ರೋಗಗ್ರಸ್ತ ಗಿಡ ಕಿತ್ತು ನಾಶಪಡಿಸಿ: ಡಾ. ಸಂತೋಷ ಎಚ್.ಎಂ.

KannadaprabhaNewsNetwork |  
Published : Jul 21, 2025, 01:30 AM IST
ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೈಫ್ ಸಂಸ್ಥೆ ವತಿಯಿಂದ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ರೈತರಿಗೆ ಹಿರೇಕಾಯಿ ಮತ್ತು ಬೆಂಡೆಕಾಯಿ ಬೆಳೆಯ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಬೈಪ್ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಜಿ.ಎಸ್. ಹೆಗ್ಡೆ ಮಾತನಾಡಿ, ರೈತರು ಮಣ್ಣಿನ ಆರೋಗ್ಯ ಕಾಪಾಡಲು ಹಸಿರೆಲೆ ಗೊಬ್ಬರದ ಬಳಕೆಯನ್ನು ಮಾಡಬೇಕು. ಕಾಲ ಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಿ ಪೋಷಕಾಂಶ ನಿರ್ವಹಣೆ ಮಾಡಬೇಕು ಎಂದರು.

ರಾಣಿಬೆನ್ನೂರು: ಬೆಂಡೆಯು ಒಂದು ಮುಖ್ಯ ತರಕಾರಿ ಬೆಳೆಯಾಗಿದ್ದು, ಹೆಚ್ಚಿನ ಜೀವಸತ್ವ ಸಿ, ಐಯೋಡಿನ್ ಮತ್ತು ಸುಣ್ಣದ ಅಂಶವನ್ನು ಹೊಂದಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಎಚ್.ಎಂ. ತಿಳಿಸಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೈಫ್ ಸಂಸ್ಥೆ ವತಿಯಿಂದ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ರೈತರಿಗೆ ಹಮ್ಮಿಕೊಂಡಿದ್ದ ಹಿರೇಕಾಯಿ ಮತ್ತು ಬೆಂಡೆಕಾಯಿ ಬೆಳೆಯ ಸಮಗ್ರ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದಕ್ಕೆ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮವಾಗಿದೆ. ಬಿತ್ತನೆಗೆ ಮುನ್ನ ಬೀಜವು ಚೆನ್ನಾಗಿ ಮೊಳಕೆ ಬರಲು ಬಿತ್ತನೆಗೆ ಮುಂಚೆ ಅದನ್ನು 15 ತಾಸು ನೀರಿನಲ್ಲಿ ನೆನೆಸಬೇಕು. ನಂತರ ಬೀಜವನ್ನು 60 ಸೆಂಮೀ ಅಂತರದ ಸಾಲುಗಳಲ್ಲಿ 30 ಸೆಂಮೀ ಅಂತರದಲ್ಲಿ ಬಿತ್ತಬೇಕು.

ಕಾಯಿ ಕೊರೆಯುವ ಕೀಟಗಳ ನಿಯಂತ್ರಣಕ್ಕೆ ಮೋಹಕ ಬಲೆಗಳನ್ನು ಅಳವಡಿಸಿ(ಪ್ರತಿ ಎಕರೆಗೆ 5ರಂತೆ) ಅಜಾಡಿರಾಕ್ಟಿನ್ ಶೇ. ಹೊಂದಿರುವ ಬೇವಿನ ಕಷಾಯ(5 ಎಂಎಲ್/ 10 ಲೀಟರ್ ಬೆರೆಸಿ) ಸಿಂಪಡಿಸಬೇಕು. ಹಳದಿ ನಂಜುರೋಗದ ನಿರ್ವಹಣೆಗೆ ರೋಗದ ಲಕ್ಷಣ ಕಂಡ ಕೂಡಲೆ ರೋಗಗ್ರಸ್ತ ಗಿಡಗಳನ್ನು ಕಿತ್ತು ನಾಶಪಡಿಸಬೇಕು.

ಹಳದಿ ಅಂಟು ಬಲೆಗಳನ್ನು ಬೆಳೆಯ ಮಧ್ಯ ನಿಲ್ಲಿಸಿ, ಇಮಿಡಾಕ್ಲೋಪ್ರಿಡ್‌ಅನ್ನು 0.25 ಎಂಎಲ್/ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 15 ದಿನಗಳ ಅಂತರದಲ್ಲಿ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು. ಹಿರೇಕಾಯಿ ಬೆಳೆಗೆ ಸಾಮಾನ್ಯವಾಗಿ ಚಪ್ಪರ ಹಾಕಿ ಬೆಳೆಸಿದರೆ ಇಳುವರಿ ಹೆಚ್ಚು ಬರುತ್ತದೆ. ಅದರಲ್ಲಿ ಅರ್ಕಾ ವಿಕ್ರಮ್ ಎಂಬ ಸಂಕರಣ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಕಾಯಿಗಳು ಹಸಿರು ಬಣ್ಣವನ್ನು ಹೊಂದಿದ್ದು ಉದ್ದವಾಗಿರುತ್ತವೆ.

ಬೆಳೆಯ ಅವಧಿ 120- 130 ದಿವಸಗಳಾಗಿದ್ದು, ಒಂದು ಹೆಕ್ಟೇರಿಗೆ 29- 35 ಟನ್‌ನಷ್ಟು ಇಳುವರಿ ಪಡೆಯಬಹುದು. ಈ ಬೆಳೆಯಲ್ಲಿ ಬರುವ ಬೂಜು ತುಪ್ಪಟ ರೋಗ ನಿಯಂತ್ರಿಸಲು ಸೈಮೊಕ್ಸಾನಿಲ್ + ಮ್ಯಾಂಕೊಜೇಬ್‌ಅನ್ನು 1 ಗ್ರಾಂ ಪ್ರತಿಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹಣ್ಣು ನೊಣಗಳ ನಿಯಂತ್ರಣಕ್ಕೆ ಮೋಹಕ ಬಲೆಗಳ(5 ಎಕರೆ) ಜತೆ ಸೈಜಿಪೈರ್ ಶೇ.10.26 ಕೀಟನಾಶಕವನ್ನು 0.25 ಎಂ.ಎಲ್/ ಲೀಟರ್ ನೀರಿಗೆ ಬೆರೆಸಿ ಕಾಯಿ ಬೆಳವಣಿಗೆ ಅವಧಿಯಲ್ಲಿ ಸಿಂಪಡಿಸಬೇಕು ಎಂದರು.ಬೈಪ್ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಜಿ.ಎಸ್. ಹೆಗ್ಡೆ ಮಾತನಾಡಿ, ರೈತರು ಮಣ್ಣಿನ ಆರೋಗ್ಯ ಕಾಪಾಡಲು ಹಸಿರೆಲೆ ಗೊಬ್ಬರದ ಬಳಕೆಯನ್ನು ಮಾಡಬೇಕು. ಕಾಲ ಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಿ ಪೋಷಕಾಂಶ ನಿರ್ವಹಣೆ ಮಾಡಬೇಕು ಎಂದರು. ಹಿರೇಮಣಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 30 ರೈತರು ತರಬೇತಿಯಲ್ಲಿ ಮಾಹಿತಿ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲು ಗಾಲಿ ಕಾರ್ಖಾನೆ ಉದ್ಯೋಗಿಗೆಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್
ಡಿ.23ಕ್ಕೆ ರೈತರ ದಿನಾಚರಣೆ, ರಾಜ್ಯಮಟ್ಟದ ಸಮಾವೇಶ