ಗಜೇಂದ್ರಗಡ: ಇತ್ತೀಚಿಗೆ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡುವುದು ಹಾಗೂ ಒಕ್ಕೂಟದಿಂದ ಒದಗಿಸುತ್ತಿರುವ ಪಶು ಆಹಾರವನ್ನು ಹೆಚ್ಚು ಹೆಚ್ಚು ಬಳಸುವುದು ಸೂಕ್ತ ಎಂದು ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ನಿರ್ದೇಶಕ ನೀಲಕಂಠ ಅಸೂಟಿ ಹೇಳಿದರು.
ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಧಾರವಾಡ ಹಾಲು ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಜಗದಂಬಾ ಸಮುದಾಯ ಭವನದಲ್ಲಿ ನಡೆದ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಪ್ರಗತಿ ಹಾಗೂ ಒಕ್ಕೂಟದ ಪ್ರಗತಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿದೆ ಎಂದರು.
ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ವರ್ಗಿಸ್ ಕುರಿಯನ್ ಅವರ ದೂರದೃಷ್ಟಿಯ ಫಲವಾಗಿ ಭಾರತದಲ್ಲಿ ಹೈನುಗಾರಿಕೆ ಹಾಗೂ ಡೈರಿ ಉದ್ಯಮವು ಒಂದು ಸ್ವಾವಲಂಬಿ ಉದ್ಯಮವಾಗಿ ಬೆಳೆದಿದೆ. ಡೈರಿ ಉದ್ಯಮವು ಗ್ರಾಮೀಣ ಭಾರತೀಯ ರೈತರಿಗೆ ಅದರಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಹಣ ಸಂಪಾದನೆಯ ಒಂದು ಸ್ಥಿರ ಮೂಲವಾಗಿರುವುದರ ಜತೆಗೆ ರಾಷ್ಟ್ರದ ಆರ್ಥಿಕತೆ ರೂಪಿಸುವ ಗ್ರಾಮೀಣ ಉದ್ಯಮವಾಗಿ ಬೆಳದಿದೆ. ಗುಜರಾತಿನ ಅಮುಲ್ ಬಿಟ್ಟರೆ ರಾಜ್ಯದ ಕೆ.ಎಂ.ಎಫ್-ನಂದಿನಿ ಅತ್ಯಂತ ದೊಡ್ಡ ಹಾಲು ಉತ್ಪಾದಕರ ಸಂಘಟನೆಯಾಗಿದ್ದು, ಕರ್ನಾಟಕದಲ್ಲಿ ಹಾಲು ಎಂದರೆ ನೆನೆಪಾಗುವುದು ನಂದಿನಿ. ಇದು ಕನ್ನಡಿಗರ ಅತ್ಯಂತ ಭಾವನಾತ್ಮಕ ಹೆಮ್ಮೆಯ ಸಂಸ್ಥೆಯಾಗಿದೆ ಎಂದರು.
ಧಾರವಾಡ ಹಾಲು ಒಕ್ಕೂಟದ ಗದಗ ಜಿಲ್ಲೆಯ ಮುಖ್ಯಸ್ಥ ಡಾ.ಪ್ರಸನ್ ಎಸ್. ಪಟ್ಟೇದ ರವರು ಮಾತನಾಡಿ, ಹಸಿರೇ ಉಸಿರು ಎಂಬಂತೆ ಭೂಮಿಯಲ್ಲಿ ಅನೇಕ ನೈಸರ್ಗಿಕ ಸಂಪನ್ಮೂಲಗಳಿವೆ. ಸಾವಯವ ಕೃಷಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಲು ಅನೂಕೂಲವಾಗುತ್ತದೆ. ದನಕರುಗಳ ಗೋಮೂತ್ರ ಮತ್ತು ಸಗಣಿಯಿಂದ ಗೊಬ್ಬರವನ್ನು ತಯಾರಿಸಿ ಹೊಲಕ್ಕೆ ಹಾಕುವುದರಿಂದ ಉತ್ತಮವಾದ ಫಲವತ್ತತೆ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಡಿ.ಎಸ್. ಆಶಿ ಮಾತನಾಡಿ, ಒಕ್ಕೂಟ ಚೆನ್ನಾಗಿದ್ದರೆ ಸಹಕಾರ ಸಂಘಗಳು ಚೆನ್ನಾಗಿರುತ್ತವೆ. ಹಾಲು ಮಹಾಮಂಡಳದ ವ್ಯಾಪ್ತಿಯಲ್ಲಿ ಇರುವ 8 ಪಶು ಆಹಾರ ಘಟಕಗಳು ಕಾರ್ಯಾಚರಣೆಯಲ್ಲಿವೆ. ಕೆ.ಎಂ.ಎಫ್. ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ ಹಾಲು ಉತ್ಪಾದಕರಿಗೆ ಪಶು ವೈದ್ಯಕೀಯ ಸೌಲಭ್ಯ ಸೇರಿ ವಿವಿಧ ಕಾರ್ಯಕ್ರಮಗಳ ಜತೆಗೆ ಶೇ.೫೦ರಷ್ಟು ನೀಡುವ ಅನುದಾನದ ಸದುಪಯೊಗ ಪಡೆದುಕೊಳ್ಳಿ ಎಂದರು.
"ರಾಯಾಪೂರ ಕ.ಹಾ. ಮ. ತರಬೇತಿ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕರು ಡಾ. ಎಂ.ಬಿ. ಮಡಿವಾಳರ, ಶುದ್ಧ ಹಾಲು ಉತ್ಪಾದನೆ ಹಾಗೂ ಅಗೋಚರ ಕೆಚ್ಚಲುಬಾವು ಹಾಗೂ ನಿವೃತ್ತ ಸಹಾಯಕ ವ್ಯವಸ್ಥಾಪಕ ಧಾರವಾಡ ಒಕ್ಕೂಟದ ಬಿ.ಪಿ. ಹಿರೇಮಠ, ಸಹಕಾರ ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಕುರಿತು ಮತ್ತು ರೋಣ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಸಹಕಾರ ಕಾಯಿದೆಯ ಮುಖ್ಯಾಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳ ಕುರಿತು ಉಪನ್ಯಾಸ ನೀಡಿದರು.
ರೋಣ ಹಾಗೂ ಗಜೇಂದ್ರಗಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಿ. ಸಿ. ಸಾಲೋಟಗಿಮಠ ಹಾಗೂ ಮಲ್ಲಿಕಾರ್ಜುನ ಉಣಚಗೇರಿ ಜಗದಂಬಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಭಾಸ್ಕರಸಾ ಅರ್ಜುನಸಾ ಶಿಂಗರಿ ಸೇರಿ ಇತರರು ಇದ್ದರು.