ಬಳ್ಳಾರಿ: ಮಕ್ಕಳ ಅಂಗವೈಕಲ್ಯತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಎಂದು ಮೇಯರ್ ಬಿ. ಶ್ವೇತಾ ಮನವಿ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಜಿಲ್ಲಾ ಮಟ್ಟದ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹುಟ್ಟಿನಿಂದ 5 ವರ್ಷದ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದು ಬಹುಮುಖ್ಯ. ಕಡ್ಡಾಯವಾಗಿ ಪೋಷಕರು ಮಾ. 3ರಿಂದ ಮೂರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಹನಿ ಹಾಕಿಸಬೇಕೆಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ(ತಾಯಿ ಆರೋಗ್ಯ) ಉಪ ನಿರ್ದೇಶಕ ಹಾಗೂ ಜಿಲ್ಲಾ ನೋಡಲ್ ಆಧಿಕಾರಿ ಡಾ. ರಾಜಕುಮಾರ ಮಾತನಾಡಿ, ಪೋಲಿಯೋ ನಿರ್ಮೂಲನೆ ಮಾಡಲು ಲಸಿಕೆ ಅತ್ಯಗತ್ಯವಾಗಿದ್ದು, 5 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.ಲಸಿಕೆ ಕುರಿತು ಜಾಗೃತಿ ಮೂಡಿಸಬೇಕು. ಆ ಮೂಲಕ ಪೋಲಿಯೋ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೈ. ರಮೇಶ್ ಬಾಬು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 197103 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಒಟ್ಟು 968 ಬೂತ್‍ಗಳನ್ನು ತೆರೆಯಲಾಗಿದೆ. 887 ಮನೆ ಬೇಟಿ ತಂಡಗಳು ಹಾಗೂ ಸಂತೆ, ಮಾರುಕಟ್ಟೆ, ಬಸ್ ನಿಲ್ದಾಣ, ಮತ್ತು ಇತರೆ ಜನ ಹೆಚ್ಚು ಸೇರುವ ಸ್ಥಳಗಳಲ್ಲಿ ಲಸಿಕೆ ಹಾಕಲು 51 ತಂಡಗಳು ಮತ್ತು ವಲಸೆ ಪ್ರದೇಶಗಳಾದ ಇಟ್ಟಿಗೆ ಭಟ್ಟಿ, ಕಟ್ಟಡ ಕಾಮಗಾರಿ ಪ್ರದೇಶ, ಕಬ್ಬು ಕಡಿಯುವ ಸ್ಥಳ, ಕುರಿಹಟ್ಟಿ ಮುಂತಾದ ಸ್ಥಳಗಳಲ್ಲಿ ಲಸಿಕೆ ಹಾಕಲು 17 ಸಂಚಾರಿ ತಂಡಗಳು ಕಾರ್ಯನಿರ್ವಹಿಸುತ್ತವೆ.ತಂಡಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನರ್ಸಿಂಗ್ ಕಾಲೇಜು ಹಾಗೂ ಸ್ವಯಂ ಸೇವಕರು ಪೋಲಿಯೋ ವ್ಯಾಕ್ಸಿನೇಟರ್ ಆಗಿ ಕೆಲಸ ಮಾಡಲಿದ್ದಾರೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸರೆಡ್ಡಿ, ಜಿಲ್ಲಾ ರೋಗವಾಹಕ ನಿಯಂತ್ರಣಧಿಕಾರಿ ಡಾ. ಅಬ್ದುಲ್ಲಾ, ಸ್ಥಾನಿಕ ವೈದ್ಯಾಧಿಕಾರಿ ಡಾ. ವೀರೇಂದ್ರ ಕುಮಾರ್, ಉಪಮುಖ್ಯ ವೈದ್ಯಾಧಿಕಾರಿ ಡಾ. ಗುರುನಾಥ ಬಿ. ಚೌವ್ಹಾಣ, ಶುಶ್ರೂಷಕ ಅಧೀಕ್ಷಕರಾದ ವಿಮಲಾಕ್ಷಿ, ಆಡಳಿತ ಅಧಿಕಾರಿ ಗುಮಸ್ತಾ ದೇಸಾಯಿ, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಎಚ್. ದಾಸಪ್ಪನವರ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.