ಬೀದರ್: ವಿಶ್ವವಿದ್ಯಾಲಯದ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಶಿಕ್ಷಕರ ಸಂಖ್ಯೆ ಅತ್ಯಗತ್ಯವಾಗಿದೆ ಇಲ್ಲದಿದ್ದರೆ ಮಕ್ಕಳ ಶಿಕ್ಷಣದ ಮೇಲೆ ಬಹುದೊಡ್ಡ ಹೊಡೆತ ಬೀಳುತ್ತದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ತಿಳಿಸಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬೀದರ್ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಬೀದರ್ ಜಿಲ್ಲಾ ಪದವಿ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಶಿಕ್ಷಣದ ಉನ್ನತೀಕರಣ ಕುರಿತು ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಸರ್ಕಾರ ರಾಜ್ಯದಲ್ಲಿ ಖಾಲಿ ಇರುವ 35 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳಬೇಕೆಂದು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಅದಕ್ಕೆ ಅವರು ಒಪ್ಪಿಗೆ ಕೂಡ ಸೂಚಿಸಿದ್ದಾರೆ ಇನ್ನು ಬೀದರ್ ವಿಶ್ವವಿದ್ಯಾಲಯ ಸ್ಥಾಪನೆಯಾದ ಮಾತ್ರಕ್ಕೆ ಎಲ್ಲವೂ ಮುಗಿಯಿತು ಎಂದಲ್ಲ ಅದರ ಮುಂದೆ ದೊಡ್ಡ ದೊಡ್ಡ ಸವಾಲುಗಳಿವೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕ, ವಿವಿಧ ಪಾಠೋಪಕರಣಗಳು ಮತ್ತು ಪೀಠೋಪಕರಣಗಳ ಅವಶ್ಯಕತೆ, ವಿದ್ಯಾರ್ಥಿಗಳ ಅಧ್ಯಯನಕ್ಕೆ ಪುಸ್ತಕಗಳ ಪ್ರಕಟಣೆ, ತರ್ಜುಮೆಗೊಳಿಸುವ ಕಾರ್ಯ ಇವೆಲ್ಲವುಗಳ ಅವಶ್ಯಕತೆ ಇರುತ್ತದೆ. ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಶಿಕ್ಷಣದ ಗುಣಮಟ್ಟ ಅಧೋಗತಿಗೆ ಇಳಿಯುತ್ತದೆ ಎಂದು ಎಚ್ಚರಿಸಿದರು.
ಇಂದಿನ ಕಾಲದಲ್ಲಿ ಬೋಧನಾ ಮಟ್ಟ ಕಡಿಮೆಯಾಗಿರುವುದರಿಂದ ವಿದ್ಯಾರ್ಥಿಗಳು ಇಂಜಿನಿಯರ್ ಕೋರ್ಸ್ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಆದ್ದರಿಂದ ಸದ್ಯ ಈಗಿರುವ ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಹತ್ತು ಜನರ ಕೆಲಸ ಒಬ್ಬರೇ ಮಾಡಬೇಕಾಗಿದೆ. ಹೀಗಾದಾಗ ಮಾತ್ರ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗುತ್ತದೆ. ರಾಷ್ಟ್ರದ ಅಭಿವೃದ್ಧಿಯಾಗುತ್ತದೆ ಎಂದರು.ರಾಜ್ಯದಲ್ಲಿ 35 ಸಾವಿರ ಶಿಕ್ಷಕರ ಕೊರತೆಯಿದೆ. 3200 ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ ಮಾಡುವ ಅವಶ್ಯಕತೆ ಇದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಬೀದರ್‌ನಲ್ಲಿ ಶಿಕ್ಷಣದ ವ್ಯವಸ್ಥೆ ಚೆನ್ನಾಗಿದೆ. ಹೀಗಾಗಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪರಿಶ್ರಮ ಪಟ್ಟು ಬೀದರ್ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸಿ. ಪರಿಷತ್ತಿನ ಸಹಕಾರ ಸದಾ ಇರುತ್ತದೆ ಎಂದು ಪ್ರೊ.ಎಸ್.ಆರ್. ನಿರಂಜನ ತಿಳಿಸಿದರು.
ಬೀದರ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ, ಮಕ್ಕಳ ಶಿಕ್ಷಣ ಮಟ್ಟ ಸುಧಾರಣೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಆದರೆ ವಿವಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಆದಷ್ಟು ಬೇಗನೆ ಕಲ್ಪಿಸಿಕೊಡಿಸುವ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿಕೊಂಡರು.ಬೀದರ್ ವಿವಿಯ ಕಲಾ ನಿಕಾಯದ ಡೀನ್ ಡಾ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಜಿಲ್ಲೆಯ ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ ನಿರಂಜನ ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ನಾವು ಕೂಡ ವಿವಿಯ ಅಭಿವೃದ್ಧಿಗೆ ಸರ್ವಪ್ರಯತ್ನ ಮಾಡುತ್ತೇವೆ. ಸಹಕಾರ ನಿರಂತರ ಅಗತ್ಯ. ಪಠ್ಯಕ್ರಮ, ಪುಸ್ತಕಗಳ ಪ್ರಕಟಣೆ, ತರ್ಜುಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಬೀದರ್ ವಿವಿದ ಕುಲಸಚಿವ ಪ್ರೊ.ಪರಮೇಶ್ವರ ನಾಯಕ, ನಿವೃತ್ತ ಕುಲಪತಿಗಳಾದ ಪ್ರೊ. ಬಿ.ಜಿ.ಮೂಲಿಮನಿ, ಶರಣ ಬಸವೇಶ್ವರ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಕಲ್ಯಾಣರಾವ್ ಪಾಟೀಲ್, ಶಾಂತಕುಮಾರ ಪಾಟೀಲ್, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ನಿಜಲಿಂಗಪ್ಪ ತಗಾರೆ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಜಿಲ್ಲೆಯ ಪದವಿ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ಉಪನ್ಯಾಸಕರು, ಇದ್ದರು.ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರೆ ಎಸ್‌ಬಿ ಕುಚಬಾಳ ನಿರೂಪಿಸಿ ಮಹಾರುದ್ರ ಡಾಕುಳಗೆ ವಂದಿಸಿದರು.
ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ನಿರ್ಣಾಯಕ ಪಾತ್ರವಿದೆ: ಭವಿಷ್ಯ ರೂಪಿಸುವಲ್ಲಿ ಶಿಕ್ಷಣವೇ ನಿರ್ಣಾಯಕ ಪಾತ್ರವಹಿಸುತ್ತದೆ. ವೇಗವಾಗಿ ವಿಕಾಸಗೊಳ್ಳುತ್ತಿರುವ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಬಹುಮುಖಿ ವಿಧಾನದ ಅಗತ್ಯತೆವಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ್ ಹೇಳಿದರು. ನಗರದ ಗುರುನಾನಕ ದೇವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣದಲ್ಲಿ ಶ್ರೇಷ್ಠತೆಯ ಕುರಿತ ತಜ್ಞರ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಶೈಕ್ಷಣಿಕ ಕಠಿಣತೆ, ಕೌಶಲ್ಯ ಅಭಿವೃದ್ಧಿ, ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿ ಒಳಗೊಂಡಿರುವ ಶ್ರೇಷ್ಠತೆ ಸಮಗ್ರ ವ್ಯಾಖ್ಯಾನಕ್ಕಾಗಿ ಪ್ರತಿಪಾದಿಸಿದರು. ಕಲಿಕೆಯು ಹೆಚ್ಚು ಪರಿಣಾಮಕಾರಿಯಾಗಿರಲು ಮತ್ತು ಹೆಚ್ಚು ವಿಶಾಲವಾಗಿರಲು, ವಿದ್ಯಾರ್ಥಿಗಳು ಸ್ವಂತವಾಗಿ ಶ್ರಮಿಸಬೇಕು ಮತ್ತು ಪರಿಣಾಮಕಾರಿ ಪರಿಹಾರಗಳೊಂದಿಗೆ ಮುಂದೆ ಸಾಗಬೇಕು. ನವೀನ ಬೋಧನಾ ವಿಧಾನಗಳನ್ನು ಅಳವಿಡಿಸಕೊಳ್ಳಬೇಕು. ಅತ್ಯಾಧುನಿಕ ತಂತ್ರಜ್ಞಾನದ ಜೊತೆ ಮುಂದೆ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತಕ ಬದಲಾವಣೆ ಸಾಧಿಸಲು ಸರ್ಕಾರಿ ಸಂಸ್ಥೆಗಳು ಹಾಗೂ ಸಾವಿರಾರು ವಿಶ್ವವಿದ್ಯಾಲಯಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಮಾತ್ರ ಕೇವಲ ಕೆಲವು ವಿಶ್ವವಿದ್ಯಾಲಯಗಳು ಉನ್ನತ ದರ್ಜೆಯಲ್ಲಿ ಗುರುತಿಸಿಕೊಂಡಿವೆ ಇದನ್ನು ಸುಧಾರಣೆ ಮತ್ತು ಗುರುತಿಸುವಿಕೆಯ ಅವಕಾಶವೆಂದು ಪರಿಗಣಿಸಿ ನಾವು ಸ್ಪರ್ಧಿಸಬೇಕು ಎಂದರು.ಈ ಸಂದರ್ಭದಲ್ಲಿ ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಸಿ ವೀರಣ್ಣ, ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿಎಸ್ ಬಿರಾದಾರ, ಕಲಬುರಗಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ. ಬಿ.ಜಿ ಮೂಲಿಮನಿ, ಬೀದರ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ. ಪರಮೇಶ್ವರ ನಾಯಕ್ ಟಿ., ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ, ನಾನಕ ಝಿರಾ ಸಾಹೇಬ್ ಫೌಂಡೆಷನ್ ಅಧ್ಯಕ್ಷ ಡಾ.ಬಲಬೀರಸಿಂಗ್, ಗುರು ನಾನಕ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ, ಐಎಸ್‌ಬಿಆರ್‌ನ ನಿರ್ದೇಶಕರಾದ ಡಾ. ಸಿ. ಮನೋಹರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಧನಂಜಯ ಎಂ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.