ಪಾಕ್‌ ಘೋಷಣೆ: ಕೈಕೈ ಮಿಲಾಯಿಸುವ ಹಂತಕ್ಕೆ ಗದ್ದಲ

KannadaprabhaNewsNetwork | Updated : Feb 29 2024, 01:29 PM IST

ಸಾರಾಂಶ

ಪಾಕ್ ಪರ ಘೋಷಣೆ ವಿಚಾರವಾಗಿ ಕಾಂಗ್ರೆಸ್‌ ಸದಸ್ಯ ಅಬ್ದುಲ್ ಜಬ್ಬಾರ್ ಅವರು ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಅವರ ವಿರುದ್ಧ ಅಸಂವಿಧಾನಿಕ ಮತ್ತು ಏಕವಚನ ಪ್ರಯೋಗದಿಂದ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಾಕ್ ಪರ ಘೋಷಣೆ ವಿಚಾರವಾಗಿ ಕಾಂಗ್ರೆಸ್‌ ಸದಸ್ಯ ಅಬ್ದುಲ್ ಜಬ್ಬಾರ್ ಅವರು ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಅವರ ವಿರುದ್ಧ ಅಸಂವಿಧಾನಿಕ ಮತ್ತು ಏಕವಚನ ಪ್ರಯೋಗದಿಂದ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಬುಧವಾರ ಸದನ ಆರಂಭವಾಗುತ್ತಿದ್ದಂತೆ ಘಟನೆ ವಿಚಾರವಾಗಿ ಬಿಜೆಪಿ ಸದಸ್ಯರು ಸರ್ಕಾರದಿಂದ ಉತ್ತರ ಕೇಳಿದರು. ಸಚಿವ ಎಚ್‌.ಕೆ. ಪಾಟೀಲ್ ಉತ್ತರಿಸಿ, ಆ ರೀತಿ ನಿಜವಾಗಿಯು ಘಟನೆ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ. 

ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದರು. ಈ ಹೇಳಿಕೆಯಿಂದ ತೃಪ್ತರಾಗದ ರವಿಕುಮಾರ್, ದೇಶದ್ರೋಹಿಗಳು ಒಳಗೆ ಬಂದಿದ್ದು ಹೇಗೆ? ಅವರಿಗೆ ಪಾಸ್ ನೀಡಿದವರು ಯಾರು? 

ಈ ರೀತಿಯ ಹೇಳಿಕೆ ನೀಡಿದವರನ್ನು ಕೂಡಲೇ ಬಂಧಿಸುವ ಬದಲು ಹಲವು ಸಚಿವರು ಸಮರ್ಥಿಸಿಕೊಳ್ಳುತ್ತಿರುವುದನ್ನು ನೋಡಿದರೆ ಈ ಸರ್ಕಾರ ದೇಶದ್ರೋಹಿಗಳ ಪರವಾಗಿ ನಿಂತಿರುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.

ಇದೊಂದು ದೇಶದ್ರೋಹಿಗಳ ಸರ್ಕಾರ. ಸಂವಿಧಾನ ವಿರೋಧಿ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ವಜಾಗೊಳಿಸಬೇಕು. ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು. ಆಡಳಿತ ನಡೆಸಲು ಇದೊಂದು ಅಯೋಗ್ಯ ಸರ್ಕಾರ ಎಂದು ರವಿಕುಮಾರ್ ವಾಗ್ದಾಳಿ ನಡೆಸಿದರು.

ರವಿಕುಮಾರ್ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಅಬ್ದುಲ್ ಜಬ್ಬಾರ್, ‘ಬಾಳ್ ಮಾತಾಡ್ತಾನಾ ಬಂದ್ ಮಾಡಿಸ್ರಿ ಅವನ ಬಾಯಿ’ ಎಂದು ಏಕ ವಚನದಲ್ಲಿ ಅಸಂವಿಧಾನಿಕ ಪದ ಬಳಸಿದರು.

ಇದರಿಂದ ಸಿಟ್ಟಿಗೆದ್ದ ರವಿಕುಮಾರ್, ಏಕವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಿ ಎಂದು ಏರುಧ್ವನಿಯಲ್ಲಿ ಹೇಳಿದರು. ತುಳಸಿ ಮುನಿರಾಜುಗೌಡ ಹಾಗೂ ಇತರ ಸದಸ್ಯರು ರವಿಕುಮಾರ್ ಬೆಂಬಲಕ್ಕೆ ಬಂದರು. 

ಮಾತಿನ ಚಕಮಕಿ ನಡುವೆ ಏರುಧ್ವನಿಯಲ್ಲಿ ತುಳಸಿ ಮುನಿರಾಜುಗೌಡ ಹಾಗೂ ರವಿಕುಮಾರ್ ಅವರು ಸದನದ ಬಾವಿಯ ಕಡೆ ತೆರಳಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಬಾವಿಯ ಕಡೆ ಆಗಮಿಸಿದರು. 

ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿರುವುದನ್ನು ಅರಿತ ಮಾರ್ಷಲ್‌ಗಳು ಸಭಾಪತಿ ಪೀಠದ ಬಳಿ ಆಗಮಿಸಿ ಎರಡು ಕಡೆಯ ಸದಸ್ಯರನ್ನು ತಡೆದು ನಿಲ್ಲಿಸಿದರು. ಈ ವೇಳೆ ತೀವ್ರ ಗದ್ದಲ ಉಂಟಾಗಿ ಕೆಲ ಕಾಲ ಸದನವನ್ನು ಮುಂದೂಡಲಾಯಿತು.

ಈ ವೇಳೆ ಪಾಕಿಸ್ತಾನ ಜಿಂದಾಬಾದ್ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ, ಜೈ ಶ್ರೀರಾಮ್, ಭಾರತ್ ಮಾತಾ ಕೀ ಜೈ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.

ಸದನ ಪುನಾರಂಭವಾದ ಬಳಿಕ ಸಭಾಪತಿಗಳು ಸದನಕ್ಕೆ ಗೌರವ ಕಾಪಾಡಲು ಏಕವಚನ ಪ್ರಯೋಗ ಮಾಡಬಾರದು ಎಂದರು. ದೇಶದ್ರೋಹಿ ಸರ್ಕಾರವೆಂದ ಕಾರಣ ಆವೇಶದಲ್ಲಿ ನೀಡಿದ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಜಬ್ಬಾರ್ ಹೇಳಿದರು.

ಪ್ರತಿಪಕ್ಷದ ಸದಸ್ಯರ ಗದ್ದಲದ ನಡುವೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಶ್ರೀ ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಗಳನ್ನು ಮಂಡಿಸಿ ಸದನದ ಅಂಗೀಕಾರ ಪಡೆದರು.

ಸಂಸತ್ತಿನಲ್ಲಿ ಗ್ಯಾಲರಿಯಿಂದ ಸದಸ್ಯರ ಕಡೆ ನುಗ್ಗಿದ ಇಬ್ಬರು ಪ್ರವೇಶಿಸಿ ದಾಂಧಲೆ ಮಾಡಿದ್ದು ಹೇಗೆ? ಅವರಿಗೆ ಪಾಸ್ ಕೊಟ್ಟವರು ಯಾರು? ನಿಮ್ಮ ಸಂಸದರೇ ಅಲ್ಲವಾ? ಎಂದು ಸಚಿವ ಎಚ್.ಕೆ. ಪಾಟೀಲ್ ಪ್ರಶ್ನಿಸಿದರು.

ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದ್ದು, ಇಲ್ಲಿ ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧವೂ ದೇಶದ್ರೋಹ ಕೇಸ್ ದಾಖಲಿಸಿ ಬಂಧಿಸಿ ಎಂದು ತುಳಸಿ ಮುನಿರಾಜುಗೌಡ ಹೇಳಿದರು.

ರಾಜ್ಯದ ಬೇರೆ ಬೇರೆ ಕಡೆ ಮಾತನಾಡುತ್ತಿದ್ದ ತುಕಡೆ ಗ್ಯಾಂಗ್ ಸದಸ್ಯರು, ಈಗ ವಿಧಾನಸೌಧದ ಒಳಗೆ ಬಂದು ಮಾತನಾಡುತ್ತಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ಎನ್‌ಐಎಗೆ ವಹಿಸಬೇಕು ಎಂದು ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.

ಟಿ.ಎ.ಸರವಣ ಮಾತನಾಡಿ, ದೇಶದ್ರೋಹದ ಹೇಳಿಕೆ ನೀಡಿರುವ ಯಾರೇ ಆಗಿದ್ದರೂ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದರು.

ದೇಶದ ಅಖಂಡತೆ, ಸಾರ್ವಭೌಮತ್ವ ಮತ್ತು ಭದ್ರತೆ ವಿಚಾರ ಬಂದಾಗ, ಪಕ್ಷಾತೀತವಾಗಿ ನಾವೆಲ್ಲಾ ಒಂದಾಗಬೇಕು ಎಂದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು, ಮಹಾಭಾರತದ ಒಂದು ವಿಷಯವನ್ನು ಉಲ್ಲೇಖಿಸಿದರು.

ಕೌರವರು ಮತ್ತು ಪಾಂಡವರನ್ನು ಕುರುಕುಲ ಎಂದು ಕರೆಯಲಾಗುತ್ತದೆ. ಯಾವುದೊ ಕಾರಣಕ್ಕೆ ಕೌರವರನ್ನು ಯಕ್ಷರು ಬಂಧಿಸಿ ಕರೆದೊಯ್ಯುತ್ತಾರೆ. ಆಗ ಧರ್ಮರಾಯನು ಭೀಮಾ ಮತ್ತು ಅರ್ಜುನ ಅವರನ್ನು ಉದ್ದೇಶಿಸಿ, ‘ಕೌರವ ಮತ್ತು ಪಾಂಡವರು ಎಂದು ಜಗಳ ಮಾಡುವಾಗ ನಾವು ಎರಡು ಪ್ರತ್ಯೇಕ ಗುಂಪುಗಳು ಇರಬಹುದು. 

ಆದರೆ, ಕುಲದ ಪ್ರಶ್ನೆ ಬಂದಾಗ ನಾವು 105 ಜನರು ಒಗ್ಗಟ್ಟಾಗಿರಬೇಕು. ಹೀಗಾಗಿ, ಯಕ್ಷರಿಂದ ಕೌರವರನ್ನು ರಕ್ಷಣೆ ಮಾಡಿಕೊಂಡು ಬನ್ನಿ’ ಎಂದು ಸಲಹೆ ನೀಡಿದ್ದರು. 

ಅದೇ ರೀತಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ರಾಜಕೀಯ, ಸೈದ್ದಾಂತಿಕ ವಿಚಾರಗಳು ಬಂದಾಗ ಬೇರೆ ಬೇರೆ ಆಗಿರಬಹುದು. ಆದರೆ, ದೇಶದ ವಿಚಾರ ಬಂದಾಗ ನಾವೆಲ್ಲಾ ಒಂದಾಗಿರಬೇಕು ಎಂದು ಪೂಜಾರಿ ನುಡಿದರು.

ಬಿಜೆಪಿಯವರ ಪಾಲಿಗೆ ಪಾಕಿಸ್ತಾನ ಶತ್ರುರಾಷ್ಟ್ರ ಆಗಿರಬಹುದು. ಆದರೆ, ನಮಗೆ ಶತ್ರುರಾಷ್ಟ್ರ ಅಲ್ಲ. ಅದು ನಮ್ಮ ಪಕ್ಕದ ರಾಷ್ಟ್ರ ಎಂದು ಚರ್ಚೆ ವೇಳೆ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

Share this article