ವೈ.ಯರಹಳ್ಳಿಯಲ್ಲಿ ಚುಂಚಶ್ರೀಗಳಿಂದ ಮಹನೀಯರ ಪುತ್ಥಳಿ ಅನಾವರಣ

KannadaprabhaNewsNetwork | Published : Nov 11, 2024 11:50 PM

ಸಾರಾಂಶ

ಸಮಾಜ ಹೇಳಿಗೆಗೆ ಶ್ರಮಿಸಿದ ನಾಯಕರ ಪ್ರತಿಮೆಯನ್ನು ಗ್ರಾಮದಲ್ಲಿ ಸ್ಥಾಪಿಸಿದ್ದು ಯುವ ಜನಾಂಗ ಇವರ ಆದರ್ಶ ಮೈಗೂಡಿಸಿಕೊಳ್ಳಬೇಕು. ತಾಯಂದಿರು ಮನಸು ಮಾಡಿದರೆ ತಪ್ಪು ದಾರಿಯಲ್ಲಿ ಹೋಗುವ ಮಕ್ಕಳನ್ನು ಸರಿದಾರಿಗೆ ತರುವ ಶಕ್ತಿ ಇದ್ದು, ಬಾಲ್ಯದಲ್ಲಿಯೇ ಮಕ್ಕಳನ್ನು ತಿದ್ದುವ ಕೆಲಸವಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ವೈ.ಯರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬೆಳ್ಳಿ ಸಭಾಭವನ ಉದ್ಘಾಟನೆ ವೇಳೆ ಜಯಚಾಮರಾಜೇಂದ್ರ ಒಡೆಯರ್, ಸರ್‌ ಎಂ.ವಿಶ್ವೇಶ್ವರಯ್ಯ, ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಪುತ್ಥಳಿಗಳನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅನಾವರಣ ಮಾಡಿದರು.

ನಂತರ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ ಶ್ರೀಗಳು, ಮಕ್ಕಳ ಹೇಳ್ಗೆಯಲ್ಲಿ ತಾಯಂದಿರ ಪಾತ್ರ ಅಪಾರವಾದುದು. ನಿಸ್ವಾರ್ಥ ಪ್ರೀತಿ ತ್ಯಾಗ ಮತ್ತು ತಾಳ್ಮೆಯಿಂದ ಮಕ್ಕಳ ಬೆಳವಣಿಗೆಗೆ ಸಹಕಾರ ಮೂರ್ತಿಯಾಗಿ ಕಾಣುತ್ತಾರೆ ಎಂದರು.

ಸಮಾಜ ಹೇಳಿಗೆಗೆ ಶ್ರಮಿಸಿದ ನಾಯಕರ ಪ್ರತಿಮೆಯನ್ನು ಗ್ರಾಮದಲ್ಲಿ ಸ್ಥಾಪಿಸಿದ್ದು ಯುವ ಜನಾಂಗ ಇವರ ಆದರ್ಶ ಮೈಗೂಡಿಸಿಕೊಳ್ಳಬೇಕು. ತಾಯಂದಿರು ಮನಸು ಮಾಡಿದರೆ ತಪ್ಪು ದಾರಿಯಲ್ಲಿ ಹೋಗುವ ಮಕ್ಕಳನ್ನು ಸರಿದಾರಿಗೆ ತರುವ ಶಕ್ತಿ ಇದ್ದು, ಬಾಲ್ಯದಲ್ಲಿಯೇ ಮಕ್ಕಳನ್ನು ತಿದ್ದುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಶ್ರೀಮಠವು ಹೆಸರುವಾಸಿಯಾಗಿದೆ. ಜ್ಞಾನದ ವಿಷಯಕ್ಕೆ ಹೆಚ್ಚು ಒತ್ತು ನೀಡಿರುವ ಶ್ರೀಮಠವು ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ನೆರವಾಗಿರುವುದು ಮೆಚ್ಚುವ ಕೆಲಸ ಎಂದು ಶ್ಲಾಘಿಸಿದರು.

ಬಿಜೆಪಿ ಮುಖಂಡ ಸಚ್ಚಿದಾನಂದ ಇಂಡುವಾಳು ಮಾತನಾಡಿ, ಚುಂಚನಗಿರಿ ಮಠವನ್ನು ಚಿನ್ನದ ಗಿರಿ ಮಾಡಿದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಂಡ್ಯ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ್ದಾರೆ. ವಿದ್ಯಾ ಸಂಸ್ಥೆಗಳನ್ನು ತೆರೆದು ಮಕ್ಕಳ ಜ್ಞಾನಕ್ಕೆ ನೆರವಾಗಿದ್ದಾರೆ. ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ ಎಂದು ಸ್ಮರಿಸಿದರು.

ಈ ವೇಳೆ ಜಲ ಸಂಪನ್ಮೂಲ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ ಸತೀಶ್‌, ಕಾರ್ಯಕ್ರಮ ಸಂಯೋಜಕ ಶಿವಕುಮಾರ್ ಯರಹಳ್ಳಿ, ಮುಖಂಡರಾದ ಪುಟ್ಟಸ್ವಾಮಿ, ದೇವೇಗೌಡ ಭಾಗವಹಿಸಿದ್ದರು.

Share this article