(ಮಳೆ ಸ್ಟೋರಿ) ಅಕಾಲಿಕ ಮಳೆ: ಕಾಫಿ, ಭತ್ತ ಬೆಳೆಗಾರರು ಕಂಗಾಲು!

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಜಿಲ್ಲೆಯಲ್ಲಿ ಈಗಾಗಲೇ ಕಾಫಿ ಹಣ್ಣಾಗಿದ್ದು, ಫಸಲು ಕೊಯ್ಲು ಕೂಡ ನಡೆಯುತ್ತಿದೆ. ಆರದೆ ಇದೀಗ ದಿಢೀರ್ ಬಂದ ಮಳೆಯಿಂದ ಕಾಫಿ ಬೆಳೆಗಾರರು ದೊಡ್ಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಣ್ಣಾದ ಕಾಫಿ ಕೊಯ್ಲು ಮಾಡಲು ಆಗದಂತಹ ಪರಿಸ್ಥಿತಿಯನ್ನು ಮಳೆ ತಂದೊಡ್ಡಿದೆ. ಮತ್ತೊಂದು ಕಡೆ ಬಿಸಿಲಿನ ವಾತಾವರಣ ಇಲ್ಲದೆ ಕಾಫಿ ಒಣಗಿಸಲು ಕೂಡ ಅಸಾಧ್ಯವಾಗಿದೆ. ಮಳೆಗೆ ಒಣಗಿಸಿದ ಕಾಫಿ ಒದ್ದೆಯಾಗಿ ಗುಣಮಟ್ಟ ಕಳಪೆಯಾಗುವ ಚಿಂತೆ ಮೂಡಿಸಿದೆ.

ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿಫಸಲಿನ ಅವಧಿಯಲ್ಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಕೊಡಗಿನ ಕಾಫಿ ಬೆಳೆಗಾರರಿಗೆ ಜನವರಿ ಆರಂಭದಲ್ಲೇ ಅಕಾಲಿಕ ಮಳೆ ತೀವ್ರ ಆತಂಕ ಮೂಡಿಸಿದೆ. ಜಿಲ್ಲೆಯಾದ್ಯಂತ ಗುರುವಾರ ಬೆಳಗ್ಗಿನಿಂದ ಮಳೆಯಾದ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ಹಾಗೂ ಭತ್ತದ ಕೃಷಿಕರು ಸಮಸ್ಯೆ ಅನುಭವಿಸುವಂತಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಕಾಫಿ ಹಣ್ಣಾಗಿದ್ದು, ಫಸಲು ಕೊಯ್ಲು ಕೂಡ ನಡೆಯುತ್ತಿದೆ. ಆರದೆ ಇದೀಗ ದಿಢೀರ್ ಬಂದ ಮಳೆಯಿಂದ ಕಾಫಿ ಬೆಳೆಗಾರರು ದೊಡ್ಡ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಣ್ಣಾದ ಕಾಫಿ ಕೊಯ್ಲು ಮಾಡಲು ಆಗದಂತಹ ಪರಿಸ್ಥಿತಿಯನ್ನು ಮಳೆ ತಂದೊಡ್ಡಿದೆ. ಮತ್ತೊಂದು ಕಡೆ ಬಿಸಿಲಿನ ವಾತಾವರಣ ಇಲ್ಲದೆ ಕಾಫಿ ಒಣಗಿಸಲು ಕೂಡ ಅಸಾಧ್ಯವಾಗಿದೆ. ಮಳೆಗೆ ಒಣಗಿಸಿದ ಕಾಫಿ ಒದ್ದೆಯಾಗಿ ಗುಣಮಟ್ಟ ಕಳಪೆಯಾಗುವ ಚಿಂತೆ ಮೂಡಿಸಿದೆ.

ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆಯಾಗುವ ಸಂಭವವಿದ್ದು, ಮಳೆಯಿಂದ ಹಣ್ಣಾದ ಕಾಫಿ ಬಿರುಕು ಬಿಡಲಿದೆ. ಅಲ್ಲದೆ ಫಸಲು ನೆಲಕ್ಕಚ್ಚುವ ಸಾಧ್ಯತೆ ಕೂಡ ಇದೆ. ಮಳೆ ಸುರಿದ ಪರಿಣಾಮ ಗಿಡದಲ್ಲಿ ಕೆಲವೇ ದಿನಗಳಲ್ಲಿ ಹೂವು ಕೂಡ ಅರಳಲಿದ್ದು, ಮುಂದಿನ ಫಸಲಿಗೆ ಹಾನಿಯಾಗಲಿದೆ. ಇದರಿಂದ ಬೆಳೆಗಾರರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಮಳೆಗಾಲದಲ್ಲಿ ಸರಿಯಾದ ಮಳೆಯಾಗುತ್ತಿಲ್ಲ. ಆದರೆ ಅಕಾಲಿಕವಾಗಿ ಮಳೆ ಸುರಿದು ನಮಗೆ ನಷ್ಟವನ್ನು ಉಂಟು ಮಾಡುತ್ತಿದೆ ಎಂದು ಬೆಳೆಗಾರರು ನೋವು ತೋಡಿಕೊಂಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕೊಯ್ಲು ಮಾಡುವ ಕಾಫಿ ಫಸಲನ್ನು ಜಿಲ್ಲೆಯ ಬಹುತೇಕ ಬೆಳೆಗಾರರು ನೈಸರ್ಗಿಕವಾಗಿಯೇ ಒಣಗಿಸುತ್ತಾರೆ. ಕಾಫಿ ಕೊಯ್ಲು ಆರಂಭವಾದರೆ ಫೆಬ್ರವರಿಯ ತನಕವೂ ಇರುತ್ತದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ ಜಿಲ್ಲೆಯಲ್ಲಿ ಬಿಸಿಲಿರುತ್ತದೆ. ಇದರಿಂದಾಗಿ ಬೆಳೆಗಾರರು ಕಣಗಳಲ್ಲಿ, ಗದ್ದೆಗಳಲ್ಲಿ ಕಾಫಿಯನ್ನು ಒಣಗಿಸುತ್ತಾರೆ. ಇದೀಗ ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ಕಾಫಿ ಒಣಗಿಸಲು ಸಂಕಷ್ಟ ತಂದೊಡ್ಡಿದೆ. ಪಾಲಿಹೌಸ್ ಹಾಗೂ ಡ್ರೈಯರ್ ಗಳಿಗೆ ಹೆಚ್ಚು ವೆಚ್ಚ ತಗಲುವುದರಿಂದ ಬೆಳೆಗಾರರು ಈ ವಿಧಾನವನ್ನು ಅಳವಡಿಸಿಕೊಂಡು ಕಾಫಿ ಬೆಳೆ ಒಣಗಿಸಲು ಸಮಸ್ಯೆಯಾಗಿದೆ.ಕಾಫಿ ಕೊಯ್ಲಿಗೆ ಕೆಲಸಗಾರರೇ ಸಿಗುತ್ತಿಲ್ಲ!ಕೊಡಗಿನಲ್ಲಿ ಕಾಫಿ ಕೊಯ್ಲು ಆರಂಭವಾಗಿ ಕೆಲಸ ಭರದಿಂದ ಸಾಗಿದೆ. ಆದರೆ ಬಹುತೇಕ ಕಡೆಗಳಲ್ಲಿ ಕಾಫಿ ಫಸಲು ಕೊಯ್ಲು ಮಾಡಲು ಕೆಲಸಗಾರರೇ ಸಿಗುತ್ತಿಲ್ಲ. ಇದರಿಂದ ಕೆಲವು ಕಡೆಗಳಲ್ಲಿ ಫಸಲು ನೆಲಕ್ಕೆ ಉದುರಲು ಆರಂಭಿಸಿದೆ. ಪರಿಣಾಮ ಬೆಳೆಗಾರರು ತೀರಾ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಸುಂಟಿಕೊಪ್ಪ ಸಮೀಪದ ಗದೆಹಳ್ಳ ತಿರುವಿನಲ್ಲಿ ಬೆಳೆಗಾರರೊಬ್ಬರು ಕಾಫಿ ಕೊಯ್ಲು ಮಾಡಲು ಕೆಲಸಗಾರರು ಬೇಕಾಗಿದ್ದಾರೆ ಎಂದು ಬೋರ್ಡ್ ಹಿಡಿದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 7ನೇ ಮೈಲ್‌ನ ಬೀಟಿಕಾಡ್ ಎ ಎಸ್ಟೇಟ್‌ನ ಬೆಳೆಗಾರರು ಈ ರೀತಿ ಬೋರ್ಡ್ ಹಿಡಿದು ಪ್ರದರ್ಶಿಸಿದ್ದಾರೆ. ಸಕಾಲದಲ್ಲಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂದು ಹಲವು ಬೆಳೆಗಾರರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೆಲಸಗಾರರ ಕೊರತೆಯ ನಡುವೆಯೂ ಕಾಫಿ ಕೊಯ್ಲು ಮಾಡಿಸಲಾಗಿದೆ. ಆದರೆ ಈಗ ಸುರಿಯುವ ಮಳೆಯಿಂದ ನಮಗೆ ನಷ್ಟ ಉಂಟಾಗಲಿದೆ. ಮಳೆಯಿಂದ ಗಿಡದಲ್ಲಿನ ಕಾಫಿ ಫಸಲು ಉದುರಲು ಆರಂಭಿಸುತ್ತದೆ. ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಏನು ಮಾಡುವುದು ಎಂದು ಗೊತ್ತಾಗುತ್ತಿಲ್ಲ.

