ಕೊಪ್ಪಳ: ಅಸ್ಪೃಶ್ಯತೆ ಆಚರಣೆ ಘೋರ ಅಪರಾಧ. ಅಮಾನವೀಯ, ನಾಗರಿಕ ಸಮಾಜ ಇದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಇಂತಹ ಘಟನೆ ಮರುಕಳಿಸಬಾರದು. ಸರ್ಕಾರವೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಎಚ್ಚರಿಸಿದರು.
ಹಾಲವರ್ತಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಅವರು, ಗ್ರಾಮಸ್ಥರೆಲ್ಲ ಒಗ್ಗೂಡಿ ನಡೆಯಬೇಕು. ಯಾರೂ ಕೂಡ ತಾರತಮ್ಯ ಮಾಡಬಾರದು. ಸುಮ್ಮನೆ ಅಮಾಯಕರ ಮೇಲೆ ದಾಳಿ ಮಾಡಿದರೆ ಅಂತಹದ್ದನ್ನು ಸಹಿಸಲಾಗದು. ಆದಾಗ್ಯೂ ಮತ್ತೆ ತಪ್ಪುಗಳು ನಡೆದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ಗ್ರಾಮದಲ್ಲಿ ಶಾಂತಿ ನೆಲೆಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಜನರನ್ನು ಒಡೆದಾಳುವ ಅಮಾನೀಯ ತಂತ್ರಗಳಿಗೆ ಯಾರೂ ಸಹ ಬಲಿಪಶುವಾಗಬಾರದು. ನಾವೆಲ್ಲ ಮನುಷ್ಯರು. ನಾವೆಲ್ಲರೂ ಒಂದೇ. ಯಾರನ್ನೂ ಟಾರ್ಗೆಟ್ ಮಾಡಕೂಡದು. ನಿಮ್ಮ ರಕ್ಷಣೆಗೆ ಸರ್ಕಾರ ಇದೆ. ತಾರತಮ್ಯ ಮಾಡುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.ಶಿಕ್ಷಣವಂತರಾದರೆ ಇಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ. ನಾವು ಶಿಕ್ಷಣವಂತರಾಗಬೇಕು. ರಾಜ್ಯ ಸರ್ಕಾರವು ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ. ಎಲ್ಲರೂ ಶಿಕ್ಷಣ ಕಲಿತು ಅಕ್ಷರಸ್ಥರಾದರೆ ಇಂತಹ ಅಸ್ಪೃಶ್ಯತೆ ಆಚರಣೆ ಸಂಭವಿಸುವುದಿಲ್ಲ ಎಂದರು.ಅಸ್ಪೃಶ್ಯತೆ ವಿರುದ್ಧ ಹೋರಾಟ:ಇದು ಯಾರ ವಿರುದ್ಧದ ಹೋರಾಟವೂ ಅಲ್ಲ. ಜಾತಿಯತೆ ಮಾಡಿದವರ ವಿರುದ್ಧ, ಅಸ್ಪೃಶ್ಯತೆ ಆಚರಣೆ ಮಾಡಿದವರ ವಿರುದ್ಧ ನಾವು ಹೋರಾಟ ಮಾಡಿದ್ದೇವೆ ಎಂದು ಹೋರಾಟಗಾರ ಕರಿಯಪ್ಪ ಗುಡಿಮನಿ ತಿಳಿಸಿದರು.ನಾಚಿಕೆಗೇಡಿನ ಸಂಗತಿ:ಮುಖಂಡ ಡಿ.ಎಚ್. ಪೂಜಾರ ಮಾತನಾಡಿ, ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ದೂರು ಕೊಟ್ಟಿದ್ದಕ್ಕೆ ಮೇಲ್ಜಾತಿಯ ಜನರು ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ. ಹೊಲಗಳಿಗೆ ಹೋದಾಗ ಕಲ್ಲಿನಿಂದ ಹೊಡೆಯುತ್ತಿದ್ದಾರೆ ಎಂದು ನೊಂದವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಂಗಡಿಯಲ್ಲಿ ಪ್ರವೇಶ ನೀಡದ, ಕಟಿಂಗ್ ಮಾಡಲು ತಿರಸ್ಕರಿಸುವ ಅಂಗಡಿಕಾರರ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರಿದರು. ಇದಕ್ಕೆ ಪೂರ್ಣವಿರಾಮ ನೀಡಿ ಗ್ರಾಮಸ್ಥರು ಸೌಹಾರ್ದದಿಂದ ಬದುಕುವಂತಾಗಬೇಕು ಎಂದು ಕೋರಿದರು.ಹೋರಾಟಗಾರರಿಂದ ಮನವಿ:ಅಸ್ಪೃಶ್ಯತೆ ಆಚರಣೆ ವಿರುದ್ಧದ ಅಭಿಯಾನವು ಹಾಲವರ್ತಿಯಿಂದ ಆರಂಭವಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮ, ಹೋಬಳಿಗಳಲ್ಲಿ ನಡೆಯಬೇಕು. ರಾಜ್ಯಾದ್ಯಂತ ನಡೆಯಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಮನವಿಯನ್ನು ಹೋರಾಟಗಾರರಾದ ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮಹಾಂತೇಶ ಕೊತಬಾಳ, ಮುದುಕಪ್ಪ ಹೊಸಮನಿ, ರಮೇಶ ಬೇಳೂರ, ರಮೇಶ ಸಾಲಮನಿ, ಸಂಜಯ ದಾಸ್ ಸಚಿವರಿಗೆ ಸಲ್ಲಿಸಿದರು.ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಮುಖಂಡರಾದ ರಾಜಶೇಖರ ಹಿಟ್ನಾಳ, ತಹಸೀಲ್ದಾರ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜು ಟಿ., ಚಿದಾನಂದ ಇದ್ದರು.