ಬಳ್ಳಾರಿ: ಜಿಲ್ಲೆಯಲ್ಲಿ ಮಾ. 3ರಂದು ಜರುಗುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಜಿಲ್ಲೆಯಲ್ಲಿ ನೂರರಷ್ಟು ಗುರಿ ಸಾಧಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಸೂಚಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಿಲ್ಲಾ ಸಮನ್ವಯ ಸಮಿತಿ ಎರಡನೇ ಸಭೆ, ಜಿಲ್ಲಾ ಆರೋಗ್ಯ ಸಂಘದ ಸಭೆ ಮತ್ತು ಇತರೆ ಕಾರ್ಯಕ್ರಮಗಳ ಅನುಷ್ಠಾನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈಗಾಗಲೇ ನಿಗದಿಪಡಿಸಿರುವಂತೆ 1,97,103 ಮಕ್ಕಳಿಗೆ ಲಸಿಕೆ ಹಾಕುವ ಯೋಜನೆ ರೂಪಿಸಿದ್ದು, ಸಿದ್ಧತೆಯಂತೆ ಮೊದಲ ದಿನವೇ ಶೇ. 100ರಷ್ಟು ಗುರಿ ತಲುಪಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಮೈಕಿಂಗ್, ಗ್ರಾಮಗಳಲ್ಲಿ ಡಂಗೂರ ಹಾಕಿಸುವುದು, ಶಾಲಾ ಮಕ್ಕಳಿಂದ ಜಾಥಾ ಮೂಲಕ ಜನತೆಗೆ ಹೆಚ್ಚು ಮಾಹಿತಿ ಒದಗಿಸುವ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ. ರಮೇಶ್‍ಬಾಬು ಮಾತನಾಡಿ, ಮಾ. 3ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನದಂದು ಜಿಲ್ಲೆಯಾದ್ಯಂತ 968 ಬೂತ್‍ಗಳು, 887 ಮನೆ ಭೇಟಿ ತಂಡಗಳು, 17 ಸಂಚಾರಿ ತಂಡಗಳನ್ನು ರಚಿಸಿದ್ದು, ಒಟ್ಟು 1970 ಜನ ಲಸಿಕೆ ಹಾಕುವ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 185 ಜನ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ದಿನ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಜನಪ್ರತಿನಿಧಿಗಳನ್ನು ಆಹ್ವಾನಿಸಿ ಎಲ್ಲ ತಾಲೂಕು, ಪಂಚಾಯತ್ ಮಟ್ಟದಲ್ಲಿ ಚಾಲನೆ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಕುರಿತು ಹಾಗೂ ಆಶಾ ಕಾರ್ಯಕರ್ತೆಯರ ಕುಂದುಕೊರತೆ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಆರ್. ಅನಿಲ್‍ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ. ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ, ಜಿಲ್ಲಾ ಆಸ್ಪತ್ರೆಯ ಡಾ. ಗುರುನಾಥ ಬಿ. ಚವ್ಹಾಣ್,ವಿಮ್ಸ್ ತಜ್ಞರಾದ ಡಾ. ಅನಂತ ಆಚಾರ್ ಉಪಸ್ಥಿತರಿದ್ದರು.