ವಿ. ಬಾಡಗ ಹೈಪ್ಲೈಯರ್ಸ್ ಹಾಕಿ: 5 ತಂಡ ಕ್ವಾರ್ಟರ್ ಫೈನಲ್ಸ್ ಪ್ರವೇಶ

KannadaprabhaNewsNetwork | Published : Nov 30, 2023 1:15 AM

ಸಾರಾಂಶ

ದಿನದ ಮೊದಲ ಪಂದ್ಯದಲ್ಲಿ ಕರ್ತಮಾಡ ತಂಡವು ಮನೆಯಪಂಡ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರ ರೋಷನ್ 8ನೇ ನಿಮಿಷದಲ್ಲಿ, ಅತಿಥಿ ಆಟಗಾರ ಬೆಳ್ಳಿಯಪ್ಪ 14ನೇ, 22ನೇ ಮತ್ತು 42ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಮನೆಯಪಂಡ ತಂಡದ ಪರವಾಗಿ ಅಯ್ಯಣ್ಣ 28ನೇ ಮತ್ತು 34ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗುತ್ತಿರುವ ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಹೈಪ್ಲೈಯರ್ಸ್ ಕಪ್-2023ರ 2ನೇ ದಿನದ ಪಂದ್ಯಾವಳಿಯಲ್ಲಿ ಒಟ್ಟು 5 ತಂಡಗಳು ಕ್ವಾರ್ಟರ್ ಫೈನಲ್ಸ್ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಬುಧವಾರ ಪಂದ್ಯವಾಡಿದ ಕರ್ತಮಾಡ, ಕೊಂಗಂಡ, ಗುಮ್ಮಟಿರ, ಸಣ್ಣುವಂಡ ಚೇಂದಿರ ತಂಡಗಳು ಎದುರಾಳಿ ತಂಡಗಳನ್ನು ಸೋಲಿಸಿ ಮುನ್ನಡೆ ಸಾಧಿಸಿದವು.

ದಿನದ ಮೊದಲ ಪಂದ್ಯದಲ್ಲಿ ಕರ್ತಮಾಡ ತಂಡವು ಮನೆಯಪಂಡ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರ ರೋಷನ್ 8ನೇ ನಿಮಿಷದಲ್ಲಿ, ಅತಿಥಿ ಆಟಗಾರ ಬೆಳ್ಳಿಯಪ್ಪ 14ನೇ, 22ನೇ ಮತ್ತು 42ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಮನೆಯಪಂಡ ತಂಡದ ಪರವಾಗಿ ಅಯ್ಯಣ್ಣ 28ನೇ ಮತ್ತು 34ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. 2ನೇ ಪಂದ್ಯದಲ್ಲಿ ಕೊಂಗಂಡ ತಂಡವು ಕೊಲ್ಲಿರ ತಂಡವನ್ನು1-0 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಚೆಲ್ಸಿ ಮೇದಪ್ಪ 39ನೇ ನಿಮಿಷದಲ್ಲಿ ಮಿಂಚಿನ ಗೋಲು ದಾಖಲಿಸಿ ತಂಡದ ವಿಜಯಕ್ಕೆ ನೆರವಾದರು.3ನೇ ಪಂದ್ಯದಲ್ಲಿ ಗುಮ್ಮಟ್ಟಿರ ತಂಡವು ಕೋಲತಂಡ ತಂಡವನ್ನು 2-0 ಗೋಲುಗಳಿಂದ ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಬೋಪಣ್ಣ 14ನೇ ಮತ್ತು 40ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. 4ನೇ ಪಂದ್ಯದಲ್ಲಿ ಕುಪ್ಪಂಡ ತಂಡ ಗೈರು ಹಾಜರಾದ ಕಾರಣ ಸಣ್ಣುವಂಡ ತಂಡ ವಾಕ್ ಓವರ್ ಮೂಲಕ ಮುನ್ನಡೆ ಸಾಧಿಸಿತು.

ದಿನದ ಕೊನೆಯ ಪಂದ್ಯದಲ್ಲಿ ಚೇಂದಿರ ತಂಡವು ಚೊಟ್ಟೆಪಂಡ ತಂಡವನ್ನು 4-1 ಗೋಲುಗಳಿಂದ ಮಣಿಸಿತು. ಆರಂಭದಿಂದಲೇ ಚೇಂದಿರ ತಂಡ ಸಂಘಟಿತ ಹೋರಾಟ ನಡೆಸಿದ ಈ ಪಂದ್ಯದಲ್ಲಿ ವಿಜೇತ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ ಅತಿಥಿ ಆಟಗಾರ ಮಂಜುನಾಥ್ 6ನೇ ಮತ್ತು 41ನೇ ನಿಮಿಷದಲ್ಲಿ, ತಂಡದ ಮತ್ತೋರ್ವ ಅತಿಥಿ ಆಟಗಾರ ಧನುಷ್ 35ನೇ ಮತ್ತು 49ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡವನ್ನು ವಿಜಯದ ದಡಕ್ಕೆ ಸೇರಿಸಿದರು. ಪರಾಜಿತ ತಂಡದ ಪರವಾಗಿ ಕೌಶಿಕ್ ಕಾಳಪ್ಪ 40ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.ಆಯೋಜಕರ ಮನವಿ ಮೇರೆಗೆ ಮೈದಾನಕ್ಕೆ ಪಂದ್ಯ ವೀಕ್ಷಿಸಲು ಆಗಮಿಸಿದ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಆಟಗಾರರನ್ನು ಪರಿಚಯಿಸಿಕೊಳ್ಳುವ ಮೂಲಕ ಪಂದ್ಯವೊಂದನ್ನು ಉದ್ಘಾಟಿಸಿದರು. ನಂತರ ಕೆಲ ಹೊತ್ತು ಮೈದಾನದಲ್ಲೇ ಕಳೆದ ಶಾಸಕರು ಪಂದ್ಯ ವೀಕ್ಷಿಸಿ ಗ್ರಾಮೀಣ ಪ್ರದೇಶದಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದಿನ ಕ್ವಾರ್ಟರ್ ಫೈನಲ್ಸ್ ಪಂದ್ಯಾವಳಿಗಳ ವಿವರಪೂರ್ವಾಹ್ನ 10.00ಕ್ಕೆ-ಚೇಂದಿರ ಮತ್ತು ಸಣ್ಣುವಂಡ ಪೂರ್ವಾಹ್ನ 11.30ಕ್ಕೆ-ಗುಮ್ಮಟ್ಟಿರ ಮತ್ತು ಚಂದೂರ ಅಪರಾಹ್ನ 1.30ಕ್ಕೆ-ಮೇಚಿಯಂಡ ಮತ್ತು ಕರ್ತಮಾಡ ಸಂಜೆ 3.00ಕ್ಕೆ-ಅಮ್ಮಣಿಚಂಡ ಮತ್ತು ಕೊಂಗಂಡ

Share this article