ಸೋಮವಾರಪೇಟೆ : ವಕ್ಫ್‌ ಹೆಸರಿಗೆ ವನದುರ್ಗಿ ದೇಗುಲ ಆಸ್ತಿ - ಬಿಜೆಪಿ ಉಗ್ರ ಹೋರಾಟ ಎಚ್ಚರಿಕೆ

KannadaprabhaNewsNetwork |  
Published : Nov 09, 2024, 01:20 AM ISTUpdated : Nov 09, 2024, 10:33 AM IST
೩೨ | Kannada Prabha

ಸಾರಾಂಶ

 ಶ್ರೀ ವನದುರ್ಗಿ ದೇವಾಲಯದ ಆಸ್ತಿಯನ್ನು ವಕ್ಫ್ ಬೋರ್ಡ್‌ನಿಂದ ದೇವಾಲಯದ ಹೆಸರಿಗೆ ಕಂದಾಯ ಇಲಾಖೆ ಮಾಡಿಕೊಡಬೇಕು. ತಪ್ಪಿದಲ್ಲಿ ಬಿಜೆಪಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಕೃಷಿಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ ಎಚ್ಚರಿಸಿದ್ದಾರೆ.

 ಸೋಮವಾರಪೇಟೆ : ಪಟ್ಟಣದ ರೇಂಜರ್ಸ್ ಬ್ಲಾಕ್‌ನಲ್ಲಿರುವ ಶ್ರೀ ವನದುರ್ಗಿ ದೇವಾಲಯದ ಆಸ್ತಿಯನ್ನು ವಕ್ಫ್ ಬೋರ್ಡ್‌ನಿಂದ ದೇವಾಲಯದ ಹೆಸರಿಗೆ ಕಂದಾಯ ಇಲಾಖೆ ಮಾಡಿಕೊಡಬೇಕು. ತಪ್ಪಿದಲ್ಲಿ ಬಿಜೆಪಿ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಕೃಷಿಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ ಎಚ್ಚರಿಸಿದ್ದಾರೆ.

ರೇಂಜರ್ಸ್‌ ಬ್ಲಾಕ್‌ನ ಸರ್ವೆ ನಂ.42. 47, 48, 49 ಜಾಗದ 11 ಎಕರೆ ಜಾಗದ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದೆ. ದಾನ ಕೊಟ್ಟ ಐದೂವರೆ ಎಕರೆ ಜಾಗ ಮಾತ್ರ ವಕ್ಫ್ ಬೋರ್ಡ್‌ಗೆ ಸೇರಿದ್ದು ಉಳಿದ ಜಾಗ ಶ್ರೀ ವನದುರ್ಗಿ ದೇವಾಲಯಕ್ಕೆ ಸೇರಿದ್ದು ಆ ಜಾಗದ ದಾಖಲಾತಿಯನ್ನು ದೇವಾಲಯದ ಹೆಸರಿಗೆ ಮಾಡಿಕೊಡಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಕ್ಫ್ ಸಚಿವ ಜಮೀರ್ ಆಹಮ್ಮದ್ ಖಾನ್ ಮೂಲಕ ಲ್ಯಾಂಡ್ ಜಿಹಾದ್‌ಗೆ ಕೈಹಾಕಿದ್ದು, ಈಗ ಕೊಡಗಿನಲ್ಲಿ ಹಿಂದುಗಳ ಕೆಲ ದೇವಾಲಯಗಳ ಆಸ್ತಿ ಮತ್ತು ಕೆಲ ರೈತರ ಆಸ್ತಿ ವಕ್ಫ್ ಬೋರ್ಡ್ ಖಾತೆಗೆ ಜಮೆಯಾಗಿವೆ ಎಂದು ದೂರಿದರು.

ರೇಂಜರ್ ಬ್ಲಾಕ್‌ನಲ್ಲಿ ದಾನಕೊಟ್ಟ ಐದೂವರೆ ಎಕರೆ ಜಾಗ ಮಾತ್ರ ವಕ್ಫ್ ಬೋರ್ಡ್‌ಗೆ ಸೇರಿದ್ದು, ಉಳಿದ ಜಾಗ ವನದುರ್ಗಿ ದೇವಾಲಯಕ್ಕೆ ಸೇರಿದ್ದು, ದಾನಕೊಟ್ಟ ಜಾಗದ ಬಗ್ಗೆ ಹಾಗು ಟ್ರಸ್ಟ್ ಬಗ್ಗೆ ತನಿಖೆಯಾಗಲಿ ಎಂದು ಎಂದು ಶ್ರೀವನದುರ್ಗಿ ದೇವಾಲಯದ ಸಮಿತಿ ಸದಸ್ಯ ಕೆ.ಎಸ್. ಪ್ರಕಾಶ್ ಹೇಳಿದರು.

ಬಿಜೆಪಿ ಮಂಡಲ ವಕ್ತಾರ ಕಂಠಿ ಕಾರ್ಯಪ್ಪ ಮಾತನಾಡಿ, ವಕ್ಫ್ ಆಸ್ತಿಯನ್ನು ಸಾರ್ವಜನಿಕ ಆಸ್ತಿ ಎಂದು ಘೋಷಣೆ ಮಾಡಬೇಕು. ಒಂದು ಕೋಮಿನ ಜನರನ್ನು ಓಲೈಕೆ ಮಾಡಲು ಕಾಂಗ್ರೆಸ್ ಸರ್ಕಾರ ಬಡ ರೈತರು ಮತ್ತು ಹಿಂದೂ ದೇವಾಲಯದ ಆಸ್ತಿ ವಕ್ಫ್‌ ಬೋರ್ಡ್‌ಗೆ ಸೇರಿದ್ದು ಎಂದು ನೋಟಿಸು ಜಾರಿಗೊಳಿಸುತ್ತಿದೆ. ಇದರಿಂದ ಕೋಮುಗಲಭೆ ಸೃಷ್ಟಿಯ ಹುನ್ನಾರ ಎಂದು ಆರೋಪಿಸಿದರು.

ಜಾಗ ತೆರವಿಗೆ ಆಕ್ಷೇಪ:

ಕೊಡಗಿನಲ್ಲೂ 16ಕುಟುಂಬಗಳ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ಹೇಳಿದ್ದಾರೆ. ಜಾಗ ತೆರವುಗೊಳಿಸಲು ಮುಂದಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಕೊಡಗಿನಲ್ಲಿ ಹಿಂದು ಮುಸ್ಲಿಂ ಸೌಹಾರ್ದತೆ ಇದೆ. ಹಿಂದುಗಳನ್ನು ಕೆಣಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮೂಡ ಹಗರಣದಿಂದ ಮುಖ್ಯಮಂತ್ರಿಯನ್ನು ಬಚಾವು ಮಾಡಲು, ವಕ್ಫ್ ಬೋರ್ಡ್ ಜಾಗ ಒತ್ತುವರಿ ತೆರವಿನ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಚಂದ್ರು, ಪ್ರಮುಖರಾದ ಕಿಬ್ಬೆಟ್ಟ ಮಧು ಇದ್ದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