ಕನ್ನಡಪ್ರಭ ವಾರ್ತೆ ತುಮಕೂರುಕವಿಗಳು ತಮ್ಮ ಕವನಗಳಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಕವಿತೆಗಳಲ್ಲಿ ಸಾಮಾಜಿಕ, ಸಾಮೂಹಿಕ ಜವಾಬ್ದಾರಿ ಇರಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜು ಉದಯೋನ್ಮುಖ ಕವಿಗಳಿಗೆ ಸಲಹೆ ನೀಡಿದರು.ಮಂಗಳವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕದ ದಸರಾ ಕವಿಗೋಷ್ಠಿ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಕವಿಗಳು ಹಿಂದಿನ ಕವಿಗಳ ವಾರಸುದಾರರಾಗಬೇಕು, ಹಿಂದೆ ಆಗಿಹೋಗಿರುವ ಕವಿಗಳ ಕಾವ್ಯವನ್ನು ಸತತ ಅಧ್ಯಯನ ಮಾಡುವ ಮೂಲಕ ತಮ್ಮ ಕಾವ್ಯ ರಚನಾ ಶಕ್ತಿ, ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಬೇಕು ಎಂದರು.ಕರ್ನಾಟಕದ ಮಣ್ಣಿನಲ್ಲಿ ಕಾವ್ಯಶಕ್ತಿ ಇದೆ. ಅಕ್ಷರಸ್ಥರಾಗಲಿ, ಅನಕ್ಷರಸ್ಥರೇ ಆಗಲಿ ಕಾವ್ಯ ಕಟ್ಟುವ ಕಲೆಗಾರಿಕೆ ಹೊಂದಿದ್ದಾರೆ. ಕವಿಗಳು ಕಾವ್ಯವನ್ನು ತಮಗಾಗಿ ಬರೆಯುವುದಲ್ಲ, ಜನರಿಗಾಗಿ ಬರೆಯಬೇಕು. ಹರಿಹರ, ಸರ್ವಜ್ಞ, ಬಸವಾದಿ ಶರಣರು ಜನರಿಗಾಗಿ ಬರೆದರು. ಅವರ ಕಾವ್ಯಗಳಲ್ಲಿ ಮೌಲ್ಯಗಳು, ಸಾಮಾಜಿಕ ಹಿತ ಚಿಂತನೆ ಇವೆ. ಹಿಂದಿನ ಎಲ್ಲಾ ಕವಿಗಳ ಆಶಯ ಎಲ್ಲರನ್ನೂ ಒಗ್ಗೂಡಿಸುವ ನಮ್ಮ ಸಂವಿಧಾನದ ಆಶಯವೇ ಆಗಿದೆ ಎಂದು ಹೇಳಿದರು.ಅಪಾತ್ರರಿಗೆ ಪ್ರಶಸ್ತಿ ಹೋಗುವುದು ಅಪಾಯ. ಅದರಿಂದ ಸಮಾಜ ಹಾಳಾಗುತ್ತದೆ. ಪ್ರಶಸ್ತಿ ಪಡೆದವರ ಪ್ರತಿಭೆ ಕುಬ್ಜವಾಗಬಹುದು, ಅಹಮಿತಿ ಸೃಷ್ಟಿಯಾಗಿ ಕ್ರಿಯಾಶೀಲತೆ ಕಳೆದುಕೊಳ್ಳುತ್ತಾರೆ ಎಂದು ಎಲ್.ಎನ್.ಮುಕುಂದರಾಜು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಪರಂಪರೆ ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಈ ಕಾರ್ಯಗಳಲ್ಲಿ ತೊಡಗಿಕೊಂಡು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪರಿಷತ್ತಿನ ಸದಸ್ಯರಾಗಿ ತಮ್ಮ ಹಕ್ಕು ಸ್ಥಾಪನೆ ಮಾಡಿಕೊಂಡು ಸಂಬಂಧ ಇಟ್ಟುಕೊಳ್ಳಿ ಎಂದು ಸಾಹಿತ್ಯಾಸಕ್ತರಿಗೆ ಮನವಿ ಮಾಡಿದರು.ಸಾಹಿತ್ಯ, ಸಂಗೀತ, ನಾಟಕ ಅಕಾಡೆಮಿಗಳು ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಸಹಕಾರಿಯಾಗಿವೆ. ಪರಸ್ಪರ ಜೊತೆಗೂಡಿ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಪರಂಪರೆ ಕಾಪಾಡುವ ಕೆಲಸ ಮಾಡೋಣ ಎಂದು ಹೇಳಿದರು.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ಸಾಹಿತ್ಯ ಹಾಗೂ ಪತ್ರಿಕೋದ್ಯಮ ಇಂದು ಡೋಲಾಯಮಾನ ಪರಿಸ್ಥಿತಿಯಲ್ಲಿವೆ. ಸಾಹಿತ್ಯ, ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಹಿತ್ಯ ಪರಿಷತ್ತಿನವರು ಇಂದಿನ ತಲೆಮಾರಿನವರಲ್ಲಿ ಓದುವ ಹವ್ಯಾಸ ಬೆಳೆಸುವ ಆಂದೋಲನ ಮಾಡಬೇಕಾಗುತ್ತದೆ ಎಂದರು.ಪ್ರೊ.ಎಸ್.ಆರ್.ದೇವಪ್ರಕಾಶ್ ಅವರು ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಮಾಧ್ಯಮ ದತ್ತಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಎನ್.ಪದ್ಮನಾಭಯ್ಯ, ಆರ್.ನಾಗರಾಜು ಅವರಿಗೆ ಹಾಗೂ ಜಿ.ರಾಜನ್ ಅವರ ಜನಪದ ದತ್ತಿ ಪ್ರಶಸ್ತಿಯನ್ನು ಮಧುಗಿರಿ ತಾಲೂಕು ತಿಮ್ಲಾಪುರದ ಕೋಟಮ್ಮ ಅವರಿಗೆ ಈ ವೇಳೆ ಪ್ರದಾನ ಮಾಡಲಾಯಿತು.ಕವಿ ಪ್ರೊ.ಮ.ಲ.ನ.ಮೂರ್ತಿ, ಸರ್ವೋದಯ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಕೆ.ವಿ.ಸುಬ್ಬರಾವ್, ಪತ್ರಕರ್ತ ಹಾಗೂ ನಾಟಕ ಅಕಾಡೆಮಿ ಸದಸ್ಯರಾದ ಉಗಮ ಶ್ರೀನಿವಾಸ್, ಸಿರಿವರ ರವೀಂದ್ರ,ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ್, ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಸಂಘಟನಾ ಕಾರ್ಯದರ್ಶಿ ಜಿ.ಹೆಚ್.ಮಹದೇವಪ್ಪ, ಕೋಶಾಧ್ಯಕ್ಷ ಎಂ.ಎಚ್.ನಾಗರಾಜು, ಸಂಚಾಲಕ ಉ.ಮ.ಮಹೇಶ್ ಮೊದಲಾದವರು ಭಾಗವಹಿಸಿದ್ದರು.ನಂತರ ಕವಿ ಪ್ರೊ.ಮ.ಲ.ನ.ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕವಿಗಳು ದಸರಾ ಸಂಭ್ರಮ, ಕನ್ನಡ ನಾಡು, ನುಡಿ, ನೆಲ, ಜಲ, ಕರುನಾಡಿನ ಪ್ರಕೃತಿ ಸೌಂದರ್ಯ, ಕನ್ನಡಿಗರ ಔದಾರ್ಯ ವಿಷಯ ಒಳಗೊಂಡ ಕವಿತೆಗಳನ್ನು ವಾಚನ ಮಾಡಿ ಗಮನ ಸೆಳೆದರು.