ಕನ್ನಡಪ್ರಭ ವಾರ್ತೆ ಮೈಸೂರು
ಬಸವ ಧರ್ಮ, ಶರಣ ಧರ್ಮವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಮತೀಯ ಚಿಂತನೆಗಳಿಂದ ಹೊರ ಬರಲು ಸಾಧ್ಯ ಎಂದು ಸಾಹಿತಿ ಡಾ. ಅರವಿಂದ ಮಾಲಗತ್ತಿ ತಿಳಿಸಿದರು.ನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ವಿಭಾಗ, ಐಕ್ಯೂಎಸಿ ಹಾಗೂ ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ವಚನ ಸಾಹಿತ್ಯ ವರ್ತಮಾನದ ಸ್ಪಂದನೆ ಕುರಿತು ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣ ಅವರು 12ನೇ ಶತಮಾನದಲ್ಲಿ ಆಲೋಚನೆ ಮಾಡಿರುವಂತಹ ವಿಷಯಗಳನ್ನು 21ನೇ ಶತಮಾನದಲ್ಲೂ ಸಕಾರಗೊಳಿಸಲು ಆಗದೆ ಇರುವ ಬೌದ್ಧಿಕ ದಾರಿದ್ರ್ಯದಲ್ಲಿ ನಾವುಗಳಿದ್ದೇವೆ. ಹೀಗಾಗಿ, ಬಸವಣ್ಣ ಅವರ ಚಿಂತನೆಗಳು ವರ್ತಮಾನದ ಜೊತೆಗೆ ಸಾರ್ವಕಾಲಿಕಾವಾಗಿಯೂ ಹತ್ತಿರವಾಗಿದೆ. ಗಾಂಧೀಜಿ ಅವರು ಸಹ ಬಸವಣ್ಣನವರ ಆಲೋಚನ ಕ್ರಮಗಳನ್ನು ಆವಳವಡಿಸಿಕೊಂಡಿದ್ದರು ಎಂದು ಅವರು ಹೇಳಿದರು.ವರ್ತಮಾನದ ಸಂಘರ್ಷಗಳು ಆರೋಗ್ಯಕರವಾಗರಿಬೇಕೆ ಹೊರತು ನಕರಾತ್ಮಕ ದೃಷ್ಟಿಯಿಂದ ನೋಡುವುದು ಸರಿಯಲ್ಲ. ವರ್ತಮಾನದ ವಿಷಯಗಳನ್ನೂ ಅವುಗಳ ಜ್ಞಾನದ ಬಗ್ಗೆ ಎಚ್ಚರದಿಂದಾಗ ಮಾತ್ರ ನಾವು ಸಾಹಿತ್ಯದ ಹೇಗೆ ಗ್ರಹಿಸಬೇಕು ಹಾಗೂ ವ್ಯಾಖ್ಯಾನಿಸಬೇಕೆಂದು ತಿಳಿಯುತ್ತದೆ. ಈ ಕಾರಣದಿಂದಲೇ ನಾವು ವಚನ ಸಾಹಿತ್ಯ ಮತ್ತು ಪರಂಪರೆಯೊಟ್ಟಿಗೆ ಇದ್ದಂತಹ ಸಂಬಂಧ ಜೊತೆಯಲ್ಲಿ ನಡೆದುಕೊಂಡು ಬಂದಿದೆ ಎಂದರು.
ಬಸವಣ್ಣ ಅವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. ಯಾವ ನಾಯಕರ ಆಲೋಚನ ಕ್ರಮಗಳು ವರ್ತಮಾನಕ್ಕೆ ಬೇಕಾಗಿವೆಯೋ ಹಾಗೂ ಅಗತ್ಯವಾಗಿಯೋ ಅಂತಹ ನಾಯಕರನ್ನು ಸಾಮಾನ್ಯವಾಗಿ ಎವರ್ ಗ್ರಿನ್ ಎಂದು ಹೇಳುತ್ತಾರೆ. ಸದಾಕಾಲ ನಿತ್ಯ ನೂತನವಾಗಿರುವಂತಹ ನಾಯಕ ಯಾರಾದರೂ ಕರ್ನಾಟದಲ್ಲಿದ್ದರೆ ಅದು ಬಸವಣ್ಣ ಮಾತ್ರ. ಅವರ ಚಿಂತನೆಗಳು ಸಾರ್ವಕಾಲಿವಾದದ್ದು ಎಂದು ಅವರು ಹೇಳಿದರು.ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್. ಭಾರತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವಿನೋದಾ, ಐಕ್ಯೂಎಸಿ ಸಂಯೋಜಕಿ ಕೆ.ಎಸ್. ಸುಕೃತಾ, ಶರಣ ಸಾಹಿತ್ಯ ಪರಿಷತ್ತು ನಗರಾಧ್ಯಕ್ಷ ಮ.ಗು. ಸದಾನಂದಯ್ಯ ಇದ್ದರು. ರಕ್ಷಿತಾ ನಿರೂಪಿಸಿದರು.
----ಕೋಟ್...
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಕೂಡಲೇ ಅವರು ನಮಗೆ ಸಾಂಸ್ಕೃತಿಕ ನಾಯಕರು ಆಗುವುದಿಲ್ಲ. ಅವರ ತತ್ವಗಳನ್ನು ನಮ್ಮ ಬದುಕಿನಲ್ಲಿ ರೂಢಿಸಿಕೊಂಡಾಗ ಮಾತ್ರ ಸಾಂಸ್ಕೃತಿಕ ನಾಯಕನಿಗೆ ಕೊಡುವ ಗೌರವ ಹಾಗೂ ಮನ್ನಣೆ ಕೊಟ್ಟಂತಾಗುತ್ತದೆ.- ಪ್ರೊ. ಅರವಿಂದ ಮಾಲಗತ್ತಿ, ಸಾಹಿತಿ