ಮಾ.೨೧ ರಂದು ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ: ಡಾ.ಕುಮಾರ

KannadaprabhaNewsNetwork |  
Published : Feb 21, 2024, 02:04 AM ISTUpdated : Feb 21, 2024, 02:05 AM IST
೨೦ಕೆಎಂಎನ್‌ಡಿ-೫ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮೇಲುಕೋಟೆ ಶ್ರೀ ವೈರಮುಡಿ ಬ್ರಹ್ಮೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆ ನಡೆಸಿದರು. | Kannada Prabha

ಸಾರಾಂಶ

ಜಿಲ್ಲಾ ಖಜಾನೆಯಿಂದ ವೈರಮುಡಿ ಪೆಟ್ಟಿಗೆಯನ್ನು ಮಾ.೨೧ರಂದು ಬೆಳಗ್ಗೆ ೭ ಗಂಟೆಗೆ ಪಡೆದು ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಗುವುದು. ಈ ಸಮಯದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಯಾಗಬೇಕು. ಶ್ರೀವೈರಮುಡಿ ಬ್ರಹ್ಮೋತ್ಸವವು ಮಾ.೨೧ರಂದು ರಾತ್ರಿ ೮ ಗಂಟೆಗೆ ಪ್ರಾರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೇಲುಕೋಟೆ ಶ್ರೀಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಮಾ.೨೧ರಂದು ಶ್ರೀವೈರಮುಡಿ ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ೨೦೨೪ನೇ ಸಾಲಿನ ಶ್ರೀವೈರಮುಡಿ ಬ್ರಹ್ಮೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ ನಡೆಸಿ ಮಾತನಾಡಿದರು. ಜಿಲ್ಲಾ ಖಜಾನೆಯಿಂದ ವೈರಮುಡಿ ಪೆಟ್ಟಿಗೆಯನ್ನು ಮಾ.೨೧ರಂದು ಬೆಳಗ್ಗೆ ೭ ಗಂಟೆಗೆ ಪಡೆದು ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಗುವುದು. ಈ ಸಮಯದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಯಾಗಬೇಕು. ಶ್ರೀವೈರಮುಡಿ ಬ್ರಹ್ಮೋತ್ಸವವು ಮಾ.೨೧ರಂದು ರಾತ್ರಿ ೮ ಗಂಟೆಗೆ ಪ್ರಾರಂಭವಾಗಲಿದೆ ಎಂದರು.

ಕುಡಿಯುವ ನೀರಿನ ವ್ಯವಸ್ಥೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸ್ಥಳಗಳಲ್ಲಿ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಬೇಕು. ಹಾಲಿ ಇರುವ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರು ಒದಗಿಸುವಂತೆ ಹೇಳಿದರು.

ದೊಡ್ಡ ಕಲ್ಯಾಣಿಯ ಬಳಿ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಿ, ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ನುರಿತ ಈಜುಗಾರರನ್ನು ಕಲ್ಯಾಣಿಗಳ ಬಳಿ ನಿಯೋಜಿಸುವಂತೆ ಸೂಚಿಸಿದರು.

ತುರ್ತು ಆರೋಗ್ಯ ಸೇವೆ ಒದಗಿಸಲು ಆಂಬ್ಯುಲೆನ್ಸ್ ಹಾಗೂ ಆರೋಗ್ಯ ಸಿಬ್ಬಂದಿಯನ್ನು ಒದಗಿಸುವುದು. ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದುರಸ್ತಿಗೊಳಿಸುವುದು. ಸಾರಿಗೆ ಸಂಸ್ಥೆಯಿಂದ ವಿವಿಧ ಭಾಗಗಳಿಂದ ಮೇಲುಕೋಟೆಗೆ ಹೆಚ್ಚು ಬಸ್ ಕಲ್ಪಿಸುವುದು. ವಾಹನ ಪಾರ್ಕಿಂಗ್ ಸ್ಥಳದಿಂದ ದೇವಸ್ಥಾನದವರೆಗೆ ಭಕ್ತಾಧಿಗಳಿಗೆ ೧೦ ಉಚಿತ ಬಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವೈರಮುಡಿ ಪ್ರಾರಂಭದಿಂದ ಮುಕ್ತಾಯದವರೆಗೆ ಕ್ಷೇತ್ರಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು. ಕಲ್ಯಾಣಿ, ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಷಿನ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಿ ವಿದ್ಯುತ್ ಅವಘಡಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಶ್ರೀ ಚಲುವನಾರಾಯಣಸ್ವಾಮಿ ಹಾಗೂ ಶ್ರೀ ಯೋಗಾ ನರಸಿಂಹ ಸ್ವಾಮಿ ದೇವಾಲಯಗಳಿಗೆ, ಪ್ರಮುಖ ಮಂಟಪ, ಕಲ್ಯಾಣಿಗಳಿಗೆ ವಿಶೇಷ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲು ಕ್ರಮ ವಹಿಸುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ವೈರಮುಡಿ ಉತ್ಸವ ವೀಕ್ಷಣೆಗೆ ಬರುವ ಭಕ್ತಾಧಿಗಳು ರಸ್ತೆಗಳಲ್ಲಿ ಕುಳಿತು ಬ್ರಹೋತ್ಸವವನ್ನು ವೀಕ್ಷಿಸುತ್ತಾರೆ. ಆದ ಕಾರಣ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೂಲಭೂತ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಭಕ್ತಾಧಿಗಳಿಗೆ ಒದಗಿಸುವ ಅವಶ್ಯಕತೆ ಇದೆ. ವೈರಮುಡಿ ಉತ್ಸವ ಮುಗಿದ ನಂತರವೂ ಸ್ವಚ್ಛತೆಗೆ ಆದ್ಯತೆ ನೀಡಿ. ದಾಸೋಹ ಭವನದಲ್ಲಿ ಭಕ್ತಾದಿಗಳಿಗೆ ಪ್ರತಿದಿನ ಊಟದ ವ್ಯವಸ್ಥೆ ಮಾಡಲು ಯೋಜನೆ ರೂಪಿಸುವಂತೆ ಹೇಳಿದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ನಾಗರಾಜು, ಪಾಂಡವಪುರ ವಿಭಾಗಾಧಿಕಾರಿ ನಂದೀಶ್, ಲೋಕಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಹರ್ಷ, ಆರೋಗ್ಯ ಇಲಾಖೆಯ ಡಾ.ಸೋಮಶೇಖರ್, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಮೋಹನ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