ಕನ್ನಡಪ್ರಭ ವಾರ್ತೆ ಮೈಸೂರು
ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲ್ಪಡುವ ವರಮಹಾಲಕ್ಷ್ಮಿ ಹಬ್ಬವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಮಹಿಳೆಯರು ಮನೆಯನ್ನು ಸ್ವಚ್ಛಗೊಳಿಸಿ ದೇವರ ಮನೆ ಅಥವಾ ಮನೆಯ ಆವರಣದಲ್ಲಿ ಅಷ್ಟಲಕ್ಷ್ಮಿಯರನ್ನು ಪೂಜಿಸಿ ಸುಖ, ಶಾಂತಿ, ನೆಮ್ಮದಿ, ಧನ ಸಂಪತ್ತಿಗಾಗಿ ಪ್ರಾರ್ಥಿಸಿದರು. ಮನೆಯಲ್ಲಿ ಕಳಸ ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಲಕ್ಷ್ಮಿಯ ಮುಖವಾಡ, ಸೀರೆ, ಬಳೆ ತೊಡಿಸಿ, ಬಗೆ ಬಗೆಯ ಹೂವುಗಳಿಂದ ಅಲಂಕಾರ ಮಾಡಿ, ವಿವಿಧ ತಿನಿಸುಗಳು, ಹಣ್ಣುಗಳನ್ನು ನೈವೇದ್ಯಕ್ಕಿಟ್ಟು, ಮನೆಯಲ್ಲಿರುವ ಹಣ, ಚಿನ್ನದೊಡವೆಗಳನ್ನು ದೇವರ ಮುಂದಿಟ್ಟು ನಮ್ಮ ಮನೆಯಲ್ಲಿ ಸದಾ ನೆಲೆಸಿರುವಂತೆ ಪ್ರಾರ್ಥಿಸಿದರು.ಬಳಿಕ ತಮ್ಮ ಅಕ್ಕಪಕ್ಕದ ಮನೆಯ ಮುತ್ತೈದೆಯರನ್ನು ಮನೆಗೆ ಕರೆದು, ಅವರಿಗೆ ಅರಿಶಿನ, ಕುಂಕುಮ, ಫಲತಾಂಬೂಲ ನೀಡಿದರು. ಇಂತಹ ದೃಶ್ಯಗಳು ನಗರದ ಎಲ್ಲೆಡೆ ಸಾಮಾನ್ಯವಾಗಿತ್ತು. ಕೆಲವರು ಸರಳವಾಗಿ ಆಚರಿಸಿದರೆ, ಇನ್ನೂ ಕೆಲವರು ಅದ್ಧೂರಿಯಾಗಿ ಆಚರಿಸಿದರು.
ಇದಲ್ಲದೆ ತಾಯಂದಿರು ಮಗಳಿಗೆ ಬಾಗಿನ ಕೊಟ್ಟು ಹರಸಿದರು. ಹಬ್ಬದ ಹಿನ್ನೆಲೆಯಲ್ಲಿ ಕಡುಬು, ಹೋಳಿಗೆ, ಸಜ್ಜಿಗೆ, ಕೋಸುಂಬರಿ, ವಡೆ, ಪೊಂಗಲ, ಚಕ್ಕುಲಿ ಸೇರಿದಂತೆ ಇತರೆ ತಿನಿಸಗಳನ್ನು ಮಾಡಿ ಸವಿದರು. ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದ್ದರೂ ತಲೆಕೆಡಿಸಿಕೊಳ್ಳದ ಮಹಿಳೆಯರು ಹಬ್ಬವನ್ನು ಆಚರಿಸಿದರು.ದೇವಸ್ಥಾನಗಳಲ್ಲಿ ವಿಶೇಷ ಪೂಜೆ:
ವರಮಹಾಲಕ್ಷ್ಮೀ ಹಬ್ಬವನ್ನು ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷವಾಗಿ ಆಚರಿಸಲಾಯಿತು. ಮಹಿಳೆಯರು ಮನೆಯಲ್ಲಿ ವ್ರತ ಆಚರಣೆ ಮಾಡಿ ಬಳಿಕ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ದಿವಾನ್ಸ್ ರಸ್ತೆಯ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಅಲ್ಲದೆ ದಟ್ಟಗಳ್ಳಿಯ ನೇತಾಜಿ ಸರ್ಕಲ್ ನಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದಲ್ಲೂ ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.ಹಿಂದೂ- ಮುಸ್ಲಿಂ ದಂಪತಿಯಿಂದ ಹಬ್ಬ:
ಮೈಸೂರು- ಮಾನಂದವಾಡಿ ರಸ್ತೆಯಲ್ಲಿರುವ ಕೋಟೆಹುಂಡಿಯಲ್ಲಿ ಮುಸ್ಲಿಂ ಕುಟುಂಬವೊಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವ ಮೂಲಕ ಸೌಹಾರ್ದತೆ ಸಾರಿತು.ಕೋಟೆಹುಂಡಿಯಲ್ಲಿರುವ ಜಾಕೀರ್ ಹುಸೇನ್ ಮತ್ತು ಮಮತಾ ದಂಪತಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದರು. ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. ಇವರು ಹಿಂದೂ- ಮುಸ್ಲಿಂ ಎರಡೂ ಧರ್ಮದ ಹಬ್ಬಗಳನ್ನು ಆಚರಿಸುವ ಮೂಲಕ ಸೌಹಾರ್ದತೆ ಮೆರೆಯುತ್ತಿದ್ದಾರೆ. ಸುಮಾರು 7 ವರ್ಷದಿಂದ ಈ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಗುತ್ತಿದೆ.