕ ಮಾಡಿ ಸಂಬಳ ನೀಡುವುದು, ಫಾಗ್ ಯಂತ್ರಕ್ಕೆ ಹಣ ನೀಡುವುದು, ಸ್ವಸಹಾಯ ಸಂಘದ ಇಬ್ಬರು ಮಹಿಳಾ ಅಭ್ಯರ್ಥಿಗಳ ತರಬೇತಿಗೆ ತಲಾ 25 ಸಾವಿರ ರು. ಹಣವನ್ನು ಗ್ರಾಮ ಪಂಚಾಯಿತಿಯಿಂದಲೇ ಭರಿಸುವಂತೆ ಆದೇಶ ನೀಡಿದೆ. ಇದು ಗ್ರಾಪಂಗಳಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂಬುದು ಪಿಡಿಒಗಳ ಅಳಲು. ನ್ಯಾಪ್ಕಿನ್ ಇನ್ಸುಲೇಟರ್ 35 ಸಾವಿರ ರು., ಕಸ ವಿಲೇವಾರಿ ಆಟೋಗೆ 3.5 ಲಕ್ಷ ರು. ಮತ್ತು ಅದರ ವಿಮಾ ಮೊತ್ತ ಪ್ರತಿ ವರ್ಷ 19329 ರು. ಸೇರಿದಂತೆ ಇನ್ನೂ ಅನೇಕ ವೆಚ್ಚಗಳು ಗ್ರಾಮ ಪಂಚಾಯಿತಿಗೆ ಹೊರೆಯಾಗಿ ಪರಿಣಮಿಸುತ್ತಿವೆ. ಒಟ್ಟಿನಲ್ಲಿ ಭದ್ರಾವತಿ ತಾಲೂಕಿನ 39 ಮತ್ತು ಜಿಲ್ಲೆಯ 252 ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಇಬ್ಬರು ಮಹಿಳಾ ಅಭ್ಯರ್ಥಿಗಳಿಗೆ ತರಬೇತಿಗೆ 1.26 ಕೋಟಿ ರುಪಾಯಿಗಳು ಖರ್ಚಾಗುತ್ತಿದೆ. ಸರ್ಕಾರ ಒಂದು ನೀತಿಯನ್ನು ರೂಪಿಸುವಾಗ ಎಲ್ಲದನ್ನೂ ಒಂದೇ ನಿಟ್ಟಿನಲ್ಲಿ ಯೋಚನೆ ಮಾಡಿ ರೂಪಿಸುತ್ತದೆ. ಆದರೆ ರಾಜ್ಯದ ಎಲ್ಲಾ ಪಂಚಾಯಿತಿಗಳ ಆದಾಯ ( ಡಿಮ್ಯಾಂಡ್ ) ಒಂದೇ ಸಮನಾಗಿಲ್ಲ. ಕೆಲವು ಪಂಚಾಯಿತಿಗಳ ಡಿಮ್ಯಾಂಡ್ ಉತ್ತಮವಾಗಿದ್ದರೆ ಇನ್ನೂ ಕೆಲ ಪಂಚಾಯಿತಿಗಳ ಡಿಮ್ಯಾಂಡ್ 3 ಅಥವಾ 4 ಲಕ್ಷದ ಒಳಗೆ ಇದೆ. ಅಂತಹ ಪಂಚಾಯಿತಿಗಳು ಸರ್ಕಾರದ ಇಂತಹ ಆರ್ಥಿಕ ಹೊರೆಯಾಗುವಂತಹ ಖರ್ಚುಗಳನ್ನು ಭರಿಸುವುದು ಕಷ್ಟವಾಗುತ್ತಿದೆ.

ಪಂಚಾಯಿತಿಗಳಿಗೆ ಸರ್ಕಾರದ ಕೆಲವೊಂದು ಆದೇಶಗಳು ಆರ್ಥಿಕ ಹೊರೆಯಾಗಿರುವು ಸತ್ಯ. ಎಲ್ಲಾ ಪಂಚಾಯಿತಿಗಳು ಆರ್ಥಿಕವಾಗಿ ಸಮರ್ಪಕವಾಗಿಲ್ಲ. ಕೆಲವೊಂದು ತರಬೇತಿಗೆ ಪಂಚಾಯಿತಿಗಳೇ ಭರಿಸಬೇಕೆಂಬುದು ಯಾವ ನ್ಯಾಯ ? ಗ್ರಾಮ ಪಂಚಾಯಿತಿಗಳಲ್ಲಿ ನ್ಯಾಯಯುತವಾಗಿ ದುಡಿಯುವ ಸಿಬ್ಬಂದಿಗಳಿಗೆ ವೇತನ ಹೆಚ್ಚಾಗಬೇಕು. ಆದರೆ ಅದು ಬಿಟ್ಟು ವಿನಾ ಕಾರಣ ಹಣಕಾಸಿನ ವೆಚ್ಚಕ್ಕೆ ಪಂಚಾಯಿತಿಗಳಿಗೆ ಹೊರೆ ನೀಡುತ್ತಿದೆ.

- ವೈ.ಎಲ್.ಗಂಗಾಧರ್ ನಾಯ್ಕ್, ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ.ಗ್ರಾಪಂಗಳಿಗೆ ನೂರಾರು ಖರ್ಚುಗಳು ಇವೆ. ಒಂದು ಸಣ್ಣ ಕೆಲಸ ಆಗಿಲ್ಲ ಎಂದರೆ ಜನ ಕಚೇರಿಗೆ ಬಂದು ಗಲಾಟೆ ಮಾಡುತ್ತಾರೆ. ಊರಲ್ಲಿ ನಡೆಯುವ ಎಲ್ಲಾ ಕಾರ್ಯಗಳಿಗೂ ಪಂಚಾಯಿತಿಯೇ ಭಾಗಿಯಾಗಬೇಕು. ಚರಂಡಿ ಸ್ವಚ್ಛತೆ, ಕುಡಿಯುವ ನೀರು, ಬೀದಿದೀಪ, ಶೈಕ್ಷಣಿಕ ವಿಚಾರ, ಅಂಗನವಾಡಿಗಳ ನಿರ್ವಹಣೆ ಸೇರಿದಂತೆ ಎಲ್ಲಾ ವಿಚಾರಕ್ಕೂ ಪಂಚಾಯಿತಿಯೇ ಆಧಾರ. ಹೀಗಿರುವಾಗ ಬೇರೆ ಬೇರೆ ವಿಚಾರಕ್ಕೆ ಪಂಚಾಯಿತಿ ಹಣಕಾಸಿನ ವೆಚ್ಚ ಭರಿಸುವುದು ಕಷ್ಟವಾಗುತ್ತದೆ.

-- ಬಿ.ಸಂಗಮೇಶ್, ಬೈರನಹಳ್ಳಿ ಗ್ರಾಪಂ ಸದಸ್ಯ.

Share this article