ಅಸ್ಪೃಶ್ಯತೆ ಭಾರತೀಯ ಸಮಾಜಕ್ಕೆ ಅಂಟಿದ ಬಹುದೊಡ್ಡ ಕಳಂಕ

KannadaprabhaNewsNetwork | Published : Mar 8, 2024 1:46 AM

ಸಾರಾಂಶ

ಜಾತಿ, ಮೇಲು ಕೀಲು, ಆಸ್ಪೃಶ್ಯತೆ ಆಚರಣೆಗಳು ಭಾರತೀಯ ಸಮಾಜಕ್ಕೆ ಅಂಟಿದ ಬಹುದೊಡ್ಡ ಕಳಂಕಗಳಾಗಿವೆ ಎಂದು ವಿಹಿಂಪನ ದಕ್ಷಿಣ ಪ್ರಾಂತದ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ್ ಸ್ವಾಮಿ ಹೇಳಿದರು.

ಚಿತ್ರದುರ್ಗ: ಜಾತಿ, ಮೇಲು ಕೀಲು, ಆಸ್ಪೃಶ್ಯತೆ ಆಚರಣೆಗಳು ಭಾರತೀಯ ಸಮಾಜಕ್ಕೆ ಅಂಟಿದ ಬಹುದೊಡ್ಡ ಕಳಂಕಗಳಾಗಿವೆ ಎಂದು ವಿಹಿಂಪನ ದಕ್ಷಿಣ ಪ್ರಾಂತದ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ್ ಸ್ವಾಮಿ ಹೇಳಿದರು.

ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆಯುತ್ತಿರುವ 94ನೇ ಮಹಾ ಶಿವರಾತ್ರಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಾನವನನ್ನು ಜಾತಿಯಿಂದ ಗುರುತಿಸದೇ ಗುಣದಿಂದ ಗುರುತಿಸುವ ಕೆಲಸವಾಗಬೇಕು. ಜಾತಿಯನ್ನು ನಾವು ಮಾಡಿಕೊಂಡಿದ್ದು ಗುಣ ದೇವರು ನೀಡಿದ ವರವಾಗಿದೆ ಎಂದರು.

ಶಿವಲಿಂಗಾನಂದ ಸ್ವಾಮೀಜಿಗಳಿಂದ ಜಾಗೃತಿ ಮೂಡಿಸುವ ವಾತಾವರಣ ಇದಾಗಿದೆ. ಭಗವಂತನಿಗೆ ಯಾವುದೇ ರೀತಿಯ ಜಾತಿಯ ಸೋಂಕು ಇಲ್ಲ. ಆತನಿಗೆ ನಿರ್ಮಲವಾದ ಭಕ್ತಿ ಮಾತ್ರ ಮುಖ್ಯವಾಗಿದೆ. ಸಿದ್ದಾರೂಢ ಸಂಪ್ರದಾಯ ಜನತೆಯನ್ನು ಮೇಲೆತ್ತುವ ಸಂಪ್ರದಾಯವಾಗಿದೆ. ದೇವರನ್ನು ಜಾತಿಗೆ ಹೋಲಿಸುವುದು ಸರಿಯಲ್ಲ, ಶ್ರೀರಾಮ ಕ್ಷತ್ರಿಯ, ಕೃಷ್ಣ ಗೊಲ್ಲ, ರಾಮಾಯಣ ಬರೆದ ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದವರಾಗಿದ್ದು, ಅವರು ಮಾಡುದ ಕೆಲಸಗಳು ಮಾತ್ರ ಎಲ್ಲರಿಗೂ ಅನ್ವಯವಾಗುವಂತಹದ್ದಾಗಿದೆ. ಆರಾಧನೆಯಲ್ಲಿ ಜಾತಿಗಿಂತ ಗುಣ ಮುಖ್ಯವಾಗಿದೆ ಎಂದರು.

