ಚೆಟ್ಟಳ್ಳಿಯಲ್ಲಿ ವೈವಿಧ್ಯಮಯ ಹಣ್ಣುಗಳ ಪ್ರದರ್ಶನ-100ಕ್ಕೂ ಅಧಿಕ ತಳಿ ಪ್ರದರ್ಶನ

KannadaprabhaNewsNetwork | Published : Jan 18, 2024 2:04 AM

ಸಾರಾಂಶ

ಕೊಡಗಿನ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಬುಧವಾರ ಫ್ಯಾಷನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನ ವೈವಿಧ್ಯತೆಯ ಪ್ರದರ್ಶನ ಮತ್ತು ಚರ್ಚೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ವಿವಿಧ ಕೃಷಿಕರಿಂದ ಸುಮಾರು 80ಕ್ಕೂ ಅಧಿಕ ಬಗೆಯ ಪಪ್ಪಾಯ ತಳಿಗಳು, 40ಕ್ಕೂ ಅಧಿಕ ಫ್ಯಾಷನ್ ಫ್ರೂಟ್ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿಪಪ್ಪಾಯ ಹಾಗೂ ಫ್ಯಾಷನ್ ಫ್ರೂಟ್ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ವಾಣಿಜ್ಯ ಬೆಳೆಯಾಗಿ ಕೃಷಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಬುಧವಾರ ಫ್ಯಾಷನ್ ಫ್ರೂಟ್ ಮತ್ತು ಪಪ್ಪಾಯ ಹಣ್ಣಿನ ವೈವಿಧ್ಯತೆಯ ಪ್ರದರ್ಶನ ಮತ್ತು ಚರ್ಚೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ವಿವಿಧ ಕೃಷಿಕರಿಂದ ಸುಮಾರು 80ಕ್ಕೂ ಅಧಿಕ ಬಗೆಯ ಪಪ್ಪಾಯ ತಳಿಗಳು, 40ಕ್ಕೂ ಅಧಿಕ ಫ್ಯಾಷನ್ ಫ್ರೂಟ್ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಒಂದೊಂದು ತಳಿ ಕೂಡ ವಿಭಿನ್ನವಾಗಿದ್ದವು. ಆಕಾರ, ಗುಣಮಟ್ಟ, ಗಾತ್ರದಲ್ಲಿ ಕೂಡ ವ್ಯತ್ಯಾಸಗಳು ಕಂಡುಬಂದವು. ಉತ್ತಮ ಗುಣಮಟ್ಟದ ಹಣ್ಣುಗಳನ್ನು ಆಯ್ಕೆ ಮಾಡಿ ಕೇಂದ್ರದಿಂದ ಪ್ರಶಸ್ತಿ ಕೂಡ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ವಿ.ವಿ. ಸುಲ್ಲದ್ ಮಠ್ ಮಾತನಾಡಿ 1958ರಲ್ಲಿ ಚೆಟ್ಟಳ್ಳಿ ಕೇಂದ್ರದಲ್ಲಿ ಪ್ರಥಮ ಬಾರಿಗೆ ಗಂಡು, ಹೆಣ್ಣು ತಳಿಯ ಪಪ್ಪಾಯ ಕಂಡು ಹಿಡಿಯಲಾಗಿತ್ತು. ಇತ್ತೀಚೆಗೆ ವಿವಿಧ ತಳಿಗಳು ಬಂದಿದೆ. ಕೂರ್ಗ್ ಹನಿ ಡ್ಯೂ ತಳಿಗೆ ಉತ್ತಮ ಬೇಡಿಕೆಯಿದೆ. ರಾಜಸ್ತಾನ, ಗುಜರಾತ್ ನಲ್ಲಿ ಹೆಚ್ಚಾಗಿ ಇದಕ್ಕೆ ಬೇಡಿಕೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿನ ಕೃಷಿಕರು ಬೆಳೆದಿರುವ ಪಪ್ಪಾಯ ತಳಿಯನ್ನು ಸಂಗ್ರಹಿಸಿ ಉತ್ತಮ ತಳಿಯನ್ನು ಮಾಡುವುದು ಸೂಕ್ತ. ಕೊಡಗಿನಲ್ಲಿ ಕಿತ್ತಳೆ ನಾಶವಾದ ನಂತರ ಬಟರ್ ಫ್ರೂಟ್ ಹೆಚ್ಚಿನ ಬೇಡಿಕೆಯಿದೆ. ಆದರೆ ಪಪ್ಪಾಯದಿಂದಲೂ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.

