ಆ.15ರಂದು ಗೌತಮ ಬುದ್ಧರ ಪ್ರತಿಮೆ ಅನಾವರಣ, ಬೈಕ್ ಜಾಥಾ

KannadaprabhaNewsNetwork | Published : Aug 15, 2024 1:48 AM

ಸಾರಾಂಶ

ಭಗವಾನ್ ಗೌತಮ ಬುದ್ಧರು, ತ್ರಿಸರಣ, ಪಂಚಶೀಲ, ಅಷ್ಟಾಂಗ ಮಾರ್ಗ, ಧ್ಯಾನ ಇವುಗಳನ್ನು ತಮ್ಮ ಜೀವಿತಾವಧಿಯ ಉದ್ಧಕ್ಕೂ ಅಳವಡಿಸಿಕೊಂಡು ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ 1956ರ ಅಕ್ಟೋಬರ್ 16ರಂದು ಸುಮಾರು 10 ಲಕ್ಷ ಜನರ ಜೊತೆ ಬುದ್ಧ ಧಮ್ಮ ಧೀಕ್ಷೆ ಪಡೆದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಬುದ್ಧ ಭಾರತ್ ಫೌಂಡೇಷನ್‌ನಿಂದ ಆ.15ರಂದು ಗೌತಮ ಬುದ್ಧರ ಪ್ರತಿಮೆ ಅನಾವರಣ ಅಂಗವಾಗಿ ಬೃಹತ್ ಬೈಕ್ ಜಾಥಾ ನಡೆಯಲಿದೆ ಎಂದು ಬೆಂಗಳೂರಿನ ಬುದ್ಧ ವಿಹಾರದ ಧಮ್ಮವೀರ ಬಂತೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಿಂದ ಬೈಕ್ ರ್‍ಯಾಲಿ ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದವರೆಗೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡುವರು ಎಂದರು.

ಕಾರ್‍ಯಕ್ರಮದಲ್ಲಿ ಮನೋರಖ್ಕಿತ ಬಂತೆ, ಶಾಸಕ ರವಿಕುಮಾರ್ ಪಿ., ಕೆ.ಎಸ್.ಭಗವಾನ್, ಮಹೇಶ್‌ಚಂದ್ರ ಗುರು, ಪ್ರೊ. ತುಕರಾಮ್, ಜ್ಞಾನಪ್ರಕಾಶ್ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ನಿವೃತ್ತ ಪೊಲೀಸ್ ಅಧಿಕಾರಿ ಡಾ. ಸುಭಾಷ್ ಭರಣಿ, ಡಾ.ಸುರೇಂದ್ರ, ಮುಡ್ನಾಕೂಡು ಚಿನ್ನಸ್ವಾಮಿ, ಎಂ.ಸಿ. ಶಿವರಾಜು, ದರ್ಶನ್ ಸೋಮಶೇಖರ್ ಹಾಗೂ ಇತರೆ ಗಣ್ಯರು ಭಾಗವಹಿಸುವರು ಎಂದರು.

ಗೌತಮ ಬುದ್ಧರು ಬೋಧಿಸಿದ ಬೋಧನೆಗಳು, ತತ್ವ, ಆದರ್ಶಗಳು ಭಾರತದಿಂದ ಮರೆಯಾಗಿವೆ. ಇದಕ್ಕೆ ಸೃಷ್ಟಿಸಲಾಗಿರುವ ಜಾತಿ, ಮತ, ಪಂಥ, ಮೇಲು, ಕೀಳು, ತಾರತಮ್ಯ ಕಾರಣವಾಗಿದೆ ಎಂದರು.

ಭಗವಾನ್ ಗೌತಮ ಬುದ್ಧರು, ತ್ರಿಸರಣ, ಪಂಚಶೀಲ, ಅಷ್ಟಾಂಗ ಮಾರ್ಗ, ಧ್ಯಾನ ಇವುಗಳನ್ನು ತಮ್ಮ ಜೀವಿತಾವಧಿಯ ಉದ್ಧಕ್ಕೂ ಅಳವಡಿಸಿಕೊಂಡು ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ 1956ರ ಅಕ್ಟೋಬರ್ 16ರಂದು ಸುಮಾರು 10 ಲಕ್ಷ ಜನರ ಜೊತೆ ಬುದ್ಧ ಧಮ್ಮ ಧೀಕ್ಷೆ ಪಡೆದರು. ಇದರ ಮುಂದುವರಿದ ಭಾಗವಾಗಿ ನಾವು ಭಾರತೀಯರಿಗೂ ಬುದ್ಧ ಮತ್ತು ಆತನ ಸಾಧನೆಗಳ ಕುರಿತು ತಿಳಿಹೇಳುವ ಅವಶ್ಯಕತೆ ಇರುವುದರಿಂದ ಬುದ್ಧರ ಪ್ರತಿಮೆ ಅನಾವರಣ ಮತ್ತು ಬೈಕ್ ಜಾಥಾ ಕಾರ್‍ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಬೈಕ್ ಜಾಥಾವು ನಗರದ ವಿ.ವಿ.ರಸ್ತೆಯಲ್ಲಿ ಸಂಚರಿಸಿ ಹೊಸಹಳ್ಳಿ ವೃತ್ತ, ಅಂಬೇಡ್ಕರ್ ರಸ್ತೆ ಮೂಲಕ ಮಂಡ್ಯ- ಬನ್ನೂರು ರಸ್ತೆ ಮಾರ್ಗವಾಗಿ ನೇರಲಕೆರೆ ಗ್ರಾಮವನ್ನು ತಲುಪುತ್ತದೆ. ಸಾವಿರಾರು ಯುವಕರು ಬೈಕ್ ಮೂಲಕ ತೆರಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುದ್ಧ ಭಾರತ್ ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ, ಜಿಪಂ ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ಮುಖಂಡರಾದ ಅಮ್ಜದ್‌ಪಾಷ, ಲೋಕೇಶ್, ಪವನ್ ಇತರರು ಇದ್ದರು.

Share this article