ಉಲುಕ್ ಉಪ್ಪಿನಂಗಡಿ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಧಾರ್ಮಿಕ, ವ್ಯಾವಹಾರಿಕ ಕೇಂದ್ರ ಉಪ್ಪಿನಂಗಡಿಯಲ್ಲಿ ನಾಲ್ಕು ದಶಕಗಳಿಂದ ಕಾಡುತ್ತಿದ್ದ ಚರಂಡಿ ಸಮಸ್ಯೆಗೆ ಸಹಸ್ರಾರು ಚರ್ಚೆಗಳು ನಡೆದರೂ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಅಚ್ಚರಿ ಎಂಬಂತೆ ಪುತ್ತೂರು ಸಹಾಯಕ ಕಮಿಷನರ್ ನಿರ್ದೇಶನ, ಅದಕ್ಕೆ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳಿಂದ ವ್ಯಕ್ತವಾದ ಸ್ಪಂದನ ದೀರ್ಘ ಕಾಲದ ಸಮಸ್ಯೆ ಸುಲಭವಾಗಿ ಬಗೆಹರಿಯುವಂತೆ ಮಾಡಿದೆ.
ಚರಂಡಿ ಇತಿಹಾಸ:ಉಪ್ಪಿನಂಗಡಿ ಪೇಟೆಯ ಪಾಲಿಗೆ ರಾಜ ಕಾಲುವೆಗೆ ಹಲವು ಚರಂಡಿಗಳ ತ್ಯಾಜ್ಯ ಬಂದು ಸೇರುತ್ತದೆ. ಚರಂಡಿಯಲ್ಲಿ ಹರಿದು ಬರುವ ಕೊಳಚೆ ನೀರು ಉಪ್ಪಿನಂಗಡಿಯ ಸೂರಪ್ಪ ಕಾಂಪೌಂಡ್, ಶೆಣೈ ಆಸ್ಪತ್ರೆ, ಮಾದರಿ ಶಾಲೆಯಾಗಿ ನಟ್ಟಿಬೈಲು ಪ್ರದೇಶವನ್ನು ಕ್ರಮಿಸಿ ಕುಮಾರಧಾರಾ ನದಿ ಸೇರುತ್ತದೆ. ಹೀಗೆ ಕ್ರಮಿಸುವಾಗ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಸಾಧಿಸುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಯಲ್ಲಿ ಹಾಕಲಾದ ಮೋರಿ ಬಳಸಿ ಸಾಗುವುದಾಗಿತ್ತು. ಮೋರಿಯ ಗಾತ್ರ ಸಣ್ಣದೋ, ಚರಂಡಿಯ ಹರಿಯುವಿಕೆಯ ಹಾದಿಯ ಹೂಳು ತುಂಬಿರುವುದೋ ಕಾರಣದಿಂದ ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ವರ್ಷದ ಎಲ್ಲಾ ದಿನಗಳಲ್ಲಿಯೂ ಸಮಸ್ಯೆ ಕಾಡುತ್ತಿತ್ತು.