ರೈತರ ಬಳಿ ಉತ್ತಮ ತಳಿ ಇರಬಹುದು. ಆದ್ದರಿಂದ ರೈತರನ್ನು ಒಂದುಗೂಡಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸೌತ್ ಅಮೇರಿಕಾ ಫ್ಯಾಷನ್ ಫ್ರೂಟ್ ನ ಮೂಲ ಸ್ಥಾನ. ಇದರಂತ ಒಳ್ಳೆಯ ಹಣ್ಣು ಬೇರೆ ಹಣ್ಣುಗಳಲ್ಲಿ ಕಾಣಲು ಸಾಧ್ಯವಿಲ್ಲ. ಅಮೆರಿಕಾದಲ್ಲಿ ಇದಕ್ಕೆ ಭಾರಿ ಬೇಡಿಕೆಯಿದೆ. ಕಾವೇರಿ ಫ್ಯಾಷನ್ ಫ್ರೂಟ್ ನಂ.1 ಸ್ಥಾನದಲ್ಲಿ ಬಂದಿದೆ. ಈ ತಳಿ ವರ್ಷಕ್ಕೆ ಎರಡು ಬಾರಿ ಫಸಲು ಬರುತ್ತದೆ. ಆದ್ದರಿಂದ ಫ್ಯಾಷನ್ ಫ್ರೂಟ್ ಬೆಳೆದು ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.ಹಣ್ಣಿನ ವಿಭಾಗದ ಮಾಜಿ ವಿಜ್ಞಾನಿ ವೈ.ಟಿ.ಎನ್. ರೆಡ್ಡಿ ಮಾತನಾಡಿ 38 ವರ್ಷ ಹಣ್ಣಿನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಚೆಟ್ಟಳ್ಳಿ ಕೇಂದ್ರದಲ್ಲಿ ಕೂರ್ಗ್ ಹನಿ ಡ್ಯೂ ಪಪ್ಪಾಯ ತಳಿ ಬಿಡುಗಡೆ ಮಾಡಲಾಗಿದೆ. ಈ ತಳಿಗೆ ರೋಗ ತಡೆದುಕೊಳ್ಳುವ ಶಕ್ತಿಯಿದೆ. ಇತ್ತೀಚೆಗೆ ಪಪ್ಪಾಯಗೆ ಭಾರಿ ಬೇಡಿಕೆಯಿದೆ. ಇಂದು ಬೆಳಗ್ಗಿನ ಉಪಹಾರಕ್ಕೂ ಪಪ್ಪಾಯವನ್ನು ಸೇವಿಸಲಾಗುತ್ತಿದೆ. ರೈತರು 50 ಗಿಡ ಹಾಕಿಕೊಂಡರೂ ಕೂಡ ಉತ್ತಮ ಆದಾಯ ಪಡೆಯಬಹುದು ಎಂದು ತಿಳಿಸಿದರು.

ಪೊನ್ನಂಪೇಟೆಯ ಕೃಷಿಕ ರವಿಶಂಕರ್ ಮಾತನಾಡಿ 1970ರಲ್ಲಿ ಫ್ಯಾಷನ್ ಫ್ರೂಟ್ ಬೆಳೆದಿದ್ದೇವೆ. ಫ್ಯಾಷನ್ ಫ್ರೂಟ್ ನಲ್ಲಿ ಜ್ಯೂಸ್, ವೈನ್ ಮಾಡುತ್ತಾರೆ. ನಮ್ಮ ಬಳಿ ಹತ್ತು ತಳಿಯ ಫ್ಯಾಷನ್ ಫ್ರೂಟ್ ಬೆಳೆದಿದ್ದೇವೆ. ಕೊಡಗಿನಲ್ಲಿ ಎಲ್ಲ ಜಾತಿಯ ಹಣ್ಣುಗಳನ್ನೂ ಬೆಳೆಯಬಹುದು ಎಂದರು.

ಬೆಂಗಳೂರಿನ ಐಐಎಚ್ಆರ್ ವಿಜ್ಞಾನಿ ಶಂಕರನ್ ಮಾತನಾಡಿ ಸ್ವಾತಂತ್ರ್ಯದ ನಂತರ ಈ ಚೆಟ್ಟಳ್ಳಿ ಕೇಂದ್ರ ಆರಂಭವಾಗಿತ್ತು. ಈ ಕೇಂದ್ರದಲ್ಲಿ ರಾಂಬೂಟಾನ್, ಲಿಚ್ಚಿ, ಬೆಣ್ಣೆಹಣ್ಣು ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಬಗ್ಗೆ ಸಂಶೋಧನೆ ನಡೆಸಿ ಗಿಡಗಳನ್ನು ಮಾಡಿ ರೈತರಿಗೆ ನೀಡಲಾಗುತ್ತಿದೆ. 1958ರಲ್ಲಿ ಮೊದಲ ಬಾರಿಗೆ ಪಪ್ಪಾಯ ತಳಿ ಅಭಿವೃದ್ಧಿಪಡಿಸಲಾಯಿತು. ರೈತರು ತಮ್ಮ ಪ್ರದೇಶಕ್ಕೆ ಸೂಕ್ತವಾದ ತಳಿಗಳನ್ನು ರೈತರು ಆಯ್ಕೆ ಮಾಡಿಕೊಂಡು ರೈತರು ಬೆಳೆಯಬೇಕೆಂದು ಸಲಹೆ ನೀಡಿದರು.

ಕೇಂದ್ರದ ಮುಖ್ಯಸ್ಥ ಡಾ. ರಾಜೇಂದಿರನ್, ವಿಜ್ಞಾನಿಗಳಾದ ನಯನ್ ದೀಪಕ್, ರಾಣಿ, ಮುರುಳೀಧರ್ ಮತ್ತಿತರರು ಹಾಜರಿದ್ದರು. ಕೊಡಗಿನ ವಿವಿಧ ಕಡೆಯ ರೈತರಿಂದ 80 ಪಪ್ಪಾಯ, 40 ಫ್ಯಾಷನ್ ಫ್ರೂಟ್ ಪ್ರದರ್ಶನಕ್ಕೆ ಇಡಲಾಗಿದೆ. ಪಪ್ಪಾಯ ಕೃಷಿ ಮಾಡುವುದರಿಂದ ರೈತರು ಉತ್ತಮ ಆದಾಯ ಗಳಿಸಬಹುದು. ಪಪ್ಪಾಯ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಇದರಿಂದ ಸಾಕಷ್ಟು ಬಗೆಯ ಪದಾರ್ಥಗಳನ್ನು ಕೂಡ ಮಾಡಲಾಗುತ್ತಿದೆ. ಆದ್ದರಿಂದ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಪಪ್ಪಾಯ ಕೃಷಿ ಮಾಡಿದರೆ ಉತ್ತಮ ಆದಾಯ ಗಳಿಸಬಹುದು. -ಡಾ. ಶಂಕರನ್, ಹಣ್ಣಿನ ವಿಜ್ಞಾನಿ ಐಐಎಚ್ಆರ್ ಬೆಂಗಳೂರು.

ಫ್ಯಾಷನ್ ಫ್ರೂಟ್ ನಲ್ಲಿ ಎರಡು ತಳಿ ಮಾತ್ರವಿದೆ. ಒಂದು ಎಲ್ಲೋ ಹಾಗೂ ಮತ್ತೊಂದು ಪರ್ಪಲ್ ಬಣ್ಣದಿಂದ ಕೂಡಿರುತ್ತದೆ. ಇದು ಜ್ಯೂಸ್ ಹಣ್ಣು ಎಂದೇ ಕರೆಯಲಾಗುತ್ತದೆ. ಇದನ್ನು ವಾಣಿಜ್ಯ ಕೃಷಿಯಾಗಿ ಮಾಡಿದರೆ ರೈತರು ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು. ಕಾವೇರಿ ಉತ್ತಮ ತಳಿಯಾಗಿದೆ. -ನಯನ್ ದೀಪಕ್, ಹಣ್ಣಿನ ವಿಜ್ಞಾನಿ ಚೆಟ್ಟಳ್ಳಿ ಗರ್ವಾಲೆ ಫ್ಯಾಷನ್ ಫ್ರೂಟ್!ಪ್ರಗತಿಪರ ಕೃಷಿಕ ನಾಪಂಡ ಪೂಣ್ಣಚ್ಚ ಅವರು ಗರ್ವಾಲೆ ಫ್ಯಾಷನ್ ಫ್ರೂಟ್ ಪ್ರದರ್ಶನಕ್ಕಿಟ್ಟಿದ್ದರು. ಕೊಡಗಿನ ಹಣ್ಣು ಎಂದು ಇರುವುದು ಈ ಫ್ಯಾಷನ್ ಫ್ರೂಟ್ ಮಾತ್ರ. ಈ ಹಣ್ಣು ಸುವಾಸನೆಭರಿತವಾಗಿದ್ದು, ಹೆಚ್ಚಿನ ರುಚಿ ಕೂಡ ಹೊಂದಿದೆ. ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೆ ಉತ್ಪಾದನೆ ಕಡಿಮೆಯಿದೆ. ಆದ್ದರಿಂದ ಈ ತಳಿಯ ಗಿಡಗಳನ್ನು ಮಾಡಿ ವಾಣಿಜ್ಯ ಬೆಳೆಯಾಗಿ ಮಾಡಲು ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ನಾಪಂಡ ಪೂಣಚ್ಚ ಹೇಳುತ್ತಾರೆ.

Share this article