ಕನ್ನಡಪ್ರಭ ವಾರ್ತೆ ಹಾಸನ
ಸಾಹಿತಿ ಶಕ್ತಿ ಕೇಂದ್ರದಿಂದ ದೂರ ಇದ್ದು, ವ್ಯವಸ್ಥೆ ನಡುವೆ ನಡೆವ ಘಟನೆಗಳನ್ನ ದಾಖಲಿಸಬೇಕು, ಜನಪರ ಚಿಂತನೆಗಳಿಗೆ ವಾಲಿಸುವ ಬಂಡಾಯಗಾರನಾಗಬೇಕು. ಆದರೆ ಈಗ ಸಾಹಿತ್ಯದ ದಿಕ್ಕುದೆಸೆಗಳು ಬದಲಾಗಿವೆ, ಇವತ್ತು ಸಾಹಿತ್ಯ ಶಕ್ತಿಕೇಂದ್ರಗಳ ಸುತ್ತಾ ಸುತ್ತುತ್ತಿವೆ. ಸಾಹಿತ್ಯದ ಪಂಥ ಶುರುವಾಗಿದೆ. ಪಕ್ಷಗಳ ಪರ ಪಂಥಗಳು ಬೇರೆ ಬೇರೆ ಆಮೀಷಗಳಿಗಾಗಿ ಗಿರಕಿಹೊಡೆಯುತ್ತಿವೆ. ಇದು ಸಾಹಿತ್ಯದ ಬೆಳವಣಿಗೆಗೆ ಮಾರಕ ಎಂದು ಖ್ಯಾತ ಕಥಾಸಾಹಿತಿ ಕೇಶವರೆಡ್ಡಿ ಹಂದ್ರಾಳ ಹೇಳಿದರು. ಅವರು ಇತ್ತೀಚೆಗೆ ಹಸಿರುಭೂಮಿ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಂಯುಕ್ತಾಶ್ರಯದಲ್ಲಿ ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಸಾಹಿತಿ ಟಿ.ಎಚ್.ಅಪ್ಪಾಜಿಗೌಡ ಅವ ಸಾಹಿತ್ಯ ಕೃತಿಗಳಾದ ‘ಊರಮುಂದ್ಲಕೆರೆ’ ಕಥಾ ಸಂಕಲನ ಹಾಗೂ ‘ಸೌಪರ್ಣಿಕ’ ಲೇಖನಗಳ ಗುಚ್ಛ ಲೋಕಾರ್ಪಣಾ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು.ಹಾಸನದ ಜನಪರ ಚಳವಳಿಗಳ ಜೊತೆ ಗುರುತಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ಕಥೆಗಾರನಾಗಿ ಬೆಳೆದ ನನಗೆ ಜನರ ಸಾಮಾಜಿಕ ಚಿಂತನೆಗಳ ನೆಲೆಯಲ್ಲಿ ಕಥನವನ್ನು ಕಟ್ಟಿದ ಗದ್ದರ್ ಮತ್ತು ನಕ್ಸಲಿಸಂ ನನ್ನ ಉತ್ತಮ ಸ್ನೇಹಿತರು, ಗದ್ದರನ ಜನನಾಟ್ಯ ಮಂಚ್‌ನಿಂದ ಕವಿಗಳು ಜನರಿಗೆ ತಲುಪುವಂತಾದರು. ಜನರನ್ನು ಹುರಿದುಂಬಿಸಿ ಬಂಡಾಯಕ್ಕೆ ನಾಂದಿ ಹಾಡಿದ ಗದ್ದರ್ ಕಡೆಕಡೆಗೆ ಆಧ್ಯಾತ್ಮದ ದಾರಿ ತುಳಿದುಬಿಟ್ಟರು. ಕಮ್ಯುನಿಸಂ ವಿತ್ ಸ್ಪಿರುಚುಯಲ್ ಚಿಂತನೆ ಶುರುಮಾಡಿಕೊಂಡುಬಿಟ್ಟರು. ಆದರೆ ವರವರರಾವ್ ಮತ್ತಿತರ ನಕ್ಸಲ್ ಚಿಂತಕರು ಶಕ್ತಿಕೇಂದ್ರದ ಬಳಿಗೆ ಸುಳಿಯಲಿಲ್ಲ, ಅಧಿಕಾರ ಬಯಸಲಿಲ್ಲ ಎಂದು ವಿವರಿಸಿದರು.ಕೆರೆ ಮತ್ತು ನದಿ ಜೀವಚೈತನ್ಯದ ಚಿಲುಮೆಗಳು, ಇಡೀ ಜೀವನದ ವಿಕಾಸವೆಲ್ಲಾ ಈ ಜೀವಚೈತನ್ಯದ ನಡುವೆ ಬೆಳೆದಿರುತ್ತವೆ. ಹಾಗಾಗಿ ಯಾವುದೇ ಕಲಾವಿದನ ಕಲಾಕೃತಿಗೆ ಈ ಬೇರುಗಳು ಜೀವತುಂಬಬಲ್ಲವು. ಅಪ್ಪಾಜಿಗೌಡರ ಊರಮುಂದ್ಲ ಕೆರೆ ಭಾರತದ ನೆಲಮೂಲ ಸಾಂಸ್ಕೃತಿಕ ಬದುಕಿನ ಅನುಭವವನ್ನು ಲೋಕದ ಮುಂದೆ ಬಿಚ್ಚಿಡುತ್ತದೆ. ಇದು ನನ್ನ ಕಥನ ಶೈಲಿಗೆ ಪೂರಕವಾಗಿ ಹೊಂದಿಕೊಳ್ಳುತ್ತವೆ ಎಂದರು.
ಊರಮುಂದ್ಲ ಕೆರೆ ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಎನ್.ಎಲ್.ಚನ್ನೇಗೌಡ, ಕೆರೆಗಳು ಭೂಗಳ್ಳರ ದಾಹಕ್ಕೆ ಬಲಿಯಾಗಿರುವುದನ್ನ ಹಾಸನ ನಗರದ ಸತ್ತೆಕಟ್ಟೆ, ಜವೇನಹಳ್ಳಿ, ಕಾಟಿಹಳ್ಳಿ ಕೆರೆಗಳು ತಮ್ಮನ್ನು ತಾವು ನಿವೇದಿಸಿಕೊಳ್ಳುವ ಮೂಲಕ ಓದುಗನ ಮನಸ್ಸಿನಲ್ಲಿ ಸಾಕ್ಷಿಪ್ರಜ್ಞೆಯನ್ನು ಎಚ್ಚರಿಸುವ ಕೆಲಸವನ್ನು ಈ ಪುಸ್ತಕ ಮೂಲಕ ಮಾಡುತ್ತದೆ ಎಂದ ಅವರು, ಸಾಹಿತಿ ಪುಸ್ತಕದಲ್ಲಿ ಕೇವಲ ಕೆರೆ ವಿವರ ನೀಡಿಲ್ಲ. ಅದು ಅದರಕ್ಕರೆಯ ಬದುಕಿನ ಪರಿಸ್ಥಿತಿ ಕೇಂದ್ರೀಕರಿಸಿ ಕೆರೆಯಿಂದ ಮಾತನಾಡಿಸುತ್ತಾರೆ. ಪುಸ್ತಕದ 17 ಕಥೆಗಳಲ್ಲಿ 5 ಕಥೆ ನಗರದ ಅಭಿವೃದ್ಧಿಯಿಂದ ಕೆರೆಕಟ್ಟೆ ಹಾಗೂ ಗ್ರಾಮೀಣ ಬದುಕಿಗೆ ಆಗುವ ಪ್ರತಿಕೂಲ ಚಿತ್ರಣವನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಇವರ ಎಲ್ಲ ಕಥೆಗಳು ನೆಲಮೂಲ ಸಂಸ್ಕೃತಿಯ ಜಾಡಿನಲ್ಲೇ ಗರಣೆಗಟ್ಟಿವೆ ಎಂದು ಒಂದೊಂದನ್ನೇ ವಿವರಿಸಿದರು.ಎರಡನೇ ಪುಸ್ತಕ ಸೌಪರ್ಣಿಕಾ ಲೇಖನಗಳ ಗುಚ್ಛ ಬಿಡುಗಡೆ ಮಾಡಿ ಮಾತನಾಡಿದ ಯುವ ಸಾಹಿತಿ ಪರಮೇಶ್ ಮಡಬಲು, ಸೌಪರ್ಣಿಕಾ 22 ಲೇಖನಗಳ ಗುಚ್ಛ. ಬಹುತೇಕ ಲೇಖನಗಳು ಸಾಧಕರ ಕುರಿತು ದಾಖಲೆ ಮಾಡುತ್ತದೆ ಇಬ್ರಾಹಿಂ ಸುತಾರ, ಜಹೊನಾ, ಸಿದ್ದೇಶ್ವರ ಸ್ವಾಮೀಜಿ ಹಾಗೂ ಇತರ ಸಾಧಕರ ಬದುಕಿನ ಎಳೆಗಳನ್ನು ಬಿಡಿಸುತ್ತಾ ಹೋಗುತ್ತದೆ. ಹಾಗೆಯೇ ಕೊರೋನಾ ಕಾಲದಲ್ಲಿ ಲೇಖಕ ದಂಪತಿಗಳು ಇಂಗ್ಲೆಂಡ್ ಯಾತ್ರೆ ಮಾಡುವಾಗ ಅವರ ಮಡದಿಯ ಬ್ಯಾಗಿನೊಳಗಿನ ಕೊಬ್ಬರಿ ತಂದೊಡ್ಡಿದ ಯಡವಟ್ಟುಗಳನ್ನು ವಿಡಂಬನಾತ್ಮಕವಾಗಿ ದಾಖಲಿಸಿರುವುದು ರಸಸ್ವಾದ ನೀಡುತ್ತಾ ಸಾಗುತ್ತದೆ. ಅದನ್ನು ಓದುಗರು ಓದಿಯೇ ಅನುಭವಿಸಬೇಕು ಎಂದು ತಿಳಿಸಿ ಮಾತೃ ಭಾಷೆ ಎನ್ನುವುದು ಪ್ರಿತಿಯಭಾಷೆ, ಅಮೃತ ತೂಗುವ ಭಾಷೆ. ಕನ್ನಡಿಗರ ಮನೆ-ಮನಗಳಲ್ಲಿ ಹೇಗೆ ಬೆಳಗಬೇಕು ಎನ್ನುವುದನ್ನು ಸನ್ನಿವೇಶ ಅನುಭವಿಸಿ ಬರೆದ ಬರಹಗಳು ಮನಮುಟ್ಟುವಂತಿವೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲೆಯ ಹಿರಿಯ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಮಾತನಾಡಿ ‘ಊರಮುಂದ್ಲ ಕೆರೆ’ಯ ಮುನ್ನುಡಿ ಲೇಖಕನ ಇಂದ್ರಿಯ ಚುರುಕಾಗಿರಬೇಕು. ಅದಕ್ಕೆ ಮಾನವತ್ವದ ಗಾಳಿ ಬೀಸಬೇಕು ಎನ್ನುವ ಸಾಲನ್ನು ವಿಶ್ಲೇಷಿಸಿ ಮಾ.ಹನುಮಂತೆಗೌಡ ಎನ್ನುವವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಚಟುವಟಿಕೆ ನಡೆಸಲು ಕೋರಿಕೊಂಡಾಗ ಜಿಲ್ಲಾಧಿಕಾರಿಗಳನ್ನು ಕೇಳಬೇಕು ಎಂದು ಉದಾಸೀನ ಮಾಡಿ ನಮ್ಮನ್ನು ನಿರಂತರ ನಿರಾಸೆಗೊಳಪಡಿಸುತ್ತಿದ್ದರು. ಈ ಮನುಷ್ಯ ಮತ್ತು ಈ ಭವನ ಸಾಹಿತ್ಯಕ್ಕಲ್ಲ ಎಂದು ತೀರ್ಮಾನಿಸಿ ಹಾಸನ ನಗರದ ಶಾಲಾ ಕಾಲೇಜುಗಳಿಗೆ ತಿರುತಿರಿಗಿ ಸಾಹಿತಿಗಳನ್ನು ಹುಡುಕಿ ಸಂಘಟನೆ ಮಾಡಿ ಸುಧಾ ಹೋಟೆಲ್ ಪಕ್ಕ ಇರುವ ಶ್ರೀರಾಮ ದೇವಸ್ಥಾನದ ಜಗುಲಿಯಲ್ಲಿ ಜಿಲ್ಲೆಯ ಸಾಹಿತ್ಯದ ಅಂಗಳ ಮಾಡಿ ಸಾಹಿತ್ಯದ ಬೆಳವಣಿಗೆ ಮಾಡಿದ ಇತಿಹಾಸ ನೆನಪಿಸಿಕೊಂಡು ಇದರ ಭಾಗವಾಗಿ ಬೆಳೆದುಬಂದ ಅಪ್ಪಾಜಿಗೌಡರು 8ಕೃತಿಗಳನ್ನು ಹೊರತಂದಿರುವುದು ಹೆಮ್ಮೆಯ ವಿಷಯ ಎಂದು ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಪುಸ್ತಕ ಪರಿಚಯಿಸಿದ ಇಬ್ಬರು ವಿಮರ್ಶಕರು ಪುಸ್ತಕದೊಳಗಿನ ತಿರುಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿ, ಪುಸ್ತಕ ಬರೆಯುವುದು ಎಷ್ಟು ಕಷ್ಟವೋ ಅದನ್ನು ಪಬ್ಲಿಕೇಶನ್ ಮಾಡಿ ಮಾರಾಟಮಾಡುವುದು ದುಪ್ಪಟ್ಟು ಕಷ್ಟ. ಹಾಗಾಗಿ ಜಿನರನ್ನು ಸಾಹಿತ್ಯದತ್ತ ಒಲವು ಹೆಚ್ಚಿಸುವುದು ಸವಾಲು ಎಂದರು.ಕೃತಿಕರ್ತ ಟಿ.ಎಚ್.ಅಪ್ಪಾಜಿಗೌಡ ತಮ್ಮ ಸಾಹಿತ್ಯ ಹುಟ್ಟಿದ ಅನುಭವ ಹಂಚಿಕೊಳ್ಳುತ್ತಾ ಸಾಹಿತ್ಯ ಹುಟ್ಟಿಕೊಳ್ಳುವುದು ಅನುಭವಗಳ ಮೊತ್ತದ ಮೂಲಕ, ನಾನು ನೋಡಿದ, ಅನುಭವಿಸಿದ ಸಂಗತಿಗಳನ್ನು ಕಲಾತ್ಮಕವಾಗಿ ದಾಖಲಿಸಿದ್ದೇನೆ ಅಷ್ಟೆ ಎಂದರು.
ಹಸಿರುಭೂಮಿ ಪ್ರತಿಷ್ಠಾನದ ಖಜಾಂಚಿ ಗಿರಿಜಾಂಬಿಕ ಕಾರ್ಯಕ್ರಮ ನಿರೂಪಿಸಿದರು, ಪ್ರತಿಷ್ಠಾನದ ಸದಸ್ಯೆ ಭವಾನಿ ಮೊದಲಿಗೆ ಪ್ರಾರ್ಥಿಸಿದರು. ಟ್ರಸ್ಟಿ ಶಿವಶಂಕರಪ್ಪ ಸ್ವಾಗತಿಸಿದರು, ಹಸಿರುಸಿರಿ ಸಂಚಾಲಕ ಪುರುಷೋತ್ತಮ ವಂದಿಸಿದರು.