ತುಂಗಭದ್ರಾ ಆರತಿ ಪರಿಕಲ್ಪನೆ ಸಾಕಾರಕ್ಕೆ ವಚನಾನಂದ ಶ್ರೀ ಛಲ ಕಾರಣ: ಬೊಮ್ಮಾಯಿ

KannadaprabhaNewsNetwork | Published : Aug 24, 2024 1:20 AM

ಸಾರಾಂಶ

ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಗಳ ಬದುಕಿಗೆ ನೀರು ಮತ್ತು ಗಾಳಿ ಅನಿವಾರ್ಯ. ನೀರು- ಗಾಳಿಗೆ ಪ್ರತೇಕ ವ್ಯವಸ್ಥೆ ಮಾಡಲಾಗುವುದಿಲ್ಲ. ಪ್ರತಿಯೊಬ್ಬರೂ ನೀರಿಗೆ ಮಹತ್ವ ಕೊಡುವುದನ್ನು ಕಲಿಯಬೇಕು. ಶ್ರೀಗಳು ನೀರಿನ ಮಹತ್ವ ಅರಿತಿರುವ ಕಾರಣ ತುಂಗಭದ್ರೆ ದಡದಲ್ಲಿ ಗಂಗಾರತಿಯಂತೆ ತುಂಗಭದ್ರಾರತಿ ಪರಿಕಲ್ಪನೆ ಸಾಧ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಹರಹರದಲ್ಲಿ ಹೇಳಿದ್ದಾರೆ.

- ಹರಿಹರದಲ್ಲಿ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ ಹಾವೇರಿ ಸಂಸದ

- ಜನವರಿಯಲ್ಲಿ ತುಂಗಭದ್ರಾ ಆರತಿ ಮಂಟಪ ಅಧಿಕೃತ ಲೋಕಾರ್ಪಣೆ: ವಚನಾನಂದ ಶ್ರೀ- - - ಕನ್ನಡಪ್ರಭ ವಾರ್ತೆ ಹರಿಹರ

ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಗಳ ಬದುಕಿಗೆ ನೀರು ಮತ್ತು ಗಾಳಿ ಅನಿವಾರ್ಯ. ನೀರು- ಗಾಳಿಗೆ ಪ್ರತೇಕ ವ್ಯವಸ್ಥೆ ಮಾಡಲಾಗುವುದಿಲ್ಲ. ಪ್ರತಿಯೊಬ್ಬರೂ ನೀರಿಗೆ ಮಹತ್ವ ಕೊಡುವುದನ್ನು ಕಲಿಯಬೇಕು. ಶ್ರೀಗಳು ನೀರಿನ ಮಹತ್ವ ಅರಿತಿರುವ ಕಾರಣ ತುಂಗಭದ್ರೆ ದಡದಲ್ಲಿ ಗಂಗಾರತಿಯಂತೆ ತುಂಗಭದ್ರಾರತಿ ಪರಿಕಲ್ಪನೆ ಸಾಧ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.

ನಗರದ ರಾಘವೇಂದ್ರ ಮಠದ ಹಿಂಭಾಗ ನಿರ್ಮಿಸಲಾಗುತ್ತಿರುವ ತುಂಗಭದ್ರಾ ಆರತಿ ಮಂಟಪದ ಬಳಿ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿ, ನಂತರ ಬೃಂದಾವನ ಸಸಿ ನೆಟ್ಟು ಮಾತನಾಡಿದ ಅವರು, ಅತ್ಯಂತ ಕಡಿಮೆ ಸಮಯದಲ್ಲಿ ಯೋಗ ಮಂಟಪ ನಿರ್ಮಾಣ ಆಗಿರುವುದು ಸಂತಸ ತಂದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಗಂಗಾರತಿ ನಿರ್ಮಿಸಿದ ಮಾದರಿಯಲ್ಲಿ ಮಧ್ಯ ಕರ್ನಾಟಕದ ತುಂಗಭದ್ರಾ ನದಿಗೆ ತುಂಗಭದ್ರಾ ಆರತಿ ಯೋಜನೆಯನ್ನು ರೂಪಿಸಬೇಕೆಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಕೇಳಿಕೊಂಡಿದ್ದರು. ಆಗ ನಾವು ಈ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದಾಗ ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು ಎಂದರು.

ಶ್ರೀಗಳ ಮೇಲೆ ನಂಬಿಕೆ ಇಟ್ಟು ನಮ್ಮ ಅವಧಿಯಲ್ಲಿ ಈ ಯೋಜನೆಗೆ ಹಣ ಬಿಡುಗಡೆ ಮಾಡಿದೆವು. ಅದರ ಫಲವಾಗಿ ಈ ಸ್ಥಳ ಕರ್ನಾಟಕದ ಸಂಗಮ ಸ್ಥಳವಾಗಿ ವಿಶಾಲವಾದ ಮಂಟಪ ನಿರ್ಮಾಣವಾಗಿ ಯೋಗ ಹಾಗೂ ಸತ್ಸಂಗ ಕಾರ್ಯಕ್ರಮ ಕಂಗೊಳಿಸುತ್ತಿದೆ. ಈ ಸಾಧನೆಗೆ ವಚನಾನಂದ ಶ್ರೀಗಳ ಛಲವೇ ಕಾರಣ ಎಂದರು.

ನಾಗರಿಕತೆ ಜೊತೆಗೆ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ಆಗಬೇಕು. ಸದಾ ಕಾಲ ಮಳೆಯಾಗಿ ತುಂಗಭದ್ರಾ ನದಿಯು ತುಂಬಿ ಹರಿದು ಈ ಭಾಗದ ಭೂಮಿ ತಾಯಿ ಹಸಿರು ಸೀರೆಯ ಉಟ್ಟು ರೈತರ ಬದುಕು ಸದಾ ಹಸಿರಾಗಿರಲಿ ಎಂದರು.

ತವರು ಮನೆಯಿದ್ದಂತೆ:

ಬಾಗಿನ ಅರ್ಪಿಸಿ ಮಾತನಾಡಿದ ದಾವಣಗೆರೆ ಕ್ಷೇತ್ರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಹರಿಹರ ನಗರವು ನನ್ನ ತವರಮನೆ ಇದ್ದಂತೆ. ಮುಂದಿನ ಸಂಕ್ರಾಂತಿಗೆ ಈ ಯೋಜನೆ ಲೋಕಾರ್ಪಣೆ ಮಾಡುವುದಾಗಿ ಶ್ರೀಗಳು ಹೇಳಿದ್ದಾರೆ. ಈ ಬಗ್ಗೆ ತೋಟಗಾರಿಕಾ ಸಚಿವರೊಂದಿಗೆ ಚರ್ಚಿಸಿ ಬೃಂದಾವನದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಹಿಂದಿನಿಂದಲೂ ಶಾಮನೂರು ಮನೆತನವು ಪಂಚಮಸಾಲಿ ಮಠದ ಜೊತೆಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ಕೂ ಎಲ್ಲ ರೀತಿಯ ಸಹಾಯ ನೀಡುವುದಾಗಿ ತಿಳಿಸಿದರು.

ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ರಾಣೆಬೆನ್ನೂರು ಮಾಜಿ ಶಾಸಕ ಅರುಣ ಪೂಜಾರ್, ಪಂಚಮಸಾಲಿ ಪೀಠದ ಬಿ.ಸಿ. ಉಮಾಪತಿ. ಧಮದರ್ಶಿ ಚಂದ್ರಶೇಖರ್, ಶ್ರೀನಿವಾಸ ನಂದಿಗಾವಿ, ಹಾಗೂ ವಿವಿಧ ಮಠಾಧೀಶರು ಹಾಜರಿದ್ದರು.

- - -

ಬಾಕ್ಸ್ * ಜನವರಿಯಲ್ಲಿ ತುಂಗಭದ್ರಾ ಆರತಿ ಮಂಟಪ ಅಧಿಕೃತ ಲೋಕಾರ್ಪಣೆ: ವಚನಾನಂದ ಶ್ರೀ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಮಾತನಾಡಿ, ಪಾಳುಬಿದ್ದ ಜಾಗದಲ್ಲಿ ತುಂಗಭದ್ರಾ ನದಿಯ ಈ ದಡದಲ್ಲಿ ತುಂಗಭದ್ರಾರಾತಿ ಮಂಟಪ ನಿರ್ಮಾಣ ಮಾಡಬೇಕೆಂದು ಯಡಿಯೂರಪ್ಪ ಅವರನ್ನು ಕೇಳಿಕೊಂಡಾಗ ಅವರು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಿಳಿಸಿದ್ದರು. ಮೊದಲು ₹೧೬ ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿದ್ದೆವು. ಬೊಮ್ಮಯಿ ಅವರು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದಾಗ ಈ ಸ್ಥಳವನ್ನು ನೋಡಿ ₹೧೬ ಕೋಟಿಯಲ್ಲಿ ಈ ಯೋಜನೆ ಆಗುವುದಿಲ್ಲ ₹೩೦ ಕೋಟಿಗೆ ಯೋಜನೆ ಸಿದ್ಧಪಡಿಸಲು ತಿಳಿಸಿ, ಹಣ ಬಿಡುಗಡೆ ಮಾಡಿದ್ದರು. ಈ ಕಾರಣವೇ ಇವತ್ತು ಈ ನದಿ ದಡದಲ್ಲಿ ಸುಂದರ ಮಂಟಪ ನಿರ್ಮಾಣವಾಗಲು ಸಾಧ್ಯವಾಯಿತು ಎಂದರು. ಈಗಾಗಲೇ ೮ ಮಂಟಪಗಳು ನಿರ್ಮಾಣವಾಗಿವೆ. ಮುಂದಿನ ದಿನಗಳಲ್ಲಿ ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಬಸವೇಶ್ವರರು, ಅಕ್ಕಮಹಾದೇವಿ, ಅಲ್ಲಮಪ್ರಭು, ಪತಂಜಲಿ, ಧನ್ವಂತರಿ ಮೂರ್ತಿಗಳನ್ನು ಅಮೃತ ಶಿಲೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಮುಂಬರುವ ಜನವರಿ ೧೪ ಮತ್ತು ೧೫ರಂದು ಅಧಿಕೃತವಾಗಿ ಈ ತುಂಗಭದ್ರಾ ಆರತಿ ಮಂಟಪ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

- - -ಬಾಕ್ಸ್ ಐಟಂಗೆ,,,,,,

ಕಾರ್ಯಕ್ರಮದಲ್ಲಿ ಇದ್ದ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ನನ್ನ ಅವಧಿಯಲ್ಲಿ ನಿಮ್ಮ ಭಾಗದ ಈ ಕ್ಷೇತ್ರವನ್ನ ಅಭಿವೃದ್ಧಿ ಮಾಡಿದ್ದೇನೆ. ನಿಮಗೆ ಈಗ ಶಕ್ತಿ ಇದೆ. ನಿಮ್ಮ ಪತಿಯವರು ಸಚಿವರಿದ್ದಾರೆ. ನೀವು ನಮ್ಮ ಭಾಗದಲ್ಲಿ ಈ ರೀತಿಯ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಕೇಳಿದರು.೨೩ ಎಚ್‌ಆರ್‌ಆರ್ ೨ಹರಿಹರದ ರಾಘವೇಂದ್ರ ಮಠದ ಹಿಂಬಾಗ ನಿರ್ಮಿಸಲಾಗುತ್ತಿರುವ ತುಂಗಭದ್ರಾ ಆರತಿ ಮಂಟಪದ ಬಳಿ ತುಂಗಭದ್ರ ನದಿಗೆ ಬಾಗಿನ ಅರ್ಪಿಸಿ, ಬೃಂದಾವನ ಸಸಿ ನೆಡಲಾಯಿತು. ಮುಖ್ಯಮಂತ್ರಿ ಸಂಸದರಾದ ಬಸವರಾಜ್ ಬೊಮ್ಮಾಯಿ, ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಮಠಾಶಧೀಶರಿರು ಭಾಗವಹಿಸಿದ್ದರು.

Share this article