ಬೀದರ್‌ನ ಮುಚಳಾಂಬದ ನಾಗಭೂಷಣ ಮಠದ ಪ್ರಣವಾನಂದ ಶ್ರೀಗಳು ಮಾತನಾಡಿ, ಮಾನವ ಬದುಕಿನಲ್ಲಿ ನಿಜವಾದ ಮಮಕಾರ, ಮೋಹ ಸಂಸಾರದ ಭಾಗವಾಗಿದೆ. ಕಷ್ಟ ಬಂದಾಗ ಮಾತ್ರ ನಿಜವಾದ ಬಂಧುಗಳು ಕಾಣುತ್ತಾರೆ. ನಿಜವಾದ ಬಂಧು ಎಂದರೆ ಪರಮಾತ್ಮ ಮಾತ್ರ. ಆದಾಯಗಳಿಸುವಾಗ ಮನೆಯಲ್ಲಿ ಎಲ್ಲರು ಪ್ರೀತಿಯಿಂದ ನೋಡುತ್ತಾರೆ. ಆದಾಯಗಳಿಸದಿದ್ದಾಗ ಗದರಿಸುತ್ತಾರೆ. ಸಂಬಂಧಗಳು ಮಾನವ ಬದುಕಿನಲ್ಲಿ ನೋವನ್ನು ಉಂಟು ಮಾಡುತ್ತವೆ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಕಬೀರಾನಂದ ಆಶ್ರಮ ಜಾತಿಯ ಸೋಂಕು ಇಲ್ಲದ ಮಠವಾಗಿದೆ. ಶಿವಲಿಂಗಾನಂದ ಶ್ರೀಗಳು ಎಲ್ಲರ ಪ್ರೀತಿಸುತ್ತ ನೊಂದವರ ಕಣ್ಣೀಸು ಒರೆಸುವ ಕೆಲಸ ಮಾಡುತ್ತಿದ್ದಾರೆ. ಮಠದ ಪ್ರಗತಿಯಲ್ಲಿ ಅದಿ ಚುಂಚನಗಿರಿ ಬಾಲಗಂಗಾಧರನಾಥ ಶ್ರೀಗಳು ಸಹಾಯ ಆಪಾರವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಕಬೀರಾನಂದಾಶ್ರಮ ಉತ್ತಮವಾದ ಕಾರ್ಯ ಮಾಡುತ್ತಿದೆ. ಮಕ್ಕಳಿಗೆ ಶಿಕ್ಷಣ, ವೃದ್ಧಾಶ್ರಮ , ಗೋವುಗಳ ಸಂರಕ್ಷಣೆ ಮೂಲಕ ಸಮಾಜಮುಖಿ ಕಾರ್ಯದಲ್ಲಿ ನಿರತವಾಗಿದೆ. ಶಿವರಾತ್ರಿ ಸಪ್ತಾಹ ಆಚರಿಸಿ ಭಕ್ತರನ್ನು ಶಿವನಾಮದಲ್ಲಿ ತೇಲಿಸುತ್ತಿದ್ದಾರೆಂದು ಬಣ್ಣಿಸಿದರು.

ಅದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದ ಶ್ರೀಗಳು, ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಶ್ರೀಗಳು, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಕೆಪಿಸಿಸಿ ಸಂಯೋಜಕ ಕುಮಾರಗೌಡ, ಮಹಾರಾಷ್ಟ್ರದ ಸಂಗಧರಿಯ ಗುರುನಾಥ್ ಮಹಾರಾಜ್, ದಾವಣಗೆರೆ ಜಿಪಂ ಮಾಜಿ ಅಧ್ಯಕ್ಷ ವೈ.ರಾಮ್ಪಪ, 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷ ಕೆ.ಸಿ.ನಾಗರಾಜು, ಉಪಾಧ್ಯಕ್ಷ ಸಿದ್ದವ್ವನಹಳ್ಳಿಯ ಪರಮೇಶ್, ವಿಜಯಕುಮಾರ್, ಕಸಾಪ ಅಧ್ಯಕ್ಷ ಶಿವಸ್ವಾಮಿ, ಭಾಗವಹಿಸಿದ್ದರು.

Share this article