ಕನ್ನಡಪ್ರಭ ವಾರ್ತೆ ಉಡುಪಿ
ಕೆಸರು ಗದ್ದೆ ನಮ್ಮ ಮಣ್ಣಿನ ರೈತರ ಬದುಕಿನ ಸಂಕೇತ. ಕೆಸರು ಗದ್ದೆ ಕ್ರೀಡಾಕೂಟದಿಂದ ಗ್ರಾಮೀಣ ಸೊಡಗು, ಸಂಸ್ಕೃತಿ ಮತ್ತು ಭವ್ಯ ಪರಂಪರೆಯ ಅನಾವರಣ ಸಾಧ್ಯ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.ಅವರು ಶನಿವಾರ ಇಲ್ಲಿನ ಅಂಬಲಪಾಡಿ ಯುವಕ ಮಂಡಲ ಮತ್ತು ಹಿರಿಯರ ವೇದಿಕೆ ಆಶ್ರಯದಲ್ಲಿ ಪರಿಸರದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಅಂಬಲಪಾಡಿ ಬೀಡು ಮಾರ್ಗ ಸೀತಾರಾಮ ಶೆಟ್ಟಿ ಅವರ ಗದ್ದೆಯಲ್ಲಿ ‘ಕೆಸರ್ದ ಗೊಬ್ಬು’ ಕೆಸರುಗದ್ದೆ ಕ್ರೀಡಾ ಕೂಟವನ್ನು ಉದ್ಘಾಟಿಸಿ, ಮಾತನಾಡಿದರು.ನಮ್ಮ ಸಂಸ್ಕೃತಿಯಲ್ಲಿ ಮಣ್ಣಿಗೆ ಬಹಳಷ್ಟು ಮಹತ್ವವಿದೆ. ಮನುಷ್ಯನಿಗೂ ಮಣ್ಣಿಗೂ ಅವಿನಾಭಾವ ಸಂಬಂಧವಿದೆ. ಮಣ್ಣಿನಿಂದ ದೇಹ, ದೇಹದಿಂದ ಮಣ್ಣಿಗೆ ಎಂದು ಪುರಂದರ ದಾಸರು ಹೇಳಿದ್ದಾರೆ. ಗದ್ದೆಯ ಕೆಸರಿಗೆ ರೋಗನಿರೋಧಕ ಶಕ್ತಿ ಇದೆ. ಕೆಸರಿನಲ್ಲಿ ನಿರ್ಮಲವಾಗಿ ಅರಳುವ ತಾವರೆಯಂತೆ ನಾವು ಬದುಕಬೇಕು ಎಂದರು.ನಂತರ ಧರ್ಮದರ್ಶಿ ಅವರು ಕೆಸರು ಗದ್ದೆಗೆ ಹಾಲೆರೆದು, ಗದ್ದೆಯಲ್ಲಿದ್ದ ಮಕ್ಕಳತ್ತ ಬಾಲ್ ಎಸೆಯುವ ಮೂಲಕ ಕೆಸರು ಗದ್ದೆಯ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿದರು.ಹಿರಿಯರ ವೇದಿಕೆ ಅಧ್ಯಕ್ಷ ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಅಂಬಲಪಾಡಿ ಬಿಲ್ಲವ ಸೇವಾ ಸಂಘ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಉದ್ಯಮಿ ವಿಶ್ವನಾಥ್ ಹೆಗ್ದೆ, ಅಂಬಲಪಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಶೆಟ್ಟಿ, ಸದಸ್ಯ ಸೋಮನಾಥ್ ಬಿ.ಕೆ., ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಯುವಕ ಮಂಡಲ ಗೌರವಾಧ್ಯಕ್ಷ ಕೀರ್ತಿ ಶೆಟ್ಟಿ, ಅಂಬಲಪಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂದಿರ ಅಧ್ಯಕ್ಷ ಭರತ್ ರಾಜ್ ಕೆ.ಎನ್., ವಿಶ್ವಕರ್ಮ ಸಂಘ ಅಂಬಲಪಾಡಿ ಅಧ್ಯಕ್ಷ ಜಗದೀಶ್ ಆಚಾರ್ಯ ಕಪ್ಪೆಟ್ಟು ಮುಂತಾದವರು ಉಪಸ್ಥಿತರಿದ್ದರು.ಯೋಗೀಶ್ ಕೊಳಲಗಿರಿ, ಪ್ರಶಾಂತ್ ಕೆ.ಎಸ್. ಮತ್ತು ಅಜಿತ್ ಕಪ್ಪೆಟ್ಟು ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲ ಉಪಾಧ್ಯಕ್ಷ ನಚಿಕೇತ್ ಶೆಟ್ಟಿಗಾರ್ ವಂದಿಸಿದರು.