ವಿ.ಎಂ. ನಾಗಭೂಷಣ
ಸಂಡೂರು: ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಸುತ್ತಮುತ್ತಲಿನ ಗುಡ್ಡ, ಬೆಟ್ಟ, ಜಮೀನುಗಳಿಂದ ನೀರಿನ ಮೂಲಕ ಕೆರೆಗೆ ಸೇರುವ ಫಲವತ್ತಾದ ಮಣ್ಣನ್ನು ಪುನಃ ಜಮೀನಿಗೆ ಸೇರಿಸುವ ಮೂಲಕ ಹೊಲಗಳಲ್ಲಿನ ಮಣ್ಣಿನ ಸತ್ವ ಹೆಚ್ಚಿಸುವ ಪ್ರಯತ್ನವು ತಾಲೂಕಿನ ರೈತರಿಂದ ನಡೆದಿದೆ. ನರೇಗಾ ಯೋಜನೆ ಈ ಪ್ರಕ್ರಿಯೆಗೆ ಸಹಕಾರಿಯಾಗಿದೆ. ಹಿಂದಿನ ವರ್ಷ ಮಳೆ ಕೊರತೆಯಿಂದ ತಾಲೂಕಿನ ಬಹುತೇಕ ಕೆರೆ-ಕುಂಟೆಗಳು ಬರಿದಾಗಿ ಭಣಗುಡತೊಡಗಿವೆ. ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಸಲುವಾಗಿ ಆರಂಭಿಸಿರುವ ನರೇಗಾ ಯೋಜನೆಯನ್ವಯ ಈಗ ಕೆರೆಯಲ್ಲಿ ಸಂಗ್ರಹಗೊಂಡ ಹೂಳನ್ನು ತೆರವು ಮಾಡಲಾಗುತ್ತಿದೆ.ಕೆರೆಯಲ್ಲಿ ಸಂಗ್ರಹವಾಗಿ, ನರೇಗಾ ಯೋಜನೆ ಮೂಲಕ ತೆರವುಗೊಳಿಸಲಾಗುತ್ತಿರುವ ಕೆರೆಯ ಫಲವತ್ತಾದ ಮಣ್ಣನ್ನು ಇದೀಗ ರೈತರು ಟ್ರ್ಯಾಕ್ಟರ್‌ಗಳ ಮೂಲಕ ತಮ್ಮ ಹೊಲಗಳಲ್ಲಿ ಹಾಕಿಸಿಕೊಂಡು, ತಮ್ಮ ಜಮೀನಿನ ಫಲವತ್ತತೆ ಹೆಚ್ಚಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ಮಳೆಗಾಲದಲ್ಲಿ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುವುದರಿಂದ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಿ, ಗ್ರಾಮೀಣ ಜನತೆಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಮತ್ತೊಂದೆಡೆ ಕೆರೆಯಿಂದ ಹೊರ ತೆಗೆದ ಮಣ್ಣನ್ನು ರೈತರು ತಮ್ಮ ಜಮೀನುಗಳಲ್ಲಿ ಹಾಕಿಕೊಳ್ಳುವುದರಿಂದ ಜಮೀನಿನ ಫಲವತ್ತತೆ ಹೆಚ್ಚಿ, ಬೆಳೆಗಳ ಇಳುವರಿ ಹೆಚ್ಚಿಸಲು ಸಹಕಾರಿಯಾಗಲಿದೆ.
ನಿಡುಗುರ್ತಿ ಗ್ರಾಮದ ಹನುಮಂತಪ್ಪ, ಕಾಟಿನಕಂಬದ ಎ. ಮರಿಸ್ವಾಮಿ ಕನ್ನಡಪ್ರಭದೊಂದಿಗೆ ಮಾತನಾಡಿ, ಕೆರೆಯ ಮಣ್ಣು ಬಹಳ ಫಲವತ್ತಾಗಿರುತ್ತದೆ. ಬೇಸಿಗೆ ಸಂದರ್ಭದಲ್ಲಿ ಕೆರೆಯ ಮಣ್ಣನ್ನು ರೈತರು ತಮ್ಮ ಹೋಲಗಳಲ್ಲಿ ಹಾಕಿಸಿಕೊಳ್ಳುತ್ತಾರೆ. ಇದರಿಂದ ಕೃಷಿ ಇಳುವರಿ ಹೆಚ್ಚಲಿದೆ ಎನ್ನುತ್ತಾರೆ.ಮಾದರಿ ಪ್ರಯತ್ನ:
ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ಕೆರೆಗೆ ಸೇರುವ ಸುತ್ತಮುತ್ತಲಿನ ಭೂಮಿ ಮೇಲಿನ ಫಲವತ್ತಾದ ಮಣ್ಣನ್ನು ಪುನಃ ಜಮೀನಿಗೆ ಸೇರಿಸುವ ಮೂಲಕ ಅಲ್ಲಿನ ಮಣ್ಣಿನ ಫಲವತ್ತತೆ ಹೆಚ್ಚಿಸಲು ಶ್ರಮಿಸುತ್ತಿರುವ ರೈತರದ್ದು ಉತ್ತಮ ಹಾಗೂ ಮಾದರಿ ಪ್ರಯತ್ನವಾಗಿದೆ.ಕೆರೆಯ ಮಣ್ಣು ಫಲವತ್ತಾಗಿದೆ. ಇದನ್ನು ಕೃಷಿಗೆ ಬಳಸುವುದರಿಂದ ಬೆಳೆಗಳಿಗೆ ಹಲವು ರೀತಿಯ ಪೋಷಕಾಂಶಗಳು ದೊರಕಲಿವೆ. ಇಳುವರಿ ಕೂಡ ಹೆಚ್ಚಲಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ರೆಡ್ಡಿ.