-ಸುಧೀರ್ ಮಕ್ಕಮನೆ, ಕಾಫಿ ಬೆಳೆಗಾರ ಚೆಯ್ಯಂಡಾಣೆ

ಇದೀಗ ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಗಾರರಿಗೆ ಸಮಸ್ಯೆ ಉಂಟಾಗಲಿದೆ. ಈಗ ಕೊಯ್ಲು ಮಾಡಿರುವ ಕಾಫಿಯನ್ನು ಮೋಡ ಹಾಗೂ ಮಳೆಯಿಂದ ಒಣಗಿಸಲು ಆಗುವುದಿಲ್ಲ. ಮತ್ತೊಂದು ಕಡೆ ಕೊಯ್ಲು ಮಾಡಲು ಕೂಡ ಆಗುವುದಿಲ್ಲ. ಮಳೆಯಿಂದ ಮುಂದಿನ ದಿನಗಳಲ್ಲಿ ಕಾಫಿ ಹೂವು ಅರಳುವ ಸಾಧ್ಯತೆ ಕೂಡ ಇದೆ.

-ವೀರೇಂದ್ರ ಕುಮಾರ್, ವಿಜ್ಞಾನಿ ಕೆವಿಕೆ ಗೋಣಿಕೊಪ್ಪಕಾಫಿ ಕೊಯ್ಲು ಮಾಡಲು ಈಗಲೇ ಕೆಲಸಗಾರರು ಸಿಗುತ್ತಿಲ್ಲ. ಇದೀಗ ಸುರಿಯುತ್ತಿರುವ ಮಳೆಯಿಂದ ಕಾಫಿ ಹಣ್ಣಾಗಿ ಬಿರುಕು ಬಿಡುತ್ತದೆ. ಅಲ್ಲದೆ ನೆಲಕ್ಕೆ ಉದುರುತ್ತದೆ. ಕೊಯ್ಲು ಮಾಡಲೇ ಜನ ಸಿಗದಿದ್ದಾಗ ಇನ್ನು ಉದುರಿ ಹೋದ ಫಸಲು ಹೆಕ್ಕಲು ಕೆಲಸಗಾರರು ತೀರಾ ಸಿಗುವುದಿಲ್ಲ. ಅಕಾಲಿಕ ಮಳೆ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ವರ್ಷಗಳಲ್ಲಿ ಕಾಫಿ ಕೃಷಿ ಮಾಡುವುದೇ ಸವಾಲಾಗಿದೆ.

-ರಾಶಿತ್, ಕಾಫಿ ಬೆಳೆಗಾರ ದೊಡ್ಡಮಳ್ತೆ

Share this article