ಸಮಯಕ್ಕಿಲ್ಲದ ಬಸ್‌, ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork | Published : Dec 7, 2023 1:15 AM

ಸಾರಾಂಶ

ಕನ್ನಡಪ್ರಭ ವಾರ್ತೆ ನರಗುಂದಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಇಲ್ಲದ ಕಾರಣದಿಂದ ಶಿರೋಳ ಗ್ರಾಮದಲ್ಲಿ ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿಯನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.ತಾಲೂಕಿನ ಶಿರೋಳ ಗ್ರಾಮದಲ್ಲಿ ಬುಧವಾರ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ರಾಜ್ಯ ಹೆದ್ದಾರಿ ಅಡ್ಡಗಟ್ಟಿ ರೋಣ ಡಿಪೋ ಹಾಗೂ ನರಗುಂದ ಡಿಪೋದ ಬಸ್ ಗಳನ್ನು ತಡೆದು ಸಾರಿಗೆ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ನರಗುಂದಸಮಯಕ್ಕೆ ಸರಿಯಾಗಿ ಬಸ್ ಸೌಕರ್ಯ ಇಲ್ಲದ ಕಾರಣದಿಂದ ಶಿರೋಳ ಗ್ರಾಮದಲ್ಲಿ ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿಯನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ತಾಲೂಕಿನ ಶಿರೋಳ ಗ್ರಾಮದಲ್ಲಿ ಬುಧವಾರ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿ ರಾಜ್ಯ ಹೆದ್ದಾರಿ ಅಡ್ಡಗಟ್ಟಿ ರೋಣ ಡಿಪೋ ಹಾಗೂ ನರಗುಂದ ಡಿಪೋದ ಬಸ್ ಗಳನ್ನು ತಡೆದು ಸಾರಿಗೆ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಸ್ಥಳೀಯ ಮುಖಂಡರು ಪ್ರತಿಭಟನೆ ಕೈಬಿಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು. ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಸಮರ್ಪಕವಾಗಿಲ್ಲ. ವಿದ್ಯಾರ್ಥಿಗಳು ಪರದಾಡುವುದು ತಪ್ಪುತ್ತಿಲ್ಲ. ನಾವು ಇಲ್ಲಿಂದ ಹಾಗೋ ಹೀಗೋ ಕಾಲೇಜು ತಲುಪುವುದರೊಳಗೆ ಒಂದೆರಡು ಕ್ಲಾಸ್ ಮುಗಿದಿರುತ್ತದೆ. ಅನೇಕ ಸಲ ಬಸ್ ಸೌಕರ್ಯ ಇಲ್ಲದ್ದರಿಂದ ಕೊಣ್ಣೂರದಿಂದ ನಡೆದು ಬಂದಿದ್ದೇವೆ. ನಮ್ಮ ಪರಿಸ್ಥಿತಿ ಯಾರಿಗೆ ಹೇಳಬೇಕು? ಈ ಹಿಂದೆಯೂ ಸಾಕಷ್ಟು ಬಾರಿ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಪರಿಹಾರ ದೊರಕಿಲ್ಲ. ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದರು. ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆ ಈಡೇರಿಸುವ ವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಆನಂತರ ಡಿಪೋ ಮ್ಯಾನೇಜರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಬೆಳಗ್ಗೆ ಹಾಗೂ ಸಾಯಂಕಾಲ ಸಮಯ ವಿದ್ಯಾರ್ಥಿಗಳ ಸಂಚಾರಕ್ಕೆ ಅಡೆತಡೆ ಆಗದಂತೆ ಬಸ್ ಸೌಕರ್ಯ ಒದಗಿಸಬೇಕು. ಬಸ್ ಅನನುಕೂಲ ಸಮಸ್ಯೆಯಿಂದ ನಮ್ಮ ಶೈಕ್ಷಣಿಕ ಜೀವನಕ್ಕೆ ಸಾಕಷ್ಟು ತೊಂದರೆಯಾಗುತ್ತದೆ. ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸಲು ಕೂಡಲೇ ಕ್ರಮ ತಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಡಿಪೋ ಮ್ಯಾನೇಜರ್‌ಗೆ ಮನವಿ ಮಾಡಿದರು.ಮನವಿಗೆ ಸ್ಪಂದಿಸಿದ ಮ್ಯಾನೇಜರ್ ಇನ್ನೆರಡು ದಿನಗಳಲ್ಲಿ ಬಸ್ ಸೌಲಭ್ಯ ಕಲ್ಪಿಸುತ್ತವೆ. ಪರಿಹರಿಸದಿದ್ದ ಪಕ್ಷದಲ್ಲಿ ವಿದ್ಯಾರ್ಥಿಗಳ ಮುಂದಿನ ನಿಲುವಿಗೆ ನಾವು ಬದ್ಧರಾಗಿರುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ಸಂಚಾರ ಅಸ್ತವ್ಯಸ್ತ: ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಎರಡು ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಶರಣಪ್ಪ ಕಾಡಪ್ಪನವರ, ಈಶ್ವರಗೌಡ ತಿರಕನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಬಾಲಪ್ಪ ಮೂಲಿಮನಿ, ಫಕೀರಪ್ಪ ಹಡಪದ, ಗಿರೀಶ ಗಾಣಿಗೇರ ಇದ್ದರು.

Share this article