ಕನ್ನಡಪ್ರಭ ವಾರ್ತೆ ಮೇಲುಕೋಟೆ
ವೈರಮುಡಿ ಬ್ರಹ್ಮೋತ್ಸವಕ್ಕೆ ಏ.2 ರಂದು ಚಾಲನೆ ದೊರೆಯಲಿದ್ದು, ಅಂಕುರಾರ್ಪಣೆಯೊಂದಿಗೆ ಆರಂಭವಾಗಲಿದೆ. ಅಂಕುರಾರ್ಪಣೆಯೆಂದರೆ ದೇವಸೇನ ವಿಶ್ವಕ್ಷೇನರ ಉತ್ಸವ ಹಾಗೂ ಮೃತ್ತಿಕಾ ಸಂಗ್ರಹಣೆಯಾಗಿದೆ. ಜಾತ್ರಾಮಹೋತ್ಸವ ಏ.2 ರಿಂದ ಏ.14ರ ಶೇರ್ತಿ ಸೇವೆಯವರೆಗೆ 14 ದಿನಗಳ ಕಾಲ ನಡೆಯಲಿದೆ.ಉತ್ಸವದ ಅತ್ಯಂತ ಪ್ರಮುಖ ವೈರಮುಡಿ ಕಿರೀಟಧಾರಣ ಮಹೋತ್ಸವ ಏ.7ರ ಸೋಮವಾರ ರಾತ್ರಿ 8.30ಕ್ಕೆ ಆರಂಭವಾಗಲಿದೆ. ನಂತರ ಬೆಳಗಿನ 4 ಗಂಟೆವರೆಗೆ ವೈರಮುಡಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಉತ್ಸವಕ್ಕಾಗಿ ಆಕರ್ಷಕ ದೀಪಾಲಂಕಾರ ಸೇರಿ ಎಲ್ಲಾ ವ್ಯವಸ್ಥೆ ಮಾಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದ್ದಾರೆ.
ಪ್ರಮುಖ ಉತ್ಸವಗಳು:ಬ್ರಹ್ಮೋತ್ಸವದಲ್ಲಿ ಏ.10ರ ಬೆಳಗ್ಗೆ 10 ಗಂಟೆಗೆ ಮಹಾರಥೋತ್ಸವ, ಏ.11ರಂದು ರಾತ್ರಿ 7 ಗಂಟೆಗೆ ಕಲ್ಯಾಣಿಯಲ್ಲಿ ತೆಪ್ಪೋತ್ಸವ, ಏ. 12ರಂದು ಬೆಳಗ್ಗೆ 11 ಗಂಟೆಗೆ ತೀರ್ಥಸ್ನಾನ, ಸಂಜೆ 5 ಗಂಟೆಗೆ ಪಟ್ಟಾಭಿಷೇಕ ಮಹೋತ್ಸವಗಳು ಅತ್ಯಂತ ಪ್ರಮುಖ ಉತ್ಸವಗಳಾಗಿವೆ.
ಉಳಿದಂತೆ ಏ.3 ರಂದು ಸಂಜೆ 5 ಗಂಟೆಗೆ ಕಲ್ಯಾಣಿಯ ಧಾರಾಮಂಟಪದಲ್ಲಿ ಕಲ್ಯಾಣೋತ್ಸವ, ಏ.4ರಂದು ಬೆಳಗ್ಗೆ 9 ಗಂಟೆಗೆ ದ್ವಜಾರೋಹಣ, ರಾಮಾನುಜಾಚಾರ್ಯರಿಗೆ ಅಭಿಷೇಕ, ಏ.5 ರಂದು ಸಂಜೆ ಕಲ್ಯಾಣಿಯಲ್ಲಿ ನಾಗವಲ್ಲಿ ಮಹೋತ್ಸವ, ಏ.8ರಂದು ಸಂಜೆ 5 ಗಂಟೆಗೆ ಪ್ರಹ್ಮಾದ ಪರಿಪಾಲನೋತ್ಸವ, ಏ.9 ರಂದು ಸಂಜೆ 6.30ಕ್ಕೆ ಗಜೇಂದ್ರಮೋಕ್ಷ ಉತ್ಸವ, ಏ.13ರಂದು ಮಹಾಭಿಷೇಕ ಜಾತ್ರಾ ಮಹೋತ್ಸವ ಜರುಗಲಿದೆ.ಎಲ್ಲಾ ದಿನಗಳಲ್ಲೂ ಮುತ್ತುಮುಡಿ ಹಾಗೂ ಮುತ್ತಿನಹಾರಗಳ ಅಲಂಕಾರ:ಚೆಲುವನಾರಾಯಣನಿಗೆ ವೈರಮುಡಿ ಬ್ರಹ್ಮೋತ್ಸವದ ಎಲ್ಲಾ ದಿನಗಳಲ್ಲೂ ಅಮೂಲ್ಯ ಮುತ್ತುಮುಡಿ ಹಾಗೂ ಮುತ್ತಿನಹಾರಗಳನ್ನು ಅಲಂಕರಿಸುವುದು ವಿಶೇಷವಾಗಿದೆ. ಮೈಸೂರು ಮಹಾರಾಜರ ಕಾಲದಲ್ಲಿ ಸಮರ್ಪಣೆಯಾದ ಮುತ್ತುಮುಡಿ ಹಾಗೂ ಇದರ ಜೊತೆಯಿರುವ ಮುತ್ತಿನ ಹಾರಗಳು ಬ್ರಹ್ಮೋತ್ಸವದಲ್ಲಿ ಚೆಲುವನಾರಾಯಣಸ್ವಾಮಿಯ ಚೆಲುವನ್ನು ಇಮ್ಮಡಿಗೊಳಿಸುತ್ತವೆ.
ಆಂಡಾಂಳ್ ಕೊಂಡೆಯಂತೆ ಮಾಡಿರುವ ಮುತ್ತುಮುಡಿ ಚೆಲುವನ ಮುಡಿಗೇರುವ ಸಂಭ್ರವನ್ನು ವೈರಮುಡಿ ಜಾತ್ರಾಮಹೋತ್ಸವದಲ್ಲಿ ಮಾತ್ರ ದರ್ಶಿಸಬಹುದು. ಪಾಂಡವಪುರ ಖಜಾನೆಯಲ್ಲಿರಿಸಿರುವ ಈ ಆಭರಣಗಳನ್ನು ಪ್ರಥಮ ತೆಪ್ಪೋತ್ಸವಕ್ಕೂ ಮುನ್ನ ತರಲಾಗುತ್ತದೆ. ನಂತರ ಸ್ಥಾನೀಕರು, ಅರ್ಚಕ, ಪರಿಚಾರಕರಿಗೆ ಹಸ್ತಾಂತರ ಮಾಡಲಾಗುತ್ತದೆ.ಮುತ್ತುಮುಡಿ ತಿರುವಾಭರಣಪೆಟ್ಟಿಗೆಯಲ್ಲಿ ನವಚಕ್ರಪದಕ, ದಪ್ಪಮುತ್ತಿನ ಕಂಠೀಹಾರ, ಏಳೆ ಮುತ್ತಿನಸರ, ಮುತ್ತಿನ ಹಾರದೊಂದಿಗಿನ ಗಂಡುಬೇರುಂಡ ಪದಕದ ಸರ, ಚಿನ್ನದಕಿರೀಟ ಸೇರಿದಂತೆ ಹತ್ತಾರು ಮುತ್ತಿನ ಆಭರಣಗಳು ಇದ್ದು ಸ್ವಾಮಿಯನ್ನು ಅಲಂಕರಿಸುತ್ತವೆ. ವೈರಮುಡಿ ಜಾತ್ರಾಮಹೋತ್ಸವಕ್ಕೂ ಮುನ್ನ ನಡೆಯುವ ಪ್ರಥಮ ತೆಪ್ಪೋತ್ಸವದಿಂದ ಆರಂಭವಾಗಿ ಕೊಡೈತಿರುನಾಳ್ ಅಂತ್ಯದವರೆಗೆ ಮುತ್ತುಮುಡಿ ಸ್ವಾಮಿಯನ್ನು ಅಲಂಕರಿಸಿರುತ್ತದೆ.