ಕನ್ನಡಪ್ರಭ ವಾರ್ತೆ ಹೊನ್ನಾಳಿ
ನೀರು ಅಮೂಲ್ಯ ಸಂಪತ್ತು ಆದ್ದರಿಂದ ಮಿತವಾಗಿ ಬಳಸುವುದು ಎಲ್ಲರೂ ರೂಢಿಸಿಕೊಳ್ಳುವುದು ಪ್ರಸ್ತುತ ದಿನಗಳಲ್ಲಿ ಅತ್ಯವಶ್ಯಕ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎಸ್.ಜ್ಯೋತಿ ಹೇಳಿದರು.ಜಿಪಂ ದಾವಣಗೆರೆ, ಜೆಜೆಎಂ ಸ್ಫೂರ್ತಿ ಸಂಸ್ಥೆ, ಪುರಸಭೆ ಹೊನ್ನಾಳಿ, ಸಂಜೀವಿನಿ ಒಕ್ಕೂಟ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ನೀರು ಮತ್ತು ಪರಿಸರ ಸಂರಕ್ಷಣೆಯಲ್ಲಿ ನಾವು-ನೀವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನೀರು ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಹಿರಿದು, ದೇವರ ಮನೆಯಿಂದ ಹಿಡಿದು ಅಡುಗೆ ಮನೆ ಸೇರಿ ಇತರೆಡೆ ನೀರಿನ ನಿರ್ವಹಣೆ ಮಹಿಳೆಯರಿಂದ ಆಗುತ್ತದೆ. ನೀರನ್ನು ಮಿತ ಬಳಕೆ ಮಾಡಬೇಕು ಎಂದರು.
ಸ್ಫೂರ್ತಿ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೂಪಾನಾಯ್ಕ ಮಾತನಾಡಿ ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಈಗಾಗಲೇ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ನೀರನ್ನು ಬೇಕಾಬಿಟ್ಟಿ ಉಪಯೋಗಿಸುವುದು ತಕ್ಷಣ ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ನೀರಿಗಾಗಿ ಹೋರಾಟ ಪ್ರಾರಂಭವಾಗುವುದು ನಿಶ್ಚಿತ, ನದಿ ಪಾತ್ರದವರು ನೀರು ಪೋಲು ಮಾಡುವುದು ಬಿಟ್ಟು ಮಿತ-ಹಿತ ಬಳಕೆಗೆ ಆದ್ಯತೆ ನೀಡಬೇಕಿದೆ ಎಂದರು.ವಲಯ ಅರಣ್ಯಾಧಿಕಾರಿ ಡಿ.ಎಂ.ಷಣ್ಮುಖ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಇಂಜಿನಿಯರ್ ಸೋಮ್ಲಾನಾಯ್ಕ, ಭೋವಿ ಕ್ರಾಂತಿಕಾರಿ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಕೆ.ಬಿ.ರಾಜು, ಕೂಲಿ ಕಾರ್ಮಿಕರ ಸಂಘಟನೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಅಧ್ಯಕ್ಷೆ ನೇತ್ರಾವತಿ ಮಾತನಾಡಿದರು.
ಪಿಎಸ್‍ಐ ನಿರ್ಮಲ, ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಎ.ಕೆ.ಗುಡ್ಡದಯ್ಯ, ಸಂಜೀವಿನಿ ಒಕ್ಕೂಟ ಕೌಶಲ್ಯ ವಲಯ ಮೇಲ್ವಿಚಾರಕಿ ಆರ್.ಆಶಾ, ಸ್ಫೂರ್ತಿ ಸಂಸ್ಥೆ ನಿರ್ದೇಶಕಿ ಎಂ.ರೇಣುಕಾ, ಹಿರಿಯ ಸಹಾಯಕರಾದ ನೇತ್ರಾವತಿ, ಸುಧಾ, ಭಾರತಿ, ರೇಷ್ಮಾ, ವಿನಯಕುಮಾರ್ ಇದ್ದರು.