ಚರ್ಮಗಂಟು ರೋಗಕ್ಕೆ ಲಸಿಕೆ ಅಭಿಯಾನ

KannadaprabhaNewsNetwork | Published : Jun 27, 2024 1:14 AM

ಸಾರಾಂಶ

ಮೇವು, ನೀರು ಕುಡಿಯದೇ 6 ಸಾವಿರಕ್ಕೂ ಹೆಚ್ಚು ಜಾನುವಾರು ಮೃತಪಟ್ಟಿದ್ದವು.

ಮಂಜುನಾಥ ಕೆ.ಎಂ.

ಬಳ್ಳಾರಿ: ಜಾನುವಾರನ್ನು ಚರ್ಮಗಂಟು ರೋಗದಿಂದ (ಲಂಪಿಸ್ಕಿನ್ ಡಿಸೀಸ್) ಪಾರು ಮಾಡಲು ಪಶುಪಾಲನಾ- ಪಶುವೈದ್ಯಕೀಯ ಸೇವಾ ಇಲಾಖೆ ಲಸಿಕಾ ಅಭಿಯಾನ ಆರಂಭಿಸಿದೆ.

ಈ ಹಿಂದೆ ಚರ್ಮಗಂಟು ರೋಗದಿಂದ ದೊಡ್ಡ ಸಂಖ್ಯೆಯಲ್ಲಿ ಜಾನುವಾರು ಅಸು ನೀಗಿದ್ದವು. ಮುಂಜಾಗ್ರತಾ ಕ್ರಮವಾಗಿ ಇಲಾಖೆ ಈ ವರ್ಷ ಲಸಿಕೆ ನೀಡಿಕೆಗೆ ಮುಂದಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 1.6 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ಇದೆ. ಒಂದು ಜಾನುವಾರಿಗೆ 1 ಎಂಎಲ್‌ನಂತೆ ಲಸಿಕೆ ನೀಡಲಾಗುತ್ತಿದೆ. ನಿರ್ದಿಷ್ಟ ಗುರಿಗೆ ತಕ್ಕಷ್ಟು ಲಸಿಕೆ ಪೂರೈಕೆಯಾಗಿದೆ. ಎಮ್ಮೆ ಹೊರತುಪಡಿಸಿ ಉಳಿದ ಜಾನುವಾರಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲ ಪಶು ಆಸ್ಪತ್ರೆಗಳು, ಪಶು ಚಿಕಿತ್ಸಾಲಯಗಳಿಗೆ ಈಗಾಗಲೇ ಲಸಿಕೆ ಪೂರೈಸಲಾಗಿದೆ. ಪಶುಪಾಲಕರು ಸಹ ಸ್ಪಂದಿಸುತ್ತಿದ್ದು, ರಾಸುಗಳಿಗೆ ಲಸಿಕೆ ನೀಡುವ ಕಾರ್ಯ ಚುರುಕಾಗಿ ನಡೆದಿದೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.

ಚರ್ಮಗಂಟು ರೋಗ ಬರೋದು ಹೇಗೆ?:

ಜಾನುವಾರು ನೆಲೆಸಿದ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡದಿರುವುದು, ಸೊಳ್ಳೆ ನಿಯಂತ್ರಿಸದಿರುವುದು ಚರ್ಮಗಂಟು ರೋಗ ಬರಲು ಪ್ರಮುಖ ಕಾರಣ ಎನ್ನುತ್ತಾರೆ ಪಶುವೈದ್ಯರು. ಸೊಳ್ಳೆ ಕಚ್ಚಿ ಜಾನುವಾರು ಚರ್ಮದ ಮೇಲೆ ಗಂಟಿನ ತರಹ ಗುಳ್ಳೆ ಕಾಣಿಸಿಕೊಳ್ಳುತ್ತವೆ. ಆನಂತರ ಮೈಯೆಲ್ಲ ಆವರಿಸಿಕೊಳ್ಳುತ್ತವೆ. ಗಂಟು ಒಡೆದು ಕೀವು ಸೋರುತ್ತದೆ. ನೊಣ, ಸೊಳ್ಳೆ ಮೂಲಕ ಅಕ್ಕಪಕ್ಕದ ಜಾನುವಾರಿಗೆ ಗಂಟುರೋಗ ಹರಡುತ್ತದೆ. ತಕ್ಷಣ ಚಿಕಿತ್ಸೆ ನೀಡಿದಲ್ಲಿ ದನ-ಕರು ಗುಣಮುಖವಾಗುತ್ತವೆ. ನಿರ್ಲಕ್ಷಿಸಿದರೆ ಮೃತಪಡುವ ಸಾಧ್ಯತೆ ಹೆಚ್ಚು.

ರೋಗಪೀಡಿತ ಜಾನುವಾರು ಬಾಯಿ, ಮೂಗಿನಿಂದ ಸುರಿಯುವ ಲೋಳೆಯಂತಹ ದ್ರವ ಬಿದ್ದ ಸ್ಥಳದಲ್ಲಿ ಬೇರೆ ರಾಸುಗಳು ಆಹಾರ ಸೇವಿಸಿದರೂ ಈ ರೋಗ ಹರಡುವ ಸಾಧ್ಯತೆ ಇದೆ ಎನ್ನುತ್ತಾರೆ ಪಶುವೈದ್ಯರು.

2022ರಲ್ಲಿ 6836 ಜಾನುವಾರು ಸಾವು:

ಚರ್ಮಗಂಟು ರೋಗದಿಂದ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 2022ರಲ್ಲಿ 6836 ಜಾನುವಾರು ಅಸು ನೀಗಿವೆ. ಈ ಪೈಕಿ ಹಡಗಲಿ, ಹರಪನಹಳ್ಳಿ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ಜಾನುವಾರು ರೋಗಕ್ಕೆ ತುತ್ತಾಗಿದ್ದವು. ಈ ರೋಗದಿಂದ ಮೂಕಪ್ರಾಣಿಗಳ ರೋದನ ಕರಳು ಹಿಂಡುವಂತಿತ್ತು. ಇದರಿಂದ ಪಶುಪಾಲಕರು ಕಂಗಾಲಾಗಿದ್ದರು. ಇದರಿಂದ ಹಾಲು ಉತ್ಪಾದನೆ ಕುಸಿತವಾಗಿತ್ತು. ಮೇವು, ನೀರು ಕುಡಿಯದೇ 6 ಸಾವಿರಕ್ಕೂ ಹೆಚ್ಚು ಜಾನುವಾರು ಮೃತಪಟ್ಟಿದ್ದವು.

ಮನುಷ್ಯರಿಗೆ ಹರಡುವುದಿಲ್ಲ: ಚರ್ಮಗಂಟು ರೋಗ ಮನುಷ್ಯರಿಗೆ ಹರಡುವುದಿಲ್ಲ. ಭಯಪಡಬೇಕಾದ ಅಗತ್ಯವಿಲ್ಲ ಎಂದು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಎಂ.ಸಿ. ವಿನೋದಕುಮಾರ್ ತಿಳಿಸಿದರು.

ಸಹಜವಾಗಿ ರೈತರು ಜಾನುವಾರು ಜೊತೆ ಇರುತ್ತಾರೆ. ಹಾಗಂತ ಚರ್ಮಗಂಟು ರೋಗ ಮನುಷ್ಯರಿಗೆ ಹರಡುವುದಿಲ್ಲ. ರೈತರು ಆದಷ್ಟು ಜಾನುವಾರು ಇರುವ ಕಡೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾ ವಹಿಸಬೇಕು. ಇದರಿಂದ ರೋಗಬಾಧೆಯಿಂದ ಜಾನುವಾರು ರಕ್ಷಿಸಬಹುದು ಎಂದು ಹೇಳಿದರು.

ಲಸಿಕೆ ಅಭಿಯಾನ ಆರಂಭಿಸಿದ್ದೇವೆ. ರೈತರು ಲಸಿಕೆ ಹಾಕಿಸುವ ಮೂಲಕ ಚರ್ಮಗಂಟು ರೋಗದಿಂದ ಜಾನುವಾರು ರಕ್ಷಿಸಿಕೊಳ್ಳಬೇಕು. ಜಾನುವಾರಿಗೆ ಕಾಯಿಲೆಯ ಮುನ್ಸೂಚನೆ ಕಂಡು ಬರುತ್ತಿದ್ದಂತೆಯೇ ಹತ್ತಿರದ ಪಶು ಆಸ್ಪತ್ರೆಗೆ ಭೇಟಿ ನೀಡಬೇಕು ಎನ್ನುತ್ತಾರೆ ಪಶುಪಾಲನಾ- ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಎಂ.ಸಿ. ವಿನೋದಕುಮಾರ್.

Share this article