ಚಿತ್ರದುರ್ಗ: ಯಾವುದೇ ಸಮುದಾಯಗಳ ಉನ್ನತಿ ಸಾಧಿಸಲು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ಆಗ ಮಾತ್ರ ಹೆಮ್ಮೆಯ ಬದುಕು ನಮ್ಮದಾಗುತ್ತದೆ ಎಂದು ಮುಖ್ಯಮಂತ್ರ ಸಿದ್ದರಾಮಯ್ಯ ಹೇಳಿದರು.
ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಂಜರಿ ಹನುಮಂತಪ್ಪ ಅವರ ಸ್ಮರಣೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎದೆ ಎತ್ತಿ ಬದುಕಬೇಕಾದರೆ ಶಿಕ್ಷಣ ಬಹಳ ಮುಖ್ಯ, ಶಿಕ್ಷಣದಿಂದ ಯಾರು ವಂಚಿತರಾಗಬಾರದು. ಸರ್ಕಾರದಿಂದ ಲಭ್ಯವಾಗುವ ಎಲ್ಲ ಅವಕಾಶಗಳ ಸಮರ್ಥವಾಗಿ ಬಳಸಿಕೊಂಡು ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದರು.ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದನ್ನು ಸಮಾಜದವರು ಸದುಪಯೋಗಪಡಿಸಿಕೊಳ್ಳಬೇಕು. ಸಮಾನತೆಗಾಗಿ ನಾವು ಶಿಕ್ಷಣದ ಹಾದಿಯನ್ನೇ ತುಳಿಯಬೇಕು. ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುವಂತಹ ಕಾರ್ಯದಲ್ಲಿ ಪ್ರತಿಯೊಬ್ಬರು ಸಾಗಬೇಕು. ಮಂಜರಿ ಯವರ ಶ್ರಮ ಶ್ರೇಷ್ಠವಾದುದು, ಅವರು ಆರಂಭಿಸಿರುವ ಕಾರ್ಯ ನಿರಂತರವಾಗಿ ಸಾಗಬೇಕು. ನಿಲ್ಲಬಾರದು ಎಂದು ತಿಳಿಸಿದರು.
ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಸಮಾಜದ ಏಳಿಗೆಗಾಗಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಚಿಕ್ಕ ವಯಸ್ಸಿನಿಂದಲೇ ಶ್ರಮವಹಿಸಿದ್ದಾರೆ. ಭೋವಿ ವಡ್ಡರು ಒಂದುಕಡೆ ಸೇರುವ ಜನಾಂಗವಲ್ಲ. ಶ್ರಮಪಟ್ಟು ದುಡಿಯುವ ಜನಾಂಗ. ಅಂತಹವರನ್ನು ಸಂಘಟಿಸಿ ಒಂದು ಕಡೆ ಸೇರಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಮಾತನಾಡಿ, ಮಧ್ಯ ಕರ್ನಾಟಕದಲ್ಲಿ ಜ್ಞಾನದ ಕಣಜವಾಗಿ ಸಮುದಾಯವನ್ನ ಸಂಘಟಿಸಲು ದಿವಂಗತ ಮಂಜರಿ ಹನುಮಂತಪ್ಪನವರು ಶ್ರಮಿಸಿದ್ದಾರೆ. ಈ ಭಾಗದಲ್ಲಿ ಇಂದು ಉನ್ನತ ಹುದ್ದೆಗಳನ್ನು ಪಡೆದಿರುವ ಅನೇಕ ಸಮುದಾಯದ ಅಧಿಕಾರಿಗಳು ಮಂಜರಿ ಹನುಮಂತಪ್ಪನವರು ಸ್ಥಾಪಿಸಿದ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರು ನೀಡಿದ ಶಿಕ್ಷಣ ಇವತ್ತು ಸಮುದಾಯದ ಅಭಿವೃದ್ಧಿಗೆ ಶಕ್ತಿಯಾಗಿದೆ ಎಂದು ಹೇಳಿದರು. ಸಚಿವರಾದ ಭೈರತಿ ಸುರೇಶ್, ಶಾಸಕ ಅಜಯ್ ಸಿಂಗ್, ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.