ಕನ್ನಡಪ್ರಭ ವಾರ್ತೆ ಕೋಲಾರ
ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸರ್ಕಾರ ಮತ್ತು ದಾನಿಗಳು ಪ್ರೋತ್ಸಾಹ ಕೊಟ್ಟು ಅವರಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು, ರಾಜ್ಯ,ರಾಷ್ಟ್ರಮಟ್ಟದಲ್ಲಿ ಅವರು ಪ್ರತಿನಿಧಿಸಿ ಜಿಲ್ಲೆಯ ಘನತೆ ಹೆಚ್ಚಿಸುವ ಕೆಲಸಕ್ಕೆ ಎಲ್ಲರ ಸಹಕಾರ ಬೇಕು ಎಂದು ಬೆಂಗಳೂರಿನ ಡಿಸಿಪಿ ಡಿ.ದೇವರಾಜ್ ಹೇಳಿದರು.ಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ಕೊರಗಂಡಹಳ್ಳಿಯಲ್ಲಿ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಉತ್ತೇಜನ ಸಿಗದೆ ಎಷ್ಟೋ ಕ್ರೀಡಾಪಟುಗಳು, ಬೆಳಕಿಗೆ ಬರುತ್ತಿಲ್ಲ, ಅಂತಹ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಪ್ರಯತ್ನವೂ ನಡೆಯುತ್ತಿಲ್ಲ ಎಂದು ವಿಷಾದಿಸಿದರು.ಖಾತ್ರಿ ಮೂಲಕ ಕ್ರೀಡಾಂಗಣ
ನರೇಗಾ ಯೋಜನೆಯಲ್ಲಿ ಗ್ರಾಮಗಳಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಇದನ್ನು ಗ್ರಾಮಸ್ಥರು ಮತ್ತು ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಂಡು ಮಕ್ಕಳಿಗೆ ಉತ್ತೇಜನ ನೀಡಬೇಕೆಂದು ಹೇಳಿದ ಅವರು, ಸರ್ಕಾರಿ ಶಾಲೆಗಳಿಗೆ ಕ್ರೀಡಾಂಗಣ ಒದಗಿಸಲು ನರೇಗ ಉತ್ತಮ ಯೋಜನೆಯಾಗಿದ್ದು, ಇದರ ಸದ್ಬಳಕೆಗೆ ಗ್ರಾಮ ಪಂಚಾಯಿತಿಗಳು ಮುಂದಾಗಬೇಕು ಎಂದರು.ಕೋಲಾರ ಜಿಲ್ಲೆಯಲ್ಲಿ ಹಲವಾರು ಮಂದಿ ಕ್ರೀಡಾಪಟುಗಳು ಇದ್ದಾರೆ. ಅದರಲ್ಲಿ ಬಹುತೇಕರು ಬೆಂಗಳೂರಿಗೆ ಹೋಗಿ ಅಭ್ಯಾಸ ಮಾಡಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು. ಸಂಪ್ರದಾಯ ಪಾಲನೆಯಿಂದ ನೆಮ್ಮದಿ
ಗ್ರಾಮಗಳಲ್ಲಿ ಇವತ್ತಿಗೂ ಹಿರಿಯರು ಹಳೆ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬರುತ್ತಿರುವುದರಿಂದ ನೆಮ್ಮದಿಯ ವಾತಾವರಣವನ್ನು ಕಾಣಬಹದು. ಗ್ರಾಮಗಳಲ್ಲಿ ನಡೆಯುವ ದೇವರು ಪೂಜಾ ಕಾರ್ಯಕ್ರಮ, ಜಾತ್ರೆಗಳು ಸಂಬಂಧಗಳನ್ನು ಒಂದು ಗೂಡಿಸುತ್ತದೆ. ಕೋಲಾರ ತಾಲೂಕಿನ ಕೋರಗಂಡಹಳ್ಳಿಯಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದ ಪ್ರಯುಕ್ತ ಹಲವಾರು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುವುದಕ್ಕೆ ಗ್ರಾಮಸ್ಥರು, ನನ್ನ ಸ್ನೇಹಿತರು ನೀಡಿದ ಸಹಕಾರವನ್ನ ಇದೇ ಸಂದರ್ಭದಲ್ಲಿ ಡಿಸಿಪಿ ದೇವರಾಜ್ ಅವರು ಸ್ಮರಿಸಿದರು.ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಉದ್ಯಮಿ ಡಾ.ನಾರಾಯಣಸ್ವಾಮಿ ಮಾತನಾಡಿ, ಕ್ರೀಡೆಗಳು ಉತ್ತಮ ಆರೋಗ್ಯ ನೀಡಿವುದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಯುವಕರಲ್ಲಿ ಸೌಹಾರ್ದತೆಯ ಸಂಬಂಧ ನಿರ್ಮಿಸಲು ಸಹಕಾರಿಯಾಗಿವೆ, ದುಶ್ಚಟಗಳಿಂದಲೂ ಅವು ದೂರ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು.ಡಿಸಿಪಿ ಯೋಜನೆಗಳಿಗೆ ಬೆಂಬಲಿಸಿಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಜಿ.ಸುರೇಶ್‌ಬಾಬು ಮಾತನಾಡಿ, ಡಿಸಿಪಿ ದೇವರಾಜ್ ಅವರು ಕೋಲಾರದ ಅಭಿವೃದ್ದಿಗೆ ಅತ್ಯಂತ ದೂರದೃಷ್ಟಿಯ ಆಶಯಗಳನ್ನು ಇಟ್ಟುಕೊಂಡಿದ್ದಾರೆ, ಅವರ ಪ್ರಯತ್ನ ಸಫಲವಾಗಲು ಯುವಕರು ಸಹಕಾರ ನೀಡಬೇಕು, ಕ್ರೀಡೆಗಳ ಮೂಲಕ ಯುವಕರಲ್ಲಿ ಆತ್ಮಸ್ಥೈರ್ಯ ತುಂಬುತ್ತಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ, ಗ್ರಾಮೀಣ ಭಾಗದಲ್ಲಿ ಅತ್ಯಂತ ಸುಂದರ ಕ್ರೀಡಾಂಗಣ ನಿರ್ಮಿಸುವ ಅವರ ಆಲೋಚನೆ ಕಾರ್ಯಗತವಾಗಿದೆ ಎಂದರು.
ಶಿವರಾತ್ರಿ ಹಬ್ಬದ ಪ್ರಯುಕ್ತ ಕೋರಗಂಡಹಳ್ಳಿಯ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಾಗರಣೆ ಪ್ರಯುಕ್ತ ಕುರುಕ್ಷೇತ್ರ ನಾಟಕ ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ವಿಜ್ಞಾನಿ ಮುನಿಯಪ್ಪ, ಡಾ.ಶಂಕರ್, ಅರವಿಂದ್, ವಕೀಲ ಕಲ್ಲಂಡೂರು ಲೋಕೇಶ್, ಖಾಜಿ ಕಲ್ಲಹಳ್ಳಿ ಮುನಿರಾಜು, ಶಿಕ್ಷಣ ಇಲಾಖೆಯ ರಾಮಕೃಷ್ಣಪ್ಪ,ಪುರುಷೋತ್ತಮ್, ತೋಟಗಾರಿಕೆ ಇಲಾಖೆಯ ಪರಮೇಶ್ವರ್, ಎಪಿಎಂಸಿ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.