ಅಂದು ಉಪ್ಪಿನಂಗಡಿಯಲ್ಲಿ ಬಾಡಿಗೆ ಮನೆಗಳು ಲಭ್ಯವಿದ್ದ ಸೂರಪ್ಪ ಕಂಪೌಂಡ್ ನಲ್ಲಿದ್ದ ವಸತಿಯ ನಿವಾಸಿಗರು ಇಲ್ಲಿನ ಹರಿಯದೆ ನಿಂತ ತ್ಯಾಜ್ಯದ ದುರ್ನಾತಕ್ಕೆ ಸಿಲುಕಿ ಮನೆಗಳನ್ನೇಖಾಲಿ ಮಾಡಬೇಕಾದ ಪರಿಸ್ಥಿತಿ ಇತ್ತು. ಇದೇ ಕಾರಣಕ್ಕೆ ಪ್ರಸಕ್ತ ಇಡೀ ಪ್ರದೇಶ ಜನ ವಸತಿ ಇಲ್ಲದೆ ಬಿಕೋ ಎನ್ನುವಂತಾಯಿತು. ಚರಂಡಿಯಲ್ಲಿ ನೀರು ಹರಿಯದೆ ಪದೇ ಪದೇ ತಗ್ಗು ಪ್ರದೇಶದ ವಾಣಿಜ್ಯ ಮಳಿಗೆಗಳು ಕೃತಕ ನೆರೆಗೆ ಸಿಲುಕಿ ವಾರಗಟ್ಟಲೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಸ್ಥಿತಿಗಳು ಕಳೆದ ವರ್ಷದ ವರೆಗೆ ಸಾಮಾನ್ಯವಾಗಿತ್ತು. ಪರಿಸರದ ಯಾರದ್ದೇ ಬಾವಿಯ ನೀರು ಇದೇ ಕಾರಣಕ್ಕೆ ಕುಡಿಯಲು ಅಯೋಗ್ಯವಾಗಿತ್ತು. ಸಮಸ್ಯೆ ಪರಿಹಾರ ಕಾಣಲೇ ಇಲ್ಲ:!ಸಮಸ್ಯೆ ಬಗೆಹರಿಸಲು ಎಲ್ಲಾ ಜನಪ್ರತಿನಿಧಿಗಳಿಗೆ , ಅಧಿಕಾರಿಗಳಿಗೆ ಸತತ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾರಿಗೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿರಲಿಲ್ಲ. ಈ ಚರಂಡಿ ಇರುವುದು ಹೆದ್ದಾರಿಯ ಬಳಿಯಲ್ಲೇ ಆದರೂ ಅದು ಹೆದ್ದಾರಿಯ ವ್ಯಾಪ್ತಿಯಲ್ಲಿ ಇರಲಿಲ್ಲ. ಬೆಳ್ತಂಗಡಿ ಪಿಡಬ್ಲ್ಯೂಡಿ ವಿಭಾಗಕ್ಕೆ ಸೇರಿದ ರಸ್ತೆಯ ಅಡಿಯಲ್ಲಿದ್ದ ಈ ಚರಂಡಿ ದುರಸ್ತಿ ಮಾಡಲು ಆ ಇಲಾಖೆಗೆ ಅಗತ್ಯ ಕಾಣಿಸಲಿಲ್ಲ. ಅಗತ್ಯ ಕಂಡ ಪಂಚಾಯಿತಿ ಆಡಳಿತಕ್ಕೆ ಬೃಹತ್ ಮೊತ್ತವನ್ನು ಚರಂಡಿಯೊಂದಕ್ಕೆ ವಿನಿಯೋಗಿಸಲು ಸಾಧ್ಯವಾಗುತ್ತಿರಲಿಲ್ಲ.ಸಮಸ್ಯೆ ಬಗೆಹರಿಯದೆ ಹೋದಾಗ ಜನತೆ ಸಮಸ್ಯೆಯೊಂದಿಗೆ ಬದುಕಲು ಕಲಿತರು. ಶುದ್ದ ಪರಿಸರದ ಹಕ್ಕು ಕೇಳುವ ಬದಲು ಶುದ್ಧ ಪರಿಸರವನ್ನು ಅರಸಿ ಬೇರೆಡೆಗೆ ವಲಸೆ ಹೋಗಲು ಮುಂದಾದರು. ಅಂತಿಮವಾಗಿ ಈ ಸಮಸ್ಯೆಯನ್ನೇ ಮರೆತಿದ್ದರು. ಸಮಸ್ಯೆ ಪರಿಹಾರ ಆದದ್ದು ಹೀಗೆ...: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾರಣಕ್ಕೆ ಉಪ್ಪಿನಂಗಡಿಯಲ್ಲಿ ಎತ್ತರಿಸಿದ ರಸ್ತೆಯ ಕಾಮಗಾರಿಯ ಕಾರಣದಿಂದ ಸುಗಮ ವಾಹನ ಸಂಚಾರಕ್ಕೆ ತಡೆಯುಂಟಾಗಿ ಜನ ಸಮಸ್ಯೆಗೆ ಸಿಲುಕಿತು. ಆಗ ಪತ್ರಿಕಾ ವರದಿಯಿಂದ ಎಚ್ಚೆತ್ತು ಮೇ ೨ ರಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಸ್ಥಳಕ್ಕೆ ಆಗಮಿಸಿದ್ದರು.
ಈ ವೇಳೆ ದೀರ್ಘಕಾಲದ ಚರಂಡಿ ಸಮಸ್ಯೆಯ ಬಗ್ಗೆ ಅವರ ಗಮನ ಸೆಳೆದಾಗ ಹೆದ್ದಾರಿ ಕಾಮಗಾರಿ ನಿರತ ಅಧಿಕಾರಿಗಳಿಗೆ ಹೆದ್ದಾರಿಯ ಸಂಪರ್ಕ ರಸ್ತೆಯಡಿ ಹಾದು ಹೋಗಿರುವ ಚರಂಡಿ ತೆಗೆದು ದೊಡ್ಡ ಗಾತ್ರದ ಕಾಂಕ್ರೀಟ್ ಚರಂಡಿ ಅಳವಡಿಸಲು ನಿರ್ದೇಶನ ನೀಡಿದರು.ಈ ರಸ್ತೆಯ ಕಾಮಗಾರಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕಾಮಗಾರಿ ನಿರತ ಅಧಿಕಾರಿಗಳು ತಿಳಿಸಿದರಾದರೂ , ಸಾರ್ವಜನಿಕರ ಹಿತಕ್ಕಾಗಿ ದೀರ್ಘ ಕಾಲದ ಸಮಸ್ಯೆಯ ನಿವಾರಣೆಗಾಗಿ ಸಾಮಾಜಿಕ ಬದ್ದತೆ ತೋರಿ ಕಾಮಗಾರಿಯನ್ನು ನಡೆಸಲು ನಿರ್ದೇಶನ ನೀಡಿದರು. ಕಾಮಗಾರಿಗೆ 15 ದಿನಗಳ ಗಡುವನ್ನೂ ವಿಧಿಸಿ , ಮೇಲ್ವಿಚಾರಣೆಗೆ ಸ್ಥಳೀಯ ಕಂದಾಯ ನಿರೀಕ್ಷಕರನ್ನು ಹಾಗೂ ಪಂಚಾಯತ್ ಪಿಡಿಒ ಅವರನ್ನು ನಿಯೋಜಿಸಿದರು.
ನೀಡಿದ ಗಡುವು ದಾಟಿದರೂ ಕಾಮಗಾರಿ ಪ್ರಗತಿಯಲ್ಲಿ ಸಾಗಿ ಈಗಾಗಲೇ ರಸ್ತೆಯ ಮುಕ್ಕಾಲು ಭಾಗ ಬೃಹತ್ ಚೌಕಾಕಾರದ ಕಾಂಕ್ರಿಟ್ ಮೋರಿ ಅಳವಡಿಸಲಾಗಿದೆ. ಇದರಿಂದಾಗಿ ತ್ಯಾಜ್ಯ ನೀರು , ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುವುದು. ಒಟ್ಟಾರೆ ೪೦ ವರ್ಷಗಳಿಂದ ಸಾಧ್ಯವಾಗದ ಕಾರ್ಯ , ಅಧಿಕಾರಿಯೋರ್ವರ ಪ್ರಾಮಾಣಿಕತೆ, ಇಚ್ಚಾಶಕ್ತಿ ಯಿಂದಾಗಿ ಸುಲಲಿತವಾಗಿ ಬಗೆಹರಿಯುವ ಹಂತಕ್ಕೆ ತಲುಪಿದ್ದು ಗಮನಾರ್ಹ.......................ಸುಧೀರ್ಘ ಕಾಲ ಚರಂಡಿ ಸಮಸ್ಯೆ ಸಾರ್ವಜನಿಕರನ್ನು ಕಾಡುತ್ತಿರುವ ವಿಚಾರ ತಿಳಿದು ಸಮಸ್ಯೆಯ ಗಂಭೀರತೆ ಅರ್ಥವಾಗಿತ್ತು. ಅದಕ್ಕಾಗಿ ಕೆಎನ್‌ಆರ್ ಸಂಸ್ಥೆಯ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸಹಕಾರ ಪಡೆದು ಬೃಹತ್ ಗಾತ್ರದ ಮೋರಿ ಅಳವಡಿಸಲು ಸೂಚಿಸಿದ್ದೆ. ನಮ್ಮ ಕರ್ತವ್ಯವೇ ಸಾರ್ವಜನಿಕರ ಸೇವೆ ಆಗಿರುವುದರಿಂದ ಇದನ್ನು ಮಾಡಲು ಮುಂದಾಗಿರುವೆನು ವಿನಃ ಇದರಲ್ಲಿ ಹೆಚ್ಚುಗಾರಿಕೆ ಇಲ್ಲ.
-ಜುಬೀನ್ ಮೊಹಾಪಾತ್ರ, ಪುತ್ತೂರು ಸಹಾಯಕ ಕಮಿಷನರ್...................
ಉಪ್ಪಿನಂಗಡಿಯಲ್ಲಿ ಸುಮಾರು ೩೦ ಮೀಟರ್ ಉದ್ದದ ಬೃಹತ್ ಗಾತ್ರದ ಕಾಂಕ್ರಿಟ್ ಮೋರಿಯ ಕಾಮಗಾರಿಯನ್ನು ಕೆಎನ್‌ಆರ್ ಸಂಸ್ಥೆ ಹೆಚ್ಚುವರಿಯಾಗಿ ಮಾಡುತ್ತಿದೆ. ಅಂದಾಜು ೩೦ ಲಕ್ಷ ರು. ವೆಚ್ಚದ ಈ ಕಾಮಗಾರಿ ಅನುಮೋದಿತ ಕಾಮಗಾರಿಯ ವ್ಯಾಪ್ತಿಯಲ್ಲಿ ಇಲ್ಲ.-ನಂದಕುಮಾರ್, ಕೆಎನ್‌ಆರ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ............................
ದೀರ್ಘ ಕಾಲದ ಸಮಸ್ಯೆಯನ್ನು ಇಷ್ಟೊಂದು ಸುಲಲಿತವಾಗಿ ಹಾಗೂ ಕಾಲಮಿತಿಯೊಳಗೆ ಬಗೆಹರಿಸಿದ ಪುತ್ತೂರು ಸಹಾಯಕ ಕಮಿಷನರ್ ಕಾರ್ಯ ವೈಖರಿ ಶ್ಲಾಘನೀಯ. ಸಮಸ್ಯೆ ಬಗೆ ಹರಿಸಿದ ಸಹಾಯಕ ಕಮಿಷನರ್ ಅವರನ್ನು ಜನತೆ ಮರೆಯುವಂತಿಲ್ಲ.-ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ.
...............ಹಲವಾರು ವರ್ಷಗಳಿಂದ ದುರ್ನಾತ ಪ್ರಸಹರಿಸುತ್ತಿದ್ದ ಚರಂಡಿಯ ಸಮಸ್ಯೆ ಪುತ್ತೂರು ಸಹಾಯಕ ಕಮಿಷನರ್ ಅವರಿಂದ ಬಗೆಹರಿಯುತ್ತಿದೆ ಎಂದು ತಿಳಿಯಿತು. ಇನ್ನಾದರೂ ದುರ್ನಾತ ಮುಕ್ತ ಪರಿಸರ ನಮ್ಮದಾಗಲಿ.
-ವಿನೋದ್ ಕುಮಾರ್ ಚಂದ್ರಮಾ, ಜವಳಿ ಉದ್ಯಮಿ.