ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರಿನ ಇತಿಹಾಸದಲ್ಲಿ ವಚನ ಸಾಹಿತ್ಯ ಪರಂಪರೆ ಬಹಳ ಅದ್ಭುತವಾಗಿದೆ. ಸುಮಾರು 10 ವರ್ಷದವರಿಂದ 80 ವರ್ಷದವರೆಗೂ ಸ್ಪರ್ಧೆಗೆ ತುಂಬಾ ಉತ್ಸಾಹದಿಂದ ಭಾಗವಹಿಸಿದ್ದಾರೆ. ಈ ಸ್ನೇಹ ಕ್ರೀಡಾ ಮತ್ತು ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಲ್ಲರಿಗೂ ಅವಕಾಶ ಕಲ್ಪಿಸಿದೆ. ಉತ್ಸಾಹದಿಂದ ವಚನ ಹಾಡಿದಂತಹ ಎಲ್ಲರಿಗೂ ಗೌರವ ಕೊಡಲೇಬೇಕು. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಅದಲ್ಲದೇ ವಚನ ಸಾಹಿತ್ಯಕ್ಕೆ ತನ್ನದೇಯಾದ ಶಕ್ತಿ ಇದೆ ಎಂದು ಕಲಾಶ್ರೀ ಡಾ. ಲಕ್ಷ್ಮಣದಾಸ್ ಆಶಯ ನುಡಿಗಳನ್ನಾಡಿದರು.ಬಿ.ಸಿ.ಶೈಲಾ ನಾಗರಾಜ್ ಮಾತನಾಡಿ, ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವೇಶ್ವರರು, ಅಕ್ಕಮಹಾದೇವಿ, ಸಿದ್ಧರಾಮೇಶ್ವರರು ಇನ್ನೂ ಮುಂತಾದ ಸಾಹಿತ್ಯ ರಚಿಸಿದಂತಹ ವಚನಕಾರರನ್ನು ಹೇಳದೇ ಮುಂದಕ್ಕೆ ಹೋಗುವ ಹಾಗಿಲ್ಲ ಎಂದರು.
ವಚನ ಸಾಹಿತ್ಯದಲ್ಲಿ ಕಾಯಕ, ದಾಸೋಹ ಮುಖ್ಯವಾದದ್ದು. ನೀಲಾಂಬಕೆ ಪುಸ್ತಕವನ್ನು ತುಮಕೂರು ವಿಶ್ವವಿದ್ಯಾಲಯ ಪಠ್ಯವಾಗಿ ತೆಗೆದುಕೊಂಡಿದೆ. ಕಾಯಕದ ನಿರಂತರತೆಯು ಉಮಾದೇವಿ .ಪಿ ಅವರ ಕೆಲಸದಲ್ಲಿದೆ. ಹೊಸದೇನೋ ಕೊಡಬೇಕು ಅನ್ನುವ ತುಡಿತವಿದೆ. ಸಂಘರ್ಷವನ್ನು ಎದುರಿಸಿ ಸಂಘಟನೆ ಬದುಕನ್ನು ಕಟ್ಟಿಕೊಂಡಂತಹ ವಚನ ಸಾಹಿತ್ಯದ ತತ್ವಗಳನ್ನು ಅರ್ಥಮಾಡಿಕೊಂಡ ಜನರಿದ್ದಾರೆ ಎಂದರು.ಡಾ.ಬಿ. ನಂಜುಂಡಸ್ವಾಮಿ ಮಾತನಾಡಿ, 1900ರರವರೆಗೂ ಸ್ವರ ವಚನಕಾರರು ವಚನಗಳನ್ನು ರಚಿಸಿದ್ದಾರೆ. ಉಳುವಿ, ಗುಬ್ಬಿ, ಸಿದ್ಧಗಂಗೆಯ ಕಲ್ಯಾಣ ಕ್ರಾಂತಿ ನಂತರ ಚದುರಿ ಹೋಗಿದ್ದಾರೆ. ಗುಬ್ಬಿ ಮಲ್ಲಣ್ಣ ಹಾಗೂ ಅವರ ಮೊಮ್ಮಗ ಶಾಂತೇಶ ಅವರೆಲ್ಲ ವಚನ ಸಂಕಲನ ಮಾಡಿದ್ದಾರೆ. ಪಟ್ಟದಮಠ, ಸನ್ಯಾಸಮಠ, ಸಂಸಾರ ಮಠಗಳೂ ಕೂಡ ತುಮಕೂರಿನ ಸುತ್ತಮುತ್ತ ಕಾಣಿಸುತ್ತವೆ. 1960 ರಲ್ಲಿಯೂ ಕೂಡ ವಚನ ಸಾಹಿತ್ಯ ರಚನೆ ಆಗಿದೆ. ಶೂನ್ಯ ಸಂಪಾದನೆ ಬಗ್ಗೆ ಅನೇಕ ಲೇಖನಗಳು, ಪುಸ್ತಕಗಳು ಬಂದಿವೆ. ಚಿನ್ನದ ಹಲಗೆ ಮೇಲೆ ಬರೆದಂತಹ ವಚನ ಸಾಹಿತ್ಯವನ್ನು ಶಿವಯೋಗ ಮಂದಿರದಲ್ಲಿ ಕಾಣಬಹುದು ಎಂದರು.
ಸುಶೀಲ ಸದಾಶಿವಯ್ಯ ಮಾತನಾಡಿ, ವಚನ ಸಾಹಿತ್ಯ ಸಂತೋಷವನ್ನು ಕೊಡುತ್ತದೆ. ವಚನ ಗಾಯನದ ಮೂಲಕ ಮತ್ತಷ್ಟು ಸಮಾಜದ ಜವಾಬ್ದಾರಿ ಹಾಗೂ ಸಮಾಜವನ್ನು ಎಚ್ಚರಿಸುವಂತಹ ಕೆಲಸವನ್ನು ಈ ಸಂಸ್ಥೆ ಮಾಡಿದೆ. ವಚನ ಸಾಹಿತ್ಯದ ವಿಚಾರಗಳನ್ನು ಜನರು ರೂಢಿಸಿಕೊಳ್ಳಬೇಕು ಎಂದರು.ಮುದ್ದೇನಹಳ್ಳಿ ನಂಜಯ್ಯ ಮಾತನಾಡಿ, ಹಂಸ ಪಕ್ಷಿ ಹಾಲನ್ನು ಕುಡಿದು ನೀರನ್ನು ಬಿಡುತ್ತದೆ. ಹಾಗೆಯೇ ಒಳ್ಳೆಯ ವಿಚಾರವನ್ನು ಸ್ವೀಕರಿಸಬೇಕು, ಕೆಟ್ಟ ವಿಚಾರವನ್ನು ಬಿಡಬೇಕು. ವಚನ ಗಾಯನದ ಮೂಲಕ ಅತ್ಯದ್ಭುತ ಸುಧೆಯನ್ನು ಈ ಸಂಸ್ಥೆಯವರು ಉಣಬಡಿಸಿದ್ದಾರೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಶ್ರಮ ಸಂಸ್ಕೃತಿಯಲ್ಲಿ ಪ್ರತೀಕವಾಗಿರುವಂತಹ ಕಾರ್ಯವನ್ನು ವಚನಕಾರರು ಮಾಡಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಸ್ನೇಹ ಸಂಸ್ಥೆಯು ಸಮಾಜದಲ್ಲಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ಗೌರವಿಸುತ್ತಿದೆ. ವಚನ ಗಾಯನ ಸ್ಪರ್ಧೆ ನನಗೆ ಅತ್ಯಂತ ಸಂತೋಷವನ್ನು ಉಂಟು ಮಾಡಿದೆ ಎಂದರು.ಬಾ.ಹ. ರಮಾಕುಮಾರಿ ಮಾತನಾಡಿದರು.
ಸುಮಾರು ೨೦ ಸ್ಪರ್ಧಿಗಳು ವಚನ ಗಾಯನವನ್ನು ಮಾಡಿದರು. ಅಕ್ಕಮಹಾದೇವಿ ಸ್ವರವಚನ ಗಾಯನ ಮಾಡಿದಂತಹ ಕಮಲಮ್ಮನವರಿಗೆ ಮೊದಲನೇ ಬಹುಮಾನ, ಎರಡನೇ ಬಹುಮಾನ ಸೌಮ್ಯ, ಮೂರನೇ ಬಹುಮಾನ ಶಿವಶ್ರೇಷ್ಠರವರು ಪಡೆದರು. ಭಾಗವಹಿಸಿದವರಿಗೆ ಸರ್ಟಿಫಿಕೇಟ್ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.ಬಿ.ಸಿ. ಶ್ವೇತಾ ನಿರೂಪಿಸಿದರು. ಅಬ್ಬಿನಹೊಳೆ ಸುರೇಶ್ ಸ್ವಾಗತಿಸಿದರು. ಬೆಳ್ಳಾವಿ ಶಿವಕುಮಾರ ವಂದಿಸಿದರು. ಹೆಬ್ಬಾಕ ಸತೀಶ್, ಉಮಾದೇವಿ .ಪಿ. ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.