ಕನ್ನಡಪ್ರಭ ವಾರ್ತೆ ಕೆಜಿಎಫ್
ಪೋಲಿಯೋ ಸೋಂಕು ತಗುಲಿದರೆ ಪಾರ್ಶ್ವವಾಯು, ಅಂಗವಿಕಲತೆಯೊಂದಿಗೆ ಕೆಲವೊಮ್ಮೆ ಸಾವು ಸಂಭವಿಸುವ ಸಾಧ್ಯತೆಯಿರುತ್ತದೆ, ಅಲ್ಲದೇ ಪೋಲಿಯೋ ಪೀಡಿತ ಮಗು ಇತರರಂತೆ ಸಾಮಾನ್ಯವಾಗಿ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಮಾರಕ ರೋಗವನ್ನು ತಡೆಗಟ್ಟಬೇಕಾಗಿರುವುದರಿಂದ ಇದರ ವಿರುದ್ಧ ಹೋರಾಡಲು ಸರ್ಕಾರದೊಂದಿಗೆ ಪೋಷಕರು ಕೈ ಜೋಡಿಸಬೇಕು ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು.ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕಾ ಅಭಿಯಾನಕ್ಕೆ ಮಗುವೊಂದಕ್ಕೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಪೋಲಿಯೋ ಎರಡು ಹನಿಗಳು ಮಕ್ಕಳ ಜೀವ ಸಂಜೀವಿನಿಯಾಗಿರುವುದರಿಂದ ೫ ವರ್ಷದೊಳಗಿನ ಮಕ್ಕಳಿಗೆ ಪೋಷಕರು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕೆಂದು ಕರೆ ನೀಡಿದರು.
೩೦೩೨೦ ಮಕ್ಕಳ ಪಟ್ಟಿಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುರೇಶ್‌ಕುಮಾರ್ ಮಾತನಾಡಿ, ಕೆಜಿಎಫ್ ತಾಲೂಕಿನಾದ್ಯಂತ ೫ ವರ್ಷದೊಳಗಿನ ಒಟ್ಟು ೩೦೩೨೦ ಮಕ್ಕಳನ್ನು ಪಟ್ಟಿ ಮಾಡಲಾಗಿದ್ದು, ಯಾರೊಬ್ಬರೂ ಸಹ ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಅಗತ್ಯವಾದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆಯಿಂದ ಎಲ್ಲೆಡೆ ಸಿಬ್ಬಂದಿ ನಿಯೋಜನೆಗೊಳಿಸಲಾಗಿದೆ.
೫ ವರ್ಷದೊಳಗಿನ ಯಾವೊಂದು ಮಗುವೂ ಪೋಲಿಯೋ ಲಸಿಕೆಯಿಂದ ತಪ್ಪಿಸಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ತಂಗುದಾಣಗಳು, ಉದ್ಯಾನವನಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ೧೫ ರಿಂದ ೧೭ ಮೊಬೈಲ್ ಪೋಲಿಯೋ ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, ನಗರ ಪ್ರದೇಶದಲ್ಲಿ ೪ ದಿನಗಳು, ಗ್ರಾಮಾಂತರ ಪ್ರದೇಶಗಳಲ್ಲಿ ೩ ದಿನಗಳ ಕಾಲ ಪೋಲಿಯೋ ಲಸಿಕಾ ಅಭಿಯಾನ ನಡೆಯಲಿದೆ ಎಂದರು. ಟಿಹೆಚ್‌ಒ ಡಾ. ಪದ್ಮಾವತಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ರವಿಕುಮಾರ್, ಡಾ.ಸುಧಾರಾಣಿ, ಡಾ.ರಾಜೇಶ್ವರಿ ಇದ್ದರು.