ಕನ್ನಡಪ್ರಭ ವಾರ್ತೆ ಸಿಂಧನೂರು
ತಾಲೂಕಿನ ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಮಹಾತಪಸ್ವಿ ಲಿಂ. ಚನ್ನಬಸವ ಮಹಾಶಿವಯೋಗಿ ಅವರ 41ನೇ ಜಾತ್ರಾ ಮಹೋತ್ಸವ ಫೆ.15 ಮತ್ತು 16ರಂದು ನಡೆಯಲಿದೆ ಎಂದು ವಳಬಳ್ಳಾರಿ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ತಿಳಿಸಿದ್ದಾರೆ.ಈ ಕುರಿತು ಮಂಗಳವಾರ ಹೇಳಿಕೆ ನೀಡಿರುವ ಅವರು, ಫೆ.15ರಂದು ಬೆಳಗ್ಗೆಯಿಂದ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಸಂಜೆ 5 ಗಂಟೆಗೆ ಮಹಿಳೆಯರಿಂದ ಲಘು ರಥೋತ್ಸವ ನಡೆಯಲಿದೆ. ಸಂಜೆ 6 ಗಂಟೆಗೆ ಶಿವಾನುಭವ ಗೋಷ್ಠಿ ನಡೆಯಲಿದ್ದು, ಅಡವಿ ಅಮರೇಶ್ವರ ಸುವರ್ಣಗಿರಿ ವಿರಕ್ತಮಠದ ಶಾಂತಮಲ್ಲ ಮಹಾಸ್ವಾಮಿ ಅಧ್ಯಕ್ಷತೆ ವಹಿಸುವರು. ವಿವಿಧ ಮಠಗಳ ಶ್ರೀಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಅತಿಥಿಗಳಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ಶರಣಬಸವ ರಾಯಚೂರು, ಪತ್ರಕರ್ತ ದುರುಗೇಶ, ಪರಿಸರ ಸಂರಕ್ಷಕ ಸುರೇಶ ನೆಕ್ಕಂಟಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸುವರ್ಣಗಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದ್ದಾರೆ.
ಫೆ.16 ರಂದು ಬೆಳಗ್ಗೆ 6 ಗಂಟೆಗೆ ಜಂಗಮ ವಟುಗಳಿಗೆ ಇಷ್ಟಲಿಂಗ ಅಯ್ಯಾಚಾರ ದೀಕ್ಷೆ ನಡೆಯಲಿದೆ. ಸಂಜೆ 5 ಗಂಟೆಗೆ ಮಹಾತಪಸ್ವಿ ಲಿಂ.ಚನ್ನಬಸವ ಮಹಾಶಿವಯೋಗಿಯವರ ಮಹಾರಥೋತ್ಸವ ಅಪಾರ ಭಕ್ತರ ನಡುವೆ ಜರುಗಲಿದೆ. ಸಂಜೆ 6 ಗಂಟೆಗೆ ಧಾರ್ಮಿಕ ಸಮ್ಮೇಳನ ನಡೆಯಲಿದೆ. ಕೊಟ್ಟೂರು ಸಂಸ್ಥಾನಮಠದ ಬಸವಲಿಂಗ ಮಹಾಸ್ವಾಮಿ ಸಾನ್ನಿಧ್ಯ ವಹಿಸುವರು. ನಂದವಾಡಗಿ-ಆಳಂದ ಮಹಾಂತೇಶ್ವರಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಪುರಾಣ ಮಹಾಮಂಗಲವಾಗಲಿದೆ. ಸಚಿವರು, ಸಂಸದರು, ಮಾಜಿ ಸಂಸದರು, ಶಾಸಕರು, ಅಧಿಕಾರಿಗಳು ಅತಿಥಿಗಳಾಗಿ ಪಾಲ್ಗೊಳ್ಳುವರು.ಕಾರಣ ಎರಡು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ತಾತನವರ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದ್ದಾರೆ.