ಗೆದ್ದು ಬಂದು ಒಂದೂವರೆ ವರ್ಷಗಳಾದರೂ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಮತಕ್ಷೇತ್ರದ ಯಾವುದೇ ಒಂದು ಅಭಿವೃದ್ಧಿ ಪೂರಕ ಯೋಜನೆಗೆ ಒಂದು ನೈಯಾ ಪೈಸೆ ಅನುದಾನ ತರುವ ತಾಕತ್ತಿಲ್ಲ.
ಮುದ್ದೇಬಿಹಾಳ: ಗೆದ್ದು ಬಂದು ಒಂದೂವರೆ ವರ್ಷಗಳಾದರೂ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಮತಕ್ಷೇತ್ರದ ಯಾವುದೇ ಒಂದು ಅಭಿವೃದ್ಧಿ ಪೂರಕ ಯೋಜನೆಗೆ ಒಂದು ನೈಯಾ ಪೈಸೆ ಅನುದಾನ ತರುವ ತಾಕತ್ತಿಲ್ಲ.
ಆದರೆ, ಬೆಳಿಗ್ಗೆ ಎದ್ದರೆ ಸಾಕು ವೇದಿಕೆಗಳಲ್ಲಿ ಬರಿ ಸುಳ್ಳುಗಳನ್ನೇ ಹೇಳುತ್ತ, ಡ್ರಾಮಾ ಮಾಡಿಕೊಂಡು ಕಾಲಕಳಿಯುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಇಡೀ ರಾಜಕೀಯ ಜೀವನದಲ್ಲಿ ತಾವು ಮಾಡಿದ ತಪ್ಪುಗಳನ್ನು ದಾಖಲೆ ಸಮೇತ ಎಳೆಎಳೆಯಾಗಿ ಬಿಡಿಸಿ ಹೇಳುವ ಮೂಲಕ ನಿಮ್ಮ ಮುಖವಾಡ ತೆರೆದಿಡಬೇಕಾಗುತ್ತದೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹರಿಹಾಯ್ದರು.
ಪಟ್ಟಣದ ಮಾರುತಿನಗರ ಬಡಾವಣೆಯಲ್ಲಿನ ಅವರ ಫಾರ್ಮ್‌ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚುನಾವಣೆ ಮುಗಿದ ನಂತರ ಏನಾದರೂ ಅಭಿವೃದ್ಧಿ ಮಾಡುತ್ತಾರೋ ಏನು ಎಂದು ಸ್ವಲ್ಪ ದಿನ ತಾಳ್ಮೇಯಿಂದ ಕಾಯ್ದು ನೋಡಬೇಕು ಎಂದು ಮೌನವಾಗಿದ್ದೆ. ಆದರೆ, ಇವರ ಕಾರ್ಯವೈಖರಿಯನ್ನು ನೋಡಿ ನನಗೆ ಬೇಸರವಾಗಿದೆ.
ಕಳೇದ ಎರಡು ದಿನಗಳ ಹಿಂದೆ ನಾಲತವಾಡ ಪಟ್ಟಣದಲ್ಲಿ ಕೆಲ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ ವಿತರಿಸಿದ್ದಾರೆ. ಜೊತೆಗೆ ಇತರೆ ಗ್ರಾಮಗಳಿಗೆ ಮತ್ತು ಆ ಭಾಗದ ನೂರಾರು ರೈತರ ಹೊಲಗಳಿಗೆ ನೀರಾವರಿ ಕಲ್ಪಿಸುವ ಚಿಮ್ಮಲಗಿ ಏತ ನೀರಾವರಿ ಎ ಸ್ಕೀಂನ ಕಾಲುವೆಗೆ ಅಡ್ಡಲಾಗಿ ನಿರ್ಮಿಸಬೇಕಿದ್ದ ಸಂಪರ್ಕ ರಸ್ತೆ ಸೇತುವೆ ನಿರ್ಮಾಣ ಮಾಡಲು ಕಳೇದ 25 ವರ್ಷಗಳಾದರೂ ಸಾಧ್ಯವಾಗಿರಲಿಲ್ಲ. 2013-14 ರಲ್ಲಿ ಆ ಕಾಲುವೆ ಕಾಮಗಾರಿಯನ್ನು ಮಲ್ಲಿಕಾರ್ಜುನ ಮದರಿಯವರು ಗುತ್ತಿಗೆ ಪಡೆದು ನಿರ್ವಹಿಸುವ ಸಂದರ್ಭದಲ್ಲಿ ಕೆಲ ರೈತರು ಅಡ್ಡಪಡಿಸಿದ್ದರು.
ಹೀಗಾಗಿ, ಕಾಮಗಾರಿ ಪ್ರಾರಂಭಗೊಳ್ಳದೇ ನೆನೆಗುದಿಗೆ ಬಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ಜೊತೆಗೆ ಆರೇಶಂಕರ, ನಾಗಬೇನಾಳ ಸೇರಿದಂತೆ ಇತರೆ ಗ್ರಾಮಗಳು ಆ ಭಾಗದ ಪ್ರತಿಷ್ಠಿತ ಕುಟುಂಬಗಳಲ್ಲೊಂದಾದ ದೇಶಮುಖರವರ ಗ್ರಾಮಗಳಾಗಿದ್ದರಿಂದ ಆ ಗ್ರಾಮಗಳಿಗೆ ಯಾಕೆ ಅಭಿವೃದ್ಧಿ ಮಾಡಬೇಕೆಂಬ ಆಲೋಚನೆಯಿಂದ ನಿರ್ಲಕ್ಷ್ಯ ಮಾಡಿ ಧ್ವೇಷ ರಾಜಕಾರಣ ಪ್ರಾರಂಭಿಸಿದರು ಎಂದರು.ಕಳೆದ ಬಾರಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಈ ಭಾಗದ ಬಹುತೇಕ ನೀರಾವರಿ ಯೋಜನೆಗೆ ಪೂರಕವಾದ, ಅರ್ಧಕ್ಕೆ ನಿಂತು ಹೋಗಿದ್ದ ಕಾಮಗಾರಿಗಳನ್ನು ಪುನಃ ಪ್ರಾರಂಭಿಸಬೇಕೆಂದು ತಿರ್ಮಾನಿಸಿದ್ದೆ.
ಅಲ್ಲದೇ, ಟೆಂಡರ್ ಕರೆಯಲು ವಿಶೇಷ ಅನುದಾನ ಮಂಜುರಾತಿ ಪಡೆದು ಇನ್ನೇನು ಕಾಮಗಾರಿ ಪ್ರಾರಂಭಿಸಬೇಕು ಎನ್ನುಷ್ಟರಲ್ಲಿಯೇ ಚುನಾವಣೆ ನೀತಿ ಸಂಹಿತೆ ಬಂದು ಕಾಮಗಾರಿ ಸ್ಥಗಿತಗೊಂಡಿತು. ನಂತರ, ರಾಜ್ಯದಲ್ಲಿ ಇವರದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ನಮ್ಮ ಸರ್ಕಾರದ ಅವಧಿಯ ಆ ಕಾಮಗಾರಿ ನಡೆಸದೆ ರದ್ದು ಮಾಡಿ ತಡೆಹಿಡಿದಿದ್ದರಿಂದ ಬೇಸತ್ತು ಆ ಭಾಗದ ಹೋರಾಟಗಾರ ಶಿವಾನಂದ ವಾಲಿ ಹಾಗೂ ನಾಲತವಾಡದ ಬಹುತೇಕ ರೈತರು ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಆ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಹೋರಾಟ ನಡೆಸಿದರು ಎಂದು ವಿವರಿಸಿದರು.
ಇದೇ ವಿಚಾರಕ್ಕೆ ನಾಲತವಾಡದ ಜನರು ವಿರೋಧಿಸುತ್ತಾರೆ ಎಂದು ಮರ್ಯಾದೆಗೆ ಹೆದರಿ ದಿಢೀರ್‌ನೆ ಟೆಂಡರ್ ಕರೆಯುವುದಾಗಿ ಹೇಳಿ ಹೋರಾಟ ಕೈಬಿಡುವಂತೆ ಮಾಡಿದರು. ಈ ಹಿಂದಿನ ಶಾಸಕರು ಸಿಂಗಲ್ ಟೆಂಡರ್ ಕರೆದಿದ್ದರೂ ಹಾಗಾಗಿ ನಾನು ಹೊಸದಾಗಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸುಳ್ಳು ಹೇಳಿದ್ದರು. ಕೇವಲ ₹ 35 ಅಥವಾ ₹ 40 ಲಕ್ಷದೊಳಗೆ ನಿರ್ಮಿಸಬೇಕಾದ ಕಾಲುವೆ ಸಂಪರ್ಕ ರಸ್ತೆ ಸೇತುವೆ ಕಾಮಗಾರಿ ಇದಾಗಿದೆ.
ಆದರೆ, ಒಂದು ವರ್ಷ ಗತಿಸಿದರೂ ಕಾಮಗಾರಿ ಪ್ರಾರಂಭಿಸದಿದ್ದಕ್ಕೆ ಮತ್ತೆ ರೈತರು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ತಾವೂ ಹೊಸದಾಗಿ ಕರೆದ ಟೆಂಡರ್‌ನಲ್ಲಿ ಶ್ರೀಕೃಷ್ಣ ಕೊಂಗಿ, ರಾಯನಗೌಡ ಚಿತ್ತಾಪೂರ, ಯಲ್ಲಪ್ಪ ಭೀಮಪ್ಪ ಲಮಾಣಿ, ಭೀಮರಾಯ, ಬಹಾದ್ದೂರ ಗುರಪ್ಪ, ರಾಠೋಡ, ದೇವಣ್ಣ ಶಿವಬಸಯ್ಯಾ ಮಾದರ ಒಟ್ಟು ಆರು ಜನ ಟೆಂಡರ್ ಹಾಕಿದ್ದಾರೆ. ಆದರೇ ನಿಯಮದ ಪ್ರಕಾರ ಕಡಿಮೆ ಬಿಡ್ ಮಾಡಿದವರಿಗೆ ಟೆಂಡರ್ ನೀಡಬೇಕು ಎಂಬು ನಿಯಮವಿದೆ.
ಸದ್ಯ ಟೆಂಡೆರ್ ಪ್ರಕ್ರಿಯೆ ಮುಗಿಯದೇ ಸರ್ಕಾರಿ ಟೆಂಡರ್ ನಿಯಮ ಉಲ್ಲಂಘಿಸಿ ಕಳೇದ ಎರಡು ದಿನಗಳ ಹಿಂದೆ ಆ ರಸ್ತೆ ಸಂಪರ್ಕ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಅದು ಅವರ ಹಿಂಬಾಲಕ ಪರಮಶಿಷ್ಯ ನಾಲತವಾಡದ ರಾಯನಗೌಡ ಚಿತ್ತಾಪೂರ ಎಂಬ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಣೆ ಮಾಡಲು ನೀಡಿದ್ದಾರೆ.
ಶಾಸಕ(ಅಪ್ಪಾಜಿ) ನಿನಗೆ ಮಾನ ಮರ್ಯಾದೆ ಏನಾದರೂ ಇದೆಯಾ.? ನೀನೊಬ್ಬ ಬಡವರ ಪರವಾದ ಶಾಸಕನಲ್ಲ, ಹೊಟ್ಟೆ ಕಿಚ್ಚಿನ ಮನುಷ್ಯ ಎಂದು ಏಕ ವಚನದಲ್ಲಿ ಸಂಬೋಧಿಸಿದರು.
ಈ ವೇಳೆ ಬಿಜೆಪಿ ತಾಲೂಕು ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪುಟ್ಟು ತಟ್ಟಿ, ಮುಖಂಡರಾದ ಅಶೋಕ ರಾಠೋಡ, ಸಂಜಯ ಬಾಗೇವಾಡಿ, ಪ್ರೀತಿ ಕಂಬಾರ, ಕಾವೇರಿ ಕಂಬಾರ ಸೇರಿದಂತೆ ಹಲವರು ಇದ್ದರು.
ಮುದ್ದೇಬಿಹಾಳ ಪಟ್ಟಣದ ಮಾರುತಿನಗರ ಬಡಾವಣೆಯಲ್ಲಿರುವ ಅವರ ಫಾರ್ಮ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿಕಟಪೂರ್ವ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಮಾತನಾಡಿದರು.
ನಾನು ಶಾಸಕನಾಗಿದ್ದಾಗ ಸಾಕಷ್ಟು ಜನ ಕಾಂಗ್ರೆಸ್ ಗುತ್ತಿಗೆದಾರರಿಗೆ ಅತಿ ಹೆಚ್ಚು ಕಾಮಗಾರಿ ಕೊಟ್ಟು ಸಮಾನತೆ ನೀಡಿ ಅನುಕೂಲ ಮಾಡಿದ್ದೇನೆ. ನಾನ್ಯಾವತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಗುತ್ತಿಗೆದಾರರು ಎಂಬ ಬೇಧಭಾವ ಮಾಡಿಲ್ಲ. ಮತಕ್ಷೇತ್ರದ ಅಭಿವೃದ್ಧಿಯ ಕನಸಿನೊಂದಿಗೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮಾದರಿ ಮತಕ್ಷೇತ್ರ ಮಾಡಿ ತೋರಿಸಿದ್ದೇನೆ.ಎ.ಎಸ್.ಪಾಟೀಲ(ನಡಹಳ್ಳಿ), ಮಾಜಿ ಶಾಸಕರು
ಸಂಪೂರ್ಣ ಮಾಹಿತಿ ನನ್ನಲ್ಲಿದೆ: ನಡಹಳ್ಳಿ ಎಚ್ಚರಿಕೆ
ಕಾಲುವೆ ನಿರ್ವಹಣೆಗಾಗಿ ₹ 2.73 ಕೋಟಿ, ₹ 2.49 ಕೋಟಿ ಕಾಮಗಾರಿ ಕಥೆ ಏನಾಗಿದೆ ?. ಇದೊಂದು ಕಾಲುವೆಯ ಕಾಮಗಾರಿ ನಡೆಸದೇ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಅನುದಾನವನ್ನು ಹೇಗೆ ಲೂಟಿ ಹೊಡೆಯುತ್ತಿದ್ದಿರಿ, ಲೋಕೋಪಯೋಗಿ ಇಲಾಖೆಯಿಂದ ರಸ್ತೆ ದುರಸ್ತಿ ನಿರ್ವಹಣೆಗಾಗಿರುವ ಅನುದಾನವನ್ನು ಹೇಗೆಲ್ಲ ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ ಎಂಬ ಸಂಪೂರ್ಣ ಮಾಹಿತಿ ನನ್ನಲ್ಲಿದೆ.
ಅದನ್ನು ಕೂಡ ಬೀಚ್ಚಿಡುತ್ತೇನೆ. ಶಾಸಕರ ದತ್ತು ಪುತ್ರ ಸುರೇಶ ನಾಡಗೌಡ ನೀನು ಏನು ಮಾಡುತ್ತಿದ್ದಿಯಾ ಎಂಬುದು ನನಗೆ ಗೊತ್ತಾಗುವುದಿಲ್ಲ ಅಂತ ತಿಳಿದಿದ್ದೀಯ ? ಗುತ್ತಿಗೆದಾರರಿಗೆ ಟೆಂಡರ್ ವಾಪಸ್ ಪಡೆದುಕೊಳ್ಳಿ ಎಂದು ಹೆದರಿಸುತ್ತಿದ್ದೀಯಾ?. ನನ್ನ ವಿಷಯಕ್ಕೆ ಬರಬೇಡ, ನನ್ನನ್ನು ಟಾರ್ಗೆಟ್ ಮಾಡಿದರೆ ನಿನ್ನ ಜಾತಕ ಬಯಲು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಅಲ್ಲದೇ, ನಾನು ಇನ್ನುಮುಂದೆ ನಿಮ್ಮ ಅವ್ಯವಹಾರಗಳನ್ನು, ಲೂಟಿ ಹೊಡೆಯುವುದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರತಿ ವಾರಕ್ಕೆ ಎರಡು ಮೂರು ಸುದ್ದಿಗೋಷ್ಠಿಗಳನ್ನು ನಡೆಸಿ ದಾಖಲೆ ಸಮೇತ ನಿಮ್ಮ ಜಾತಕ ಬಯಲು ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.