ತೋರಣಗಲ್ಲು ಸಮುದಾಯ ಆರೋಗ್ಯಕೇಂದ್ರ ಮೇಲ್ದರ್ಜೆಗೇರಿಸಿ: ಡಿವೈಎಫ್‌ಐ ಆಗ್ರಹ

KannadaprabhaNewsNetwork | Updated : Mar 02 2024, 01:47 AM IST

ಸಾರಾಂಶ

ಹೆಚ್ಚುತ್ತಿರುವ ಜನಸಂಖ್ಯೆಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು.

ಸಂಡೂರು: ತಾಲೂಕಿನ ತೋರಣಗಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಡಿವೈಎಫ್‌ಐ ಸಂಘಟನೆಯ ಮುಖಂಡರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ೩೦ ಹಾಸಿಗೆಯಿಂದ ೧೦೦ ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ವಿವಿಧ ಭೇಡಿಕೆಗಳ ಈಡೇರಿಗೆ ಒತ್ತಾಯಿಸಿ ತಾಲೂಕು ವೈದ್ಯಾಧಿಕಾರಿ ಡಾ. ಭರತ್‌ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಾರ್ವಜನಿಕರ ಅಹವಾಲು ಆಲಿಕೆ ಸಭೆಯಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಸ್. ಕಾಲುಬಾ, ತೋರಣಗಲ್ಲು ಗ್ರಾಮವು ಕೈಗಾರಿಕಾ ಪ್ರದೇಶವಾಗಿದ್ದು, ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಾಲಿನ್ಯದಿಂದ ವಿವಿಧ ಕಾಯಿಲೆಗಳಿಂದ ಪೀಡಿತರಾಗುವವರ ಸಂಖೆಯೂ ಏರುತ್ತಿದೆ. ಈ ಭಾಗದಲ್ಲಿ ವಾರಕ್ಕೆ ಮೂರ್ನಾಲ್ಕು ಅಪಘಾತಗಳು ಸಂಭವಿಸುತ್ತಿವೆ. ಅಪಘಾತಗಳು ಸಂಭವಿಸಿದಾಗ ಇಲ್ಲಿನ ಆಸ್ಪತ್ರೆಗೆ ಬಂದರೆ, ಸೂಕ್ತ ಚಿಕಿತ್ಸೆ ಸಿಗದೆ ಬಳ್ಳಾರಿಗೆ ಕಳುಹಿಸಿಕೊಡುತ್ತಾರೆ. ಜೀವ ಹಾನಿಯಾದಾಗ ಮರಣೋತ್ತರ ಪರೀಕ್ಷೆಗೂ ಬಳ್ಳಾರಿಗೆ ಹೋಗಬೇಕಿದೆ. ತಾಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣವಾಗಿದ್ದರೂ, ಅಲ್ಲಿ ಸಿಬ್ಬಂದಿ ನೇಮಕವಾಗಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಆದ್ದರಿಂದ ಹೆಚ್ಚುತ್ತಿರುವ ಜನಸಂಖ್ಯೆಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು. ಅಲ್ಲಿ ಅಗತ್ಯ ವೈದ್ಯರನ್ನು ನೇಮಿಸಬೇಕು. ಅಲ್ಲಿನ ಎಕ್ಸ್ರೇ ಮೆಷಿನ್ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಬೇಕು. ಎಲುಬು ಕೀಲು ತಜ್ಞರನ್ನು ನೇಮಿಸಬೇಕು. ಆಸ್ಪತ್ರೆ ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ೨೪ ತಾಸು ವೈದ್ಯರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಸೆಕ್ಯುರಿಟಿ ಗಾರ್ಡ್ ನೇಮಿಸಬೇಕು. ಶವಾಗಾರ ಕೊಠಡಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ತಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು.

ದಲಿತ ಹಕ್ಕುಗಳ ಸಮಿತಿ ಮುಖಂಡ ಎ. ಸ್ವಾಮಿ, ಗ್ರಾಮಸ್ಥರಾದ ಶಿವಕುಮಾರ್, ಎಂ.ಪಿ. ತಿಮ್ಮಪ್ಪ ಮುಂತಾದವರು ಉಪಸ್ಥಿತರಿದ್ದರು.

Share this article