ವಿವಿಧ ದಲಿತ ಸಂಘರ್ಷ ಸಮಿತಿ ಮುಖಂಡರ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರ ಒತ್ತುವರಿ ಭೂಮಿ ಗುತ್ತಿಗೆ ಕೊಡುವ ಆದೇಶ ರದ್ದುಪಡಿಸಿ, ಭೂಹೀನ ಬಡವರಿಗೆ ಹಂಚಿಕೆ ಮಾಡಬೇಕು ಎಂದು ವಿವಿಧ ದಲಿತ ಸಂಘರ್ಷ ಸಮಿತಿ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು. ನಾಲ್ಕು ಜಿಲ್ಲೆಯಲ್ಲಿ ಒಟ್ಟಾರೆ 76845ಎಕರೆ ಭೂ ಪ್ರದೇಶವನ್ನು ಸರ್ಕಾರ ಒತ್ತುವರಿದಾರರಿಂದ ಗುರುತಿಸಿದ್ದು, ಸಾರ್ವಜನಿಕ ಉಪಯೋಗಕ್ಕೆ ಅವಶ್ಯಕತೆಯಿರುವ ಭೂಮಿ ಕಾಯ್ದಿರಿಸಿ ಉಳಿಕೆ ಭೂಮಿಯನ್ನು ಎಲ್ಲಾ ಜನಾಂಗದ ಭೂಹೀನ ಬಡವರಿಗೆ, ಪೌರ ಕಾರ್ಮಿಕರಿಗೆ ಹಂಚಬೇಕು ಎಂದರು. ಬಡವರು ಅಕ್ರಮ ಸಾಗುವಳಿ ಮಾಡಿರುವ ಭೂಮಿಯನ್ನು ಫಾರಂ ನಂ.50, 53, 57 ರಡಿಯಲ್ಲಿ ನಿಯಮಾನುಸಾರ ಹಕ್ಕು ಪತ್ರ ನೀಡಬೇಕು. 2005 ಕ್ಕಿಂತ ಮೊದಲು ಸಾಗುವಳಿ ಮಾಡಿಕೊಂಡಿರುವವರಿಗೆ ಪರಿಶೀಲಿಸಿ ಕೂಡಲೇ ಹಕ್ಕುಪತ್ರ ವಿತರಿಸ ಬೇಕು ಎಂದರು. ಕಳೆದ ಐದು ದಶಕಗಳಿಂದ ಉಳ್ಳವರ ಒತ್ತುವರಿ ಭೂಮಿ ತೆರವುಗೊಳಿಸಿ ಭೂಹೀನ ಬಡವರಿಗೆ ಹಂಚುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಹಿಂದಿನ ಸರ್ಕಾರ ಒತ್ತುವರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದನ್ನು ವಿರೋಧಿಸಿತ್ತು. ಇದೀಗ ಭೂಮಿ ಕಾಯ್ದಿರಿಸಿ ಬಡವರಿಗೆ ಹಂಚುವಂತೆ ಒತ್ತಾಯಿಸಿದ್ದರೂ ಬಡವರ ಪರ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಉಳ್ಳವರ ಪರ ಆದೇಶ ಹೊರಡಿಸಿರುವುದು ಖಂಡನೀಯ ಎಂದು ತಿಳಿಸಿದರು. ಈಗಾಗಲೇ ರಾಜ್ಯದಲ್ಲಿ ನಿವೇಶನ ರಹಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಅಂಗನವಾಡಿ, ಆರೋಗ್ಯ ಕೇಂದ್ರ ಹಾಗೂ ಮಕ್ಕಳಿಗೆ ಆಟದ ಮೈದಾನವಿಲ್ಲ. ಗ್ರಾಮದ ಮಧ್ಯದಲ್ಲೇ ಶಾಲೆಗಳಿರುವ ಹಿನ್ನೆಲೆಯಲ್ಲಿ ಗದ್ದಲದಲ್ಲೇ ಕಲಿಕೆ ಮಾಡಲಾಗುತ್ತಿದೆ. ಅಲ್ಲದೇ ಅನೇಕ ಗ್ರಾಮಗಳಿಗೆ ಸ್ಮಶಾನ ಭೂಮಿ ನಿಗಧಿಯಾಗಿಲ್ಲ. ಪ್ರತಿನಿತ್ಯ ಕಾಡಾನೆಗಳ ಹಿಂಡು ಗ್ರಾಮದೊಳಗೆ ಪ್ರವೇಶಿಸಿ ಜನರ ಪ್ರಾಣ ಮತ್ತು ಆಸ್ತಿಯನ್ನು ಹಾನಿಗೊಳಿಸುತ್ತಿದೆ ಎಂದರು. ಈ ನಡುವೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ಭೂಮಿ ಕೊಡುವ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ. ಭೂಮಿಯನ್ನು ರಕ್ಷಿಸಿ ಬಡವರು ಹಾಗೂ ಭೂಹೀನರಿಗೆ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಕಬ್ಬಿಕೆರೆ ಮೋಹನ್‌ಕುಮಾರ್, ಬಾಲಕೃಷ್ಣ, ಎ.ಸಿ.ಜಯರಾಮಯ್ಯ, ಚಂದ್ರುಪುರ, ಮುಖಂಡರಾದ ವಿ.ಧರ್ಮೇಶ್, ಟಿ.ಎಲ್.ಗಣೇಶ್, ಆರ್.ಶೇಖರ್, ಇಲಿಯಾಜ್ ಅಹಮ್ಮದ್, ರಂಗಪ್ಪ, ಎಚ್. ಎಸ್.ವಿನೀತ್ ಹಾಜರಿದ್ದರು.
18 ಕೆಸಿಕೆಎಂ 1ರಾಜ್ಯ ಸರ್ಕಾರ ಒತ್ತುವರಿ ಭೂಮಿ ಗುತ್ತಿಗೆ ಕೊಡುವ ಆದೇಶ ರದ್ದುಪಡಿಸಬೇಕೆಂದು ಆಗ್ರಹಿಸಿ ವಿವಿಧ ದಲಿತ ಸಂಘರ್ಷ ಸಮಿತಿ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